Site icon Vistara News

Oscars 2023 ಗೆದ್ದ RRR ಸಿನಿಮಾದ ನಾಟು ನಾಟು ಹಾಡು ಚಿತ್ರೀಕರಣ ಆಗಿದ್ದ ಜಾಗ ಈಗ ಯುದ್ಧದ ಸ್ಥಳ!

RRR Movie

ಹೈದರಾಬಾದ್:‌ ರಾಜಮೌಳಿ ನಿರ್ದೇಶನದ ʼಆರ್‌ಆರ್‌ಆರ್‌ʼ ಸಿನಿಮಾದ (RRR Movie) ʼನಾಟು ನಾಟುʼ ಹಾಡು ಗೋಲ್ಡನ್‌ ಗ್ಲೋಬ್‌ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವುದರ ಜತೆಗೆ ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್(Oscars 2023) ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ. ಅಂದ ಹಾಗೆ ಈ ಹಾಡು ಚಿತ್ರೀಕರಣ ಅತ್ಯಂತ ವಿಶೇಷ. ಏಕೆಂದರೆ ಈ ಹಾಡು ಚಿತ್ರೀಕರಣವಾಗಿದ್ದ ಆ ಜಾಗ ಈಗ ಒಂದು ರೀತಿಯಲ್ಲಿ ಯುದ್ಧ ಭೂಮಿ. ಯಾವುದು ಆ ಜಾಗ? ಏನಿದರ ಕಥೆ ಎಂದು ತಿಳಿಯಲು ಮುಂದೆ ಓದಿ.

ಇದನ್ನೂ ಓದಿ: RRR Golden Globe Award | ʼಆರ್‌ಆರ್‌ಆರ್‌ʼಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ತಂದುಕೊಟ್ಟ ಎಂ ಎಂ ಕೀರವಾಣಿ ಹಿನ್ನೆಲೆ ಗೊತ್ತಾ?

ಆರ್‌ಆರ್‌ಆರ್‌ ಸಿನಿಮಾದ ಸಂಪೂರ್ಣ ಚಿತ್ರೀಕರಣವಾದ ಮೇಲೆ ಕೊನೆಯದಾಗಿ ನಾಟು ನಾಡು ಹಾಡಿನ ಚಿತ್ರೀಕರಣ ಮಾಡಲಾಗಿತ್ತು. ಉಕ್ರೇನ್‌ನ ಮುಖ್ಯ ನಗರವಾದ ಕೀವ್‌ನಲ್ಲಿರುವ ಮರಿನ್ಸ್ಕಿ ಅರಮನೆಯಲ್ಲಿ ಈ ಹಾಡಿನ ಚಿತ್ರೀಕರಣವಾಗಿದೆ. ವಿಶೇಷವೆಂದರೆ ಈ ಅರಮನೆ ಉಕ್ರೇನ್‌ನ ಸರ್ಕಾರಕ್ಕೆ ಸಂಬಂಧಿಸಿದ್ದಾಗಿದ್ದು, ಅಲ್ಲಿನ ಅಧ್ಯಕ್ಷರಾದ ವೊಲೊಡಿಮಿರ್‌ ಝೆಲೆನ್ಸ್ಕಿ ಅವರು ಇದೇ ಅರಮನೆಯಲ್ಲಿ ವಾಸವಿರುತ್ತಾರೆ. ಅವರ ಅನುಮತಿಯನ್ನು ಪಡೆದು, ಅದೇ ಮನೆಯಲ್ಲಿ ಹಾಡಿನ ಸಂಪೂರ್ಣ ಚಿತ್ರೀಕರಣ ಮಾಡಲಾಗಿತ್ತು. ಈ ವಿಚಾರವನ್ನು ನಿರ್ದೇಶಕ ರಾಜಮೌಳಿ ಅವರು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಝೆಲೆನ್ಸ್ಕಿ ಅವರು ಅಧ್ಯಕ್ಷರಾಗುವುದಕ್ಕೂ ಮೊದಲು ತೆರೆ ಮೇಲೆ ಬಣ್ಣ ಹಚ್ಚಿ ನಟಿಸುತ್ತಿದ್ದರಿಂದಾಗಿ ನಮಗೆ ಚಿತ್ರೀಕರಣಕ್ಕೆ ಅವಕಾಶ ಸಿಕ್ಕಿತು ಎಂದು ಹೇಳಿದ್ದರು.


ನಾಟು ನಾಟು ಹಾಡಿನ ಚಿತ್ರೀಕರಣ 2021ರ ಆಗಸ್ಟ್‌ನಲ್ಲಿ ನಡೆದಿತ್ತು. ನವೆಂಬರ್‌ನಲ್ಲಿ ಹಾಡಿನ ಲಿರಿಕಲ್‌ ವಿಡಿಯೋ ಬಿಡುಗಡೆಯಾಗಿತ್ತು. ಅದಾಗಿ ಮೂರೇ ತಿಂಗಳುಗಳಲ್ಲಿ, ಅಂದರೆ 2022ರ ಫೆಬ್ರವರಿಯಲ್ಲಿ ರಷ್ಯಾ ಉಕ್ರೇನ್‌ನ ಮೇಲೆ ದಾಳಿ ನಡೆಸಲಾರಂಭಿಸಿತು. ಅರಮನೆಯಿರುವ ಕೀವ್‌ ನಗರವಂತೂ ರಷ್ಯಾದ ದಾಳಿಗೆ ಗುರಿಯಾಗಿ, ಅಲ್ಲಿದ್ದ ಜನರೆಲ್ಲರೂ ಊರು ಬಿಡುವಂತಾಯಿತು. ಉಕ್ರೇನ್‌ ಮತ್ತು ರಷ್ಯಾ ಪರಸ್ಪರ ದಾಳಿ ನಡೆಸಿಕೊಳ್ಳಲಾರಂಭಿಸಿದ್ದು, ಇಂದಿಗೂ ಆ ದಾಳಿ ಮುಂದುವರಿದಿದೆ.

ಇದನ್ನೂ ಓದಿ: RRR Movie | ಆರ್‌ಆರ್‌ಆರ್‌ ಚಿತ್ರಕ್ಕೆ ಸೆಲೆಬ್ರಿಟಿಗಳಿಂದ ಶುಭ ಹಾರೈಕೆಯ ಸುರಿಮಳೆ!
ಯೋಧನಿಗೆ ಸಹಾಯ ಮಾಡಿದ್ದ ರಾಮ್‌ಚರಣ್‌

ಆರ್‌ಆರ್‌ಆರ್‌ ತಂಡ ಉಕ್ರೇನ್‌ನಲ್ಲಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾಗ ಅಲ್ಲಿನ ಸರ್ಕಾರ ಕೆಲವು ಯೋಧರನ್ನು ಚಿತ್ರತಂಡಕ್ಕೆ ಬಾಡಿಗಾರ್ಡ್‌ಗಳನ್ನಾಗಿ ನಿಯೋಜಿಸಿತ್ತು. ಆದರೆ ರಷ್ಯಾ ಆಕ್ರಮಣ ಆರಂಭವಾದ ನಂತರ ಆ ಯೋಧರ ಬದುಕು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿತ್ತು. ಯಾವುದೇ ಔಷಧ, ಅಗತ್ಯ ಸಾಮಾಗ್ರಿಗಳು ಸಿಗದೆ ಒದ್ದಾಡುವಂತಾಗಿತ್ತು. ಈ ವೇಳೆ ತಮಗೆ ಬಾಡಿಗಾರ್ಡ್‌ ಆಗಿ ಕೆಲಸ ಮಾಡಿದ್ದ ಯೋಧನಿಗೆ ನಟ ರಾಮ್‌ಚರಣ್‌ ಸಹಾಯ ಹಸ್ತ ಚಾಚಿದ್ದರು. ಔಷಧಿಗಳು ಹಾಗೂ ಅಗತ್ಯ ಸಾಮಾಗ್ರಿಗಳನ್ನು ಆ ಯೋಧನಿಗೆ ಕಳುಹಿಸಿಕೊಟ್ಟಿದ್ದರು. ರಾಮ್‌ಚರಣ್‌ ಅವರಿಗೆ ಧನ್ಯವಾದ ತಿಳಿಸಿ ಯೋಧ ಮಾಡಿದ್ದ ವಿಡಿಯೋ ಎಲ್ಲೆಡೆ ಹರಿದಾಡಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.

Exit mobile version