ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಏಪ್ರಿಲ್ 5ರಂದು 27ನೇ (Rashmika Mandanna Birthday Specia) ವಸಂತಕ್ಕೆ ಕಾಲಿಟ್ಟಿದ್ದಾರೆ. ಕೊನೆಯದಾಗಿ ತಮಿಳು ಚಲನಚಿತ್ರ ʻವಾರಿಸುʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ, ಹಳೆಯ ಸಂದರ್ಶನವೊಂದರಲ್ಲಿ ತನ್ನ ನಟನೆಯ ಮೊದಲ ಸಿನಿಮಾದ ಇಂಟ್ರಸ್ಟಿಂಗ್ ವಿಚಾರದ ಬಗ್ಗೆ ಬಗ್ಗೆ ಮಾತನಾಡಿದ್ದಾರೆ. ತನಗೆ ಬಂದ ಮೊದಲ ಆಫರ್ ತಮಾಷೆಯಾಗಿತ್ತು ಎಂದು ಹೇಳಿಕೊಂಡಿದ್ದಾರೆ. ʻʻಸೌಂದರ್ಯ ಸ್ಪರ್ಧೆಯನ್ನು ಗೆದ್ದ ನಂತರ, ನನಗೆ ಒಂದು ಮುಖ್ಯ ಪಾತ್ರಕ್ಕೆ ಆಫರ್ ಬಂತು. ಆದರೆ ಅದು ನಾನು ನಂಬಿರಲಿಲ್ಲ. ಪ್ರ್ಯಾಂಕ್ ಕಾಲ್ ಎಂದು ಭಾವಿಸಿ, ಆ ನಂಬರ್ ಬ್ಲಾಕ್ ಮಾಡಿದ್ದೆʼʼಎಂದು ರಶ್ಮಿಕಾ ಹಳೆಯ ನೆನಪನ್ನು ನೆನಪಿಸಿಕೊಂಡರು.
2016ರಲ್ಲಿ, ರಶ್ಮಿಕಾ ʻಕಿರಿಕ್ ಪಾರ್ಟಿʼಯಲ್ಲಿ (Kirik Party) ಮೊದಲ ಬಾರಿಗೆ ನಟಿಸಿದರು. ಇದು ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿದೆ. ಈ ಪಾತ್ರಕ್ಕಾಗಿ ಅತ್ಯುತ್ತಮ SIIMA (ಸೈಮಾ) ಪ್ರಶಸ್ತಿಯನ್ನು ಗೆದ್ದರು. 2017ರಲ್ಲಿ, ರಶ್ಮಿಕಾ ಎರಡು ಕನ್ನಡ ಚಿತ್ರಗಳಾದ ʻಅಂಜನಿ ಪುತ್ರʼ ಮತ್ತು ʻಚಮಕ್ʼನಲ್ಲಿ ಕಾಣಿಸಿಕೊಂಡರು. ಅಂದಿನಿಂದ ಅನೇಕ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ರಶ್ಮಿಕಾ ಮಾಧ್ಯಮವೊಂದರ ಸಂದರ್ಶನದಲ್ಲಿ “ಕಿರಿಕ್ ಪಾರ್ಟಿ ಚಿತ್ರತಂಡಕ್ಕೆ ಆಗ, ಪ್ರಬುದ್ಧ ಮುಖದ ಯುವತಿ ಬೇಕಾಗಿತ್ತು. ಪ್ರೊಡಕ್ಷನ್ ಹೌಸ್‌ನಿಂದ ನನಗೆ ಕರೆ ಬಂದಿತು, ಆದರೆ ಇದು ಪ್ರ್ಯಾಂಕ್ ಕಾಲ್ ಎಂದು ನಾನು ಭಾವಿಸಿದೆ. ಹಾಗಾಗಿ, ನಾನು ಅವರಿಗೆ ‘ನನಗೆ ಯಾವುದೇ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ಇಲ್ಲ ಸಾರ್, ದಯವಿಟ್ಟು ಫೋನ್ ಇಡಿ ಎಂದು ನಾನು ಆ ನಂಬರ್ ಅನ್ನು ಬ್ಲಾಕ್ ಮಾಡಿದೆʼʼಎಂದರು.
ರಶ್ಮಿಕಾ ಅವರು ನಂಬರ್ ಬ್ಲಾಕ್ ಮಾಡಿದ ನಂತರ, ಚಿತ್ರ ನಿರ್ಮಾಪಕರು ಸ್ನೇಹಿತರ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಈ ಬಗ್ಗೆ ನಟಿ ಮಾತು ಮುಂದುರಿಸಿ ʻʻಅವರು ಹಲವು ಬಾರಿ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಏಕೆಂದರೆ ಅವರು ನಿಜವಾಗಿಯೂ ನನ್ನನ್ನು ಭೇಟಿಯಾಗಲು ಬಯಸಿದ್ದರು. ಕೊನೆಗೆ ನನ್ನ ಕ್ಲಾಸ್ ಟೀಚರ್‌ಗೆ ಕರೆ ಮಾಡಿ, ಮಾತನಾಡಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಚಿತ್ರ ನಿರ್ಮಾಪಕರನ್ನು ಭೇಟಿಯಾದೆ. ನನಗೆ ಹೇಗೆ ನಟಿಸಬೇಕೆಂದು ತಿಳಿದಿರಲಿಲ್ಲ. ಕ್ಯಾಮೆರಾದಲ್ಲಿ ಕೆಲವು ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ ನಂತರ ಈ ಪಾತ್ರಕ್ಕೆ ನನ್ನನ್ನು ಫೈನಲ್ʼʼಮಾಡಿದರು ಎಂದರು.
ಇದನ್ನೂ ಓದಿ: Rashmika Mandanna: ವಿಜಯ್ ದೇವರಕೊಂಡ- ರಶ್ಮಿಕಾ ಸಂಬಂಧದ ಬಗ್ಗೆ ವದಂತಿಗಳು ಹುಟ್ಟಿಕೊಂಡದ್ದು ಹೇಗೆ?
ಕಳೆದ ವರ್ಷ, ತೆಲುಗು ಚಿತ್ರ ಪುಷ್ಪ: ದಿ ರೈಸ್ (2021) ಸಿನಿಮಾ ಪಾತ್ರಕ್ಕೆ ಹೆಸರುವಾಸಿಯಾದ ರಶ್ಮಿಕಾ, ಗುಡ್‌ಬೈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಕೂಡ ಕಾಣಿಸಿಕೊಂಡಿದ್ದರು. ವಿಕಾಸ್ ಬಹ್ಲ್ ನಿರ್ದೇಶಿಸಿದ ಮತ್ತು ಏಕ್ತಾ ಕಪೂರ್ ಅವರ ಬೆಂಬಲದೊಂದಿಗೆ, ಚಿತ್ರದಲ್ಲಿ ಸುನಿಲ್ ಗ್ರೋವರ್, ಪಾವೈಲ್ ಗುಲಾಟಿ, ಆಶಿಶ್ ವಿದ್ಯಾರ್ಥಿ, ಎಲ್ಲಿ ಅವ್ರಾಮ್, ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್, ಶಯಾಂಕ್ ಶುಕ್ಲಾ ಮತ್ತು ಅರುಣ್ ಬಾಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.