ಬೆಂಗಳೂರು/ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ (Renuka Swamy murder) ಪ್ರಕರಣ ಸಂಬಂಧ ತನಿಖೆಯು ಚುರುಕುಗೊಂಡಿದೆ. ಭಾನುವಾರ ಆರೋಪಿಗಳ ಮನೆಯಲ್ಲಿ ಸ್ಥಳ ಮಹಜರು ಪ್ರಕ್ರಿಯೆಯನ್ನು ನಡೆಸಲಾಯಿತು. ಚಿತ್ರದುರ್ಗದಲ್ಲಿ ಬೆಂಗಳೂರು ಪೊಲೀಸರಿಂದ ಸ್ಥಳ ಮಹಜರು ವೇಳೆ ರೇಣುಕಾಸ್ವಾಮಿ ಕಿಡ್ನ್ಯಾಪ್‌ಗೆ ಬಳಸಿದ್ದ ಆಟೋವನ್ನು ಸೀಜ್ ಮಾಡಲಾಯಿತು. ಜತೆಗೆ ಆರೋಪಿ ರವಿ ಮನೆ ಬಳಿ ಇದ್ದ ಟೊಯೊಟಾ ಇಟಿಯೋಸ್ ಕಾರನ್ನು ಜಪ್ತಿ ಮಾಡಲಾಗಿದೆ. ಭೀಕರವಾಗಿ ಕೊಂದರೂ ಆರೋಪಿಗಳಿಗೆ ಪಾಪಪ್ರಜ್ಞೆ ಕಾಡುತ್ತಿಲ್ವಾ? ಅಥವಾ ಪ್ರಭಾವಿಗಳ ಬೆಂಬಲ ಇದೆ ಎಂಬಂತೆ ನಗುತ್ತಲೇ ಪವಿತ್ರಾ ಗೌಡ ಹಾಗೂ ಪವನ್ ಮನೆಯಿಂದ ಹೊರಬಂದಿದ್ದಾರೆ.
ಪವಿತ್ರಾಗೌಡ ಮನೆಯಲ್ಲಿ ಸತತ 3 ಗಂಟೆಗಳ ಕಾಲ ಪರಿಶೀಲನೆ
ಬೆಂಗಳೂರಿನ ಆರ್‌ಆರ್ ನಗರದಲ್ಲಿ ಕಳೆದ 10 ವರ್ಷಗಳಿಂದ ಪವಿತ್ರಾಗೌಡ ವಾಸವಿದ್ದು, ಭಾನುವಾರ ಅವರ ನಿವಾಸದಲ್ಲಿ ಪೊಲೀಸರು ಸ್ಥಳ ಮಹಜರ್ ಮಾಡಿದರು. ಪವಿತ್ರಾ ಜೂನ್ 9 – 10ರಂದು ಎಲ್ಲಿದ್ದರು? ಎಷ್ಟೊತ್ತಿಗೆ ಮನೆಯಿಂದ ತೆರಳಿದ್ದರು ಎಂಬುದನ್ನು ತಿಳಿಯಲು ಸಿಸಿಟಿವಿ ಪರಿಶೀಲನೆ ನಡೆಸಲಾಯಿತು.
ಪವಿತ್ರಾಗೌಡ ಇರುವ ಮನೆಯು ಡುಪ್ಲೆಕ್ಸ್ ಆಗಿದ್ದು ಒಟ್ಟು ಮೂರು ಮಹಡಿ ಇದೆ. ಇದರಲ್ಲಿ ಕೆಳಗಡೆ ಪಾರ್ಕಿಂಗ್ ಜಾಗದೊಂದಿಗೆ ಪವನ್ ವಾಸಕ್ಕೆ ಮನೆಯೊಂದು ಇದೆ. ಪವನ್ ಪವಿತ್ರಾ ಗೌಡಗೆ ಮನೆ ಕೆಲಸಗಾರ ಜತೆಗೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ. ಆಗಾಗ ದರ್ಶನ್ ಈ ಮನೆಗೆ ಫಾರ್ಚುನರ್ ಕಾರಿನಲ್ಲಿ ಬರುತ್ತಿದ್ದರು ಎನ್ನಲಾಗಿದೆ. ಅಕ್ಕಪಕ್ಕ ಮನೆಯವರ ಜತೆ ಪವಿತ್ರಾಗೆ ಸಂಪರ್ಕವೇ ಇರಲಿಲ್ಲ. ಪವಿತ್ರಾ ವೊಲ್ಸ್ ವ್ಯಾಗೆನ್ ಮತ್ತು ರೇಂಜ್ ರೋವರ್ ಕಾರಿನಲ್ಲಿ ಓಡಾಡುತ್ತಿದ್ದಳು ಎನ್ನಲಾಗಿದೆ. ಇನ್ನೂ ಪವಿತ್ರಾ ಗೌಡ ಮಗಳು ಹಾಸ್ಟೆಲ್‌ನಲ್ಲಿ ಇದ್ದು, ಆಗಾಗ ಬಂದು ಹೋಗುತ್ತಿದ್ದಳು.
ಗುಸು ಗುಸು ಮಾತು, ನಗುತ್ತಲೇ ಮಹಜರ್ ಪ್ರಕ್ರಿಯೆಯಲ್ಲಿ ಭಾಗಿ
ಪವಿತ್ರಾಗೌಡ ಜತೆಗೆ ಪವನ್‌ನನ್ನು ಸ್ಥಳ ಮಹಜರಿಗೆ ಕರೆತರಲಾಗಿತ್ತು. ಈ ವೇಳೆ ಇಬ್ಬರು ಗುಸು ಗುಸು ಎಂದು ಮಾತನಾಡುತ್ತಿರುವುದು ಕಂಡು ಬಂತು. ಪವನ್ ನಗು ನಗುತ್ತಲೇ ಮಹಜರ್ ಪ್ರಕ್ರಿಯೆಯಲ್ಲಿ ಭಾಗಿಯಾಗಿ, ಪ್ರಭಾವಿಗಳ ರಕ್ಷಣೆಯ ವಿಶ್ವಾಸ ತೋರಿದಂತೆ ಇತ್ತು. ಅತ್ತ ಸತತ ಮೂರು ಗಂಟೆಗಳ ಮಹಜರ್ ಪ್ರಕ್ರಿಯೆ ನಂತರ ಹೊರ ಬಂದ ಪವಿತ್ರ ಗೌಡ ಕೂಡ ನಗುಮುಖದಲ್ಲೇ ಪೊಲೀಸ್ ವ್ಯಾನ್ ಹತ್ತಿದ್ದರು.
ಎಫ್‌ಎಸ್‌ಎಲ್ ತಂಡದಿಂದ ಮಹತ್ತರ ಸಾಕ್ಷಿಗಳ ಸಂಗ್ರಹ ಮಾಡಿ, ಎರಡು ಬಟ್ಟೆಗಂಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸ್ಥಳ ಮಹಜರು ಮುಗಿಸಿದ ಬಳಿಕ ಪವಿತ್ರಗೌಡ ಹಾಗೂ ಪವನ್‌ನನ್ನು ವಾಪಸ್ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತರಲಾಯಿತು.
ಇತ್ತ ಎ5 ಆರೋಪಿ ನಂದೀಶ್‌ನನ್ನು ಪಟ್ಟಣಗೆರೆ ಶೆಡ್‌ನಿಂದ ನೇರವಾಗಿ ದರ್ಶನ್ ಮನೆಗೆ ಕರೆತಂದು ಪರಿಶೀಲನೆ ಮಾಡಲಾಯಿತು. ಈ ವೇಳೆ ನಂದೀಶ್ ಶೂ ಮತ್ತೆ ಬಟ್ಟೆಯನ್ನು ಜಪ್ತಿ ಮಾಡಲಾಯಿತು. ಸ್ಥಳ ಮಹಜರಿಗಾಗಿ ಆರೋಪಿ ವಿನಯ್ ಜತೆಗೆ ನಿಖಿಲ್‌ನನ್ನು ಅವರ ಮನೆಯಲ್ಲಿ ಕರೆದುಕೊಂಡು ಹೋಗಲಾಗಿತ್ತು. ಕೃತ್ಯ ನಡೆದ ದಿನ ಧರಿಸಿದ್ದ ಬಟ್ಟೆ , ಶೂ ಇನ್ನಿತರ ವಸ್ತುಗಳ ರಿಕವರಿಗಾಗಿ ಮುಂದಾದರು.
ಚಿತ್ರದುರ್ಗದಲ್ಲೂ ಸ್ಥಳ ಮಹಜರು
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆ ತಂದು ಸ್ಥಳ ಮಹಜರು ಮಾಡಲಾಯಿತು. ರೇಣುಕಾ ಸ್ವಾಮಿ ಕೊಲೆ ಆರೋಪಿಗಳಾದ ರಘು, ರವಿ, ಅನು, ಜಗ್ಗನ ಕರೆ ತರಲಾಯಿತು. ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ನಗರದ ಮಹಾವೀರ ನಗರದಲ್ಲಿರುವ ಜಗ್ಗ ಅಲಿಯಾಸ್ ಜಗದೀಶ್ ಮನೆಯನ್ನು ಪರಿಶೀಲನೆ ನಡೆಸಿದರು. ಗೋವಿಂದರಾಜ ನಗರ ಪೊಲೀಸ್ ಇನ್‌ಸ್ಪೆಕ್ಟರ್ ಸುಬ್ರಹ್ಮಣ್ಯ ನೇತೃತ್ವದಲ್ಲಿ ಮಹಜರು ನಡೆಸಲಾಯಿತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ