Site icon Vistara News

Mata Film |ʻಮಠ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಬೇಕುʼ : ಫಿಲ್ಮ್‌ ಚೇಂಬರ್‌ಗೆ ಪತ್ರ ಬರೆದ ಕಾಳಿಕಾ ಮಠದ ಋಷಿ ಕುಮಾರ ಸ್ವಾಮೀಜಿ!

Mata Film

ಬೆಂಗಳೂರು : ಗುರು ಪ್ರಸಾದ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ (Mata Film) ‘ಮಠ’ 2006ರಲ್ಲಿ ತೆರೆ ಕಂಡು ಸಾಕಷ್ಟು ಹೆಸರು ಗಳಿಸಿತ್ತು. ಇದೀಗ ಅದೇ ಹೆಸರಲ್ಲಿ 16 ವರ್ಷಗಳ ನಂತರ ಹೊಸದೊಂದು ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ʻಮಠʼ ಚಿತ್ರದ ಟ್ರೈಲರ್‌ ಬಿಡುಗಡೆಗೊಂಡಿದೆ. ಸಿನಿಮಾದಲ್ಲಿ ಮಠಗಳಿಗೆ ಮತ್ತು ಸ್ವಾಮೀಜಿಗಳಿಗೆ ಅವಮಾನಿಸಲಾಗಿದೆ ಎನ್ನುವ ಕಾರಣಕ್ಕಾಗಿ ಕಾಳಿಕಾ ಮಠದ ಋಷಿ ಕುಮಾರ ಸ್ವಾಮೀಜಿ ಗರಂ ಆಗಿದ್ದಾರೆ. ಮಠ ಸಿನಿಮಾ ಬಿಡುಗಡೆಗೆ ತಡೆಹಿಡಿಯಬೇಕೆಂದು ಋಷಿ ಕುಮಾರ ಸ್ವಾಮೀಜಿ ಫಿಲ್ಮ್‌ ಚೇಂಬರ್‌ಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?
ರವೀಂದ್ರ ವಂಶಿ ನಿರ್ದೇಶನದಲ್ಲಿ ತಯಾರಾಗಿರುವ ಈ ಸಿನಿಮಾದಲ್ಲಿ ಮೊದಲ ಮಠ ಸಿನಿಮಾ ಮಾಡಿದ್ದ ಗುರುಪ್ರಸಾದ್, ತಬಲಾ ನಾಣಿ, ಮಂಡ್ಯ ರಮೇಶ್ ಸೇರಿದಂತೆ ಹಲವರು ನಟಿಸಿದ್ದಾರೆ. ಫಿಲ್ಮ್‌ ಚೇಂಬರ್‌ಗೆ ಸ್ವಾಮಿಜಿ ಪತ್ರ ಬರೆದಿದ್ದು ʻʻʻಟ್ರೈಲರ್‌ ನೋಡುವಾಗ ಹಿಂದೂ ಧರ್ಮದ ಬಗ್ಗೆ, ಮಠಗಳ ಘನತೆಗೆ ಕುಂದುಬರುವಂತಹ ಅವಹೇಳನಕಾರಿ ಸಂಭಾಷಣೆ ದೃಶ್ಯಗಳಿರುವುದು ಕಂಡುಬಂದಿದ್ದು, ಚಿತ್ರದ ಬಿಡುಗಡೆಯನ್ನು ತಡೆಹಿಡಿಯಬೇಕು. ಹಾಗೇ ಚಿತ್ರತಂಡದವರು ಸ್ಪಷ್ಟಿಕರಣ ನೀಡುವವರೆಗೆ ಸಿನಿಮಾ ಬಿಡುಗಡೆ ನಿಲ್ಲಿಸಿ, ನ್ಯಾಯ ದೊರಕಿಸಿಕೊಡಿ ಎಂದುʼʼ ಸ್ವಾಮಿಜಿ ಮನವಿ ಮಾಡಿದ್ದಾರೆ.

Mata Film

ಈ ಹಿಂದೆ ಅಷ್ಟೇ ಸಿನಿಮಾ ಬಗ್ಗೆ ಕಾಳಿಕಾ ಮಠದ ಋಷಿ ಕುಮಾರ ಸ್ವಾಮಿಜಿ ಧ್ವನಿ ಎತ್ತಿದ್ದರು. ‘ತಾಕತ್ತು ಇದ್ದರೆ ಹಿಂದು ಗುರುಗಳ ಬದಲು, ಮೌಲಿಗಳ ಬಗ್ಗೆ ಸಿನಿಮಾ ಮಾಡಿ. ಇವರಿಗೆ ಹಿಂದು ಧರ್ಮಗುರುಗಳು ಟಾರ್ಗೆಟ್ ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದ್ದರು. ʻಮಠ ಸಿನಿಮಾದಲ್ಲಿ ಏನೆಲ್ಲ ಆವಾಂತರಗಳು ಆಗಿವೆ ಎನ್ನುವುದನ್ನು ನಾನು ಬಲ್ಲೆʼ ಎಂದಿದ್ದರು.

ಇದನ್ನೂ ಓದಿ | Kannada New Film | ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಟಿ ತಪಸ್ವಿನಿ ಪೂಣಚ್ಚ ಈಗ ಗಜರಾಮ ಸಿನಿಮಾಗೆ ನಾಯಕಿ

ಇದೇ ನವೆಂಬರ್‌ 18ಕ್ಕೆ ಚಿತ್ರ ತೆರೆಗೆ!
ನವೆಂಬರ್‌ 18ರಂದು ಚಿತ್ರ ಬಿಡುಗಡೆಗೊಳ್ಳುತ್ತಿದೆ. ಫಿಲಾಸಫಿಕಲ್ ಹಾಗೂ ಕಾಮಿಡಿ ಮಿಶ್ರಿತ ಕಥಾಹಂದರ ಸಿನಿಮಾದಲ್ಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರವೀಂದ್ರ ವೆಂಶಿ ‘ಪುಟಾಣಿ ಸಫಾರಿ’, ‘ವರ್ಣಮಯ’, ‘ವಾಸಂತಿ ನಲಿದಾಗ’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು ಈ ಬಾರಿ ‘ಮಠ’ ಮೂಲಕ ವಿಭಿನ್ನ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ.

Mata Film

ವಿ ಆರ್ ಕಂಬೈನ್ಸ್ ಬ್ಯಾನರ್‌ನಡಿ ಆರ್.ರಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಹು ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಸಂತೋಷ್ ದಾವಣಗೆರೆ ನಾಯಕ ನಟನಾಗಿ ನಟಿಸಿದ್ದಾರೆ. ಸಾಧುಕೋಕಿಲ, ರಮೇಶ್ ಭಟ್, ತಬಲ ನಾಣಿ, ಶರತ್ ಲೋಹಿತಾಶ್ವ, ಬ್ಯಾಂಕ್ ಜನಾರ್ದನ್‌, ರಾಜು ತಾಳಿಕೋಟೆ, ಮಂಡ್ಯ ರಮೇಶ್, ಗುರುಪ್ರಸಾದ್, ಬಿರಾದಾರ್ ಒಳಗೊಂಡ ತಾರಾಗಣವಿದೆ.

ಜೀವನ್ ಗೌಡ ಛಾಯಾಗ್ರಾಹಣ, ಸಿ. ರವಿಚಂದ್ರನ್ ಸಂಕಲನ, ಶ್ರೀ ಗುರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಯೋಗ ರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಚಿತ್ರದ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ.

ಇದನ್ನೂ ಓದಿ | Kannada New Film | ರವೀಂದ್ರ ವೆಂಶಿ ನಿರ್ದೇಶನದ ʻಮಠʼ ಟ್ರೈಲರ್‌ ಔಟ್‌: ನವೆಂಬರ್ 18ಕ್ಕೆ ತೆರೆಗೆ!

Exit mobile version