ಬೆಂಗಳೂರು: ಪುನೀತ್ ಪರ್ವ (Puneeth Parva) ಕಾರ್ಯಕ್ರಮದಲ್ಲಿ ಭಾಗವಹಿಸಿದ ಯಶ್, ಅವರ ಜತೆ ಕಳೆದ ಹಲವು ನೆನಪುಗಳನ್ನು ಮೆಲುಕು ಹಾಕಿದರು. “ಒಂದು ವರ್ಷದ ಹಿಂದೆ, ಹತ್ತಿರ ಹತ್ತಿರ ಇದೇ ದಿನ, ನಾನು, ಅಪ್ಪು ಸರ್, ಶಿವಣ್ಣ ವೇದಿಕೆ ಮೇಲೆ ಡಾನ್ಸ್ ಮಾಡುತ್ತಿದ್ದೆವು. ಅದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ತುಂಬ ದಿನದ ನಂತರ ಅಪ್ಪು ಸರ್ ಸಿಕ್ಕಿದ್ದರು. ಇಬ್ಬರೂ ತುಂಬ ಮಾತನಾಡಿದೆವು. ಆದರೆ, ಅವರು ಈಗ ಇಲ್ಲ ಎಂದರೆ ನಂಬಲು ಆಗಲ್ಲ” ಎಂದು ಹೇಳಿದರು.
“ಅಪ್ಪು ಅವರು ಮಾಡುತ್ತಿದ್ದ ಡಾನ್ಸ್, ಫೈಟ್ ನೋಡಿ, ನಾವೂ ಈ ರೀತಿ ಮಾಡಬೇಕು ಎಂದು ಸಿನಿಮಾರಂಗಕ್ಕೆ ತುಂಬ ಜನ ಬಂದಿದ್ದೇವೆ. ಈಗ ಏನು ಮಾತನಾಡಬೇಕು ಎಂಬುದು ಗೊತ್ತಿಲ್ಲ. ನನ್ನ ಜೀವನದಲ್ಲಿ ಅಪ್ಪು ಸರ್ ಘಟನೆ ತುಂಬ ಪರಿಣಾಮ ಬೀರಿದೆ. ಜೀವನದಲ್ಲಿ ಸಾಧಿಸಬೇಕು ಎಂದು ಓಡುತ್ತಿರುತ್ತೇವೆ. ಅದುವೇ ಜೀವನ ಆಗಿದೆ. ಭರವಸೆಯೇ ಬದುಕಿನ ಮೂಲದ್ರವ್ಯ ಎನ್ನುತ್ತಾರೆ. ಆದರೆ, ಎರಡೇ ಸೆಕೆಂಡ್‌ಗಳಲ್ಲಿ ಜೀವನ ಮುಗಿದರೆ ಆತಂಕ ಮೂಡುತ್ತದೆ. ಅಭಿಮಾನಿ ದೇವರುಗಳು ಇದ್ದಾರಲ್ಲ, ಅವರು ಎಲ್ಲರಿಗೂ ಹುಮ್ಮಸ್ಸು ನೀಡುತ್ತಾರೆ. ಅದೇ ಎಲ್ಲರಿಗೂ ದಾರಿದೀಪವಾಗಿದೆ” ಎಂದು ತಿಳಿಸಿದರು.
“ಡಾ.ರಾಜಕುಮಾರ್ ಅವರು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಪುನೀತ್ ರಾಜಕುಮಾರ್ ಅವರು ಜನಿಸಿದರು. ಅವರು ಕುಟುಂಬದಲ್ಲಿ ತುಂಬ ಪ್ರೀತಿ ಪಡೆದರು. ಅದೇ ರೀತಿ, ಕರ್ನಾಟಕದ ಜನ ಅವರಿಗೆ ಪ್ರೀತಿ ನೀಡಿದ್ದಾರೆ. ಅವರು ತುಂಬ ಒಳ್ಳೆಯ ಯೋಗದಲ್ಲಿ ಜನಿಸಿದ ವ್ಯಕ್ತಿ. ಮಗುವಾಗಿ ಇದ್ದಾಗಿನ ನಗು ಕೊನೆಯ ದಿನಗಳವರೆಗೂ ಇತ್ತು. ಬದುಕು, ಸಿನಿಮಾ, ಉದ್ಯಮದ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಸ್ಟಾರ್‌ಡಮ್ ಅನ್ನು ಬದಿಗಿಟ್ಟು, ಒಬ್ಬ ಮನುಷ್ಯ ಆಗಬೇಕು ಎಂದು ಬದುಕಿದ್ದರು. ಪ್ರೀತಿಸಿದವರನ್ನೇ ಮದುವೆಯಾಗಿದ್ದಾರೆ. ಒಳ್ಳೆಯ ಗಂಡ, ಸ್ನೇಹಿತ, ತಂದೆಯಾಗಿದ್ದಾರೆ. ಹಾಗಾಗಿ, ಅವರ ಜೀವನ ಮಾದರಿಯಾಗಿದೆ” ಎಂದರು.
25 ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ಘೋಷಿಸಿದ ಯಶ್
ನಟ ಪ್ರಕಾಶ್ ರೈ ಅವರು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ನೀಡುವ ಯೋಜನೆಗೆ ಯಶ್ ಕೈ ಜೋಡಿಸಿದ್ದಾರೆ. ಪ್ರಕಾಶ್ ರೈ ಅವರ ಕನಸಿನಂತೆ ಎಲ್ಲ ಜಿಲ್ಲೆಗಳಿಗೆ ಆಂಬ್ಯುಲೆನ್ಸ್ ನೀಡಲಾಗುತ್ತಿದೆ. ಇನ್ನೂ 25 ಜಿಲ್ಲೆಗಳಿಗೆ ನನ್ನ ಯಶೋಮಾರ್ಗದ ಮೂಲಕ ಆಂಬ್ಯುಲೆನ್ಸ್‌ಗಳನ್ನು ನೀಡುತ್ತೇನೆ ಎಂದು ಯಶ್ ಘೋಷಿಸಿದರು.
ಅಪ್ಪು ಜೀವನ ಎಲ್ಲರಿಗೂ ಮಾದರಿ ಎಂದ ಸೂರ್ಯ
“ನನ್ನ ಪ್ರೀತಿಯ ಸಹೋದರ ನಮ್ಮೆಲ್ಲರನ್ನೂ ನೋಡುತ್ತಾರೆ ಎಂದೇ ಭಾವಿಸುತ್ತೇನೆ. ಮೈಸೂರಿನ ಸುಜಾತ ಹೋಟೆಲ್‌ನಲ್ಲಿ ನಾನು ಅಪ್ಪು ಅವರನ್ನು ಮೊದಲ ಬಾರಿ ಭೇಟಿಯಾದೆ. ಅವರು ನಾನು ಇದುವರೆಗೆ ಭೇಟಿಯಾದ ವಿನಮ್ರ, ಮಾನವತೆ ಗುಣವುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಸಿನಿಮಾ ಮಾಡುವ ಜತೆಗೆ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅಪ್ಪು ವ್ಯಕ್ತಿತ್ವವೇ ಅಮೋಘವಾಗಿದೆ. ಹೇಗೆ ಜೀವನ ನಡೆಸಬೇಕು, ಯಾವುದನ್ನು ಬಿಟ್ಟು ಹೋಗಬೇಕು, ಸಮಾಜಕ್ಕೆ ಏನು ನೀಡಬೇಕು ಎಂಬುದಕ್ಕೆ ನನ್ನ ಸಹೋದರ ಅಪ್ಪು ಉದಾಹರಣೆಯಾಗಿದ್ದಾರೆ. ಅಪ್ಪು ಪತ್ನಿ ಅಶ್ವಿನಿ ಅವರೂ ಪುನೀತ್ ದಾರಿಯಲ್ಲೇ ಸಾಗುತ್ತಿದ್ದಾರೆ” ಎಂದು ತಮಿಳು ನಟ ಸೂರ್ಯ ಹೇಳಿದರು.
ಅಪ್ಪು ಅಗಲಿದ ಬಳಿಕ ಐದಾರು ತಿಂಗಳು ನಿದ್ದೆ ಇಲ್ಲ: ಪ್ರಕಾಶ್ ರೈ
ಅಪ್ಪುವಿನಿಂದಾಗಿ ಹಲವು ವಿಷಯ ಘಟಿಸಿವೆ. ಅಪ್ಪು ಅವರನ್ನು ಕಳೆದುಕೊಂಡಾಗ ನಾಲ್ಕೈದು ತಿಂಗಳು ನನಗೆ ನಿದ್ದೆ ಬರುತ್ತಿರಲಿಲ್ಲ. ಅಪ್ಪು ಗಂಧದ ಗುಡಿಯಲ್ಲಿರುವ ಒಬ್ಬ ಹೆಮ್ಮರದಂತೆ ಇದ್ದಾರೆ. ಆ ಹೆಮ್ಮರದ ರೆಂಬೆ ಕೊಂಬೆಗಳು ಚಾಚಿಕೊಂಡಿವೆ. ಅಪ್ಪು ಅವರ ಬಗ್ಗೆ ಹೊಗಳುವುದಕ್ಕಿಂತ, ಅಪ್ಪು ಅವರ ಹೆಸರಿನಲ್ಲಿ ಸಮಾಜ ಕಾರ್ಯ ಮಾಡಬೇಕು” ಎಂದು ಹೇಳಿದರು.
“ಇತ್ತೀಚೆಗೆ ಶಿವಣ್ಣನ ಮನೆಗೆ ಹೋದೆ. ಶಿವಣ್ಣ ನನಗೊಂದು ಕನಸಿದೆ. ಅಪ್ಪು ಬಗ್ಗೆ ಮಾತನಾಡುತ್ತಲೇ ಇದ್ದೇವೆ. ಆದರೆ, ಆ ಪರಂಪರೆಯನ್ನು ಮುಂದುವರಿಸಬೇಕು. ಕರ್ನಾಟಕದ ಎಲ್ಲ ಅಪ್ಪು ಎಕ್ಸ್‌ಪ್ರೆಸ್ ಎಂಬ ಆಂಬ್ಯುಲೆನ್ಸ್ ಓಡಬೇಕು ಎಂದೆ. ಎಲ್ಲ ಜಿಲ್ಲೆಗಳಲ್ಲಿ ಓಡಬೇಕು ಎಂದೆ. ಅದಕ್ಕೆ ಶಿವಣ್ಣ ಪ್ರತಿಕ್ರಿಯಿಸಿ, ನೀವೊಬ್ಬರೇ ಏಕೆ, ನಾನೂ ಒಂದು ಆಂಬ್ಯುಲೆನ್ಸ್ ಕೊಡುತ್ತೇನೆ ಎಂದರು. ತಮಿಳು ನಟ ಸೂರ್ಯ ಅವರು ನನ್ನ ಯೋಚನೆ ಬಗ್ಗೆ ತಿಳಿದರು. ಸೂರ್ಯ ಹೇಳಿದರು, ನಿಮಗಷ್ಟೇ ಅಪ್ಪು ಆಸ್ತಿ ಅಲ್ಲ, ನನಗೂ ಆಸ್ತಿ. ನಾನೂ ಒಂದು ಆಂಬುಲೆನ್ಸ್ ಕೊಡುತ್ತೇನೆ ಎಂದರು. ನಟ ಚಿರಂಜೀವಿ ಅವರೂ ಒಂದು ಆಂಬುಲೆನ್ಸ್ ಕೊಡುತ್ತೇನೆ ಎಂದು ತಿಳಿಸಿದರು. ಒಬ್ಬ ವ್ಯಕ್ತಿ ಎಷ್ಟು ಎತ್ತರ ಬೆಳೆಯುತ್ತಾನೆ ಎಂಬುದರ ಜತೆಗೆ ಅವರು ಬೇರೆಯವರನ್ನೂ ಬೆಳೆಸಿದರು. ಹಾಗಾಗಿ, ಅವರು ತುಂಬ ಎತ್ತರ ಬೆಳೆದಿದ್ದಾರೆ” ಎಂದು ವಿವರಿಸಿದರು.
“ಏನಿದು ಗಂಧದ ಗುಡಿ? ಅಪ್ಪುಗೆ ಯಾವಾಗ ಕಾಡು ನೋಡಬೇಕು ಎಂದು ಎನಿಸಿತು? ಅಪ್ಪು ಒಬ್ಬ ಪ್ರಕೃತಿ ಪ್ರೇಮಿ. ಇದನ್ನು ಅವರು ನನ್ನ ಬಳಿಯೂ ಹೇಳಿದ್ದರು. ಒಂದು ಕಾಡನ್ನು ಉಳಿಸಲು ಹೊರಡುವುದು ಸುಲಭವಾದ ಕೆಲಸ ಅಲ್ಲ. ಕಾಡು ಎಂದರೆ ಪಾರ್ಕ್‌ಗೆ ಹೋದಹಾಗೆ ಅಲ್ಲ. ಅಪ್ಪು ಒಂದು ವರ್ಷ ಕಾಡಲ್ಲಿ ಸುತ್ತಾಡಿದ್ದಾರೆ. ಇದು ಅಪ್ಪು ಅವರ ಜೀವನ ಪ್ರೀತಿಯನ್ನು ತೋರಿಸುತ್ತದೆ. ಪುನೀತ್ ಅವರು ಕಾಡು ಸುತ್ತಾಡಿದ ಸಾರ್ಥಕತೆ ಈಗ ಗಂಧದ ಗುಡಿಯಾಗಿ ಹೊರಬಂದಿದೆ. ಗಂಧದ ಗುಡಿ ಸಿನಿಮಾ ಅಲ್ಲ, ಅದು ಅಪ್ಪುವಿನ ಕೊನೆಯ ಕನಸು. ಆ ಕನಸನ್ನು ನಾವು ನಿಜ ಮಾಡಬೇಕು. ಅವರ ಸ್ಫೂರ್ತಿಯ ದಾರಿಯಲ್ಲಿ ಸಾಗಬೇಕು” ಎಂದು ಕರೆ ನೀಡಿದರು.
ಅಪ್ಪು ಪರೋಪಕಾರಿ: ಸಾಯಿ ಕುಮಾರ್
ಪುನೀತ್ ರಾಜಕುಮಾರ್ ಅವರು ಪರೋಪಕಾರಿ. ಅಪ್ಪು ಗಂಧದ ಗುಡಿಯ ತಿಲಕ. ಇದು ಪ್ರೀತಿಯ ಸೆಲೆಬ್ರೇಷನ್ ಆಗಿದೆ. ಎಲ್ಲರೂ ಅವರ ಆಶಯಗಳನ್ನು ರೂಢಿಸಿಕೊಳ್ಳೋಣ. ಅಪ್ಪು ಅವರ ಜತೆ ಕಳೆದ ಒಂದೊಂದು ಕ್ಷಣವೂ ಅಮೂಲ್ಯ” ಎಂದರು.
ಅಪ್ಪು ದೇವತಾ ಮನುಷ್ಯ ಎಂದ ನಿಖಿಲ್
ಪುನೀತ ಪರ್ವಕ್ಕೆ ಆಗಮಿಸುವುದು ಕನ್ನಡಿಗರ ಕರ್ತವ್ಯ. ಅಶ್ವಿನಿ ಅಕ್ಕ ನನಗೆ ಕರೆ ಮಾಡಿದಾಗ, ನೀವು ಕರೆಯದಿದ್ದರೂ ನಾನು ಬರುತ್ತೇನೆ ಎಂದೆ. ಅಪ್ಪು ಸರ್ ಅವರು ದಾನ ಧರ್ಮ ಮಾಡಿದರು. ಹಾಗೆಯೇ, ಒಂದು ಕೈಯಲ್ಲಿ ಕೊಟ್ಟಿದ್ದನ್ನು ಇನ್ನೊಂದು ಕೈಗೆ ಗೊತ್ತಾಗಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು ದೇವತಾ ಮನುಷ್ಯ” ಎಂದು ಹೇಳಿದರು.
ಇದನ್ನೂ ಓದಿ | Puneeth Parva | ಬೊಂಬೆ ಹೇಳುತೈತೆ ಎಂದು ಹಾಡಿದ ಶಿವಣ್ಣ, ವೇದಿಕೆ ಮೇಲೆ ಅಶ್ವಿನಿ ಪುನೀತ್ ಕಣ್ಣೀರು