ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ (RRR MOVIE) 2023ರ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಅವಾರ್ಡ್‌ನ ಎರಡು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಇಂಗ್ಲಿಷ್ ಹೊರತಾದ ಭಾಷೆಯ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ಹಾಡು (ನಾಟು ನಾಟು) ವಿಭಾಗಗಳಲ್ಲಿ ನಾಮಾಂಕಿತಗೊಂಡಿದೆ.
ಇದಕ್ಕಾಗಿ ಪ್ರೇಕ್ಷಕರಿಗೆ ಧನ್ಯವಾದ ಹೇಳಿರುವ ನಿರ್ದೇಶಕ ರಾಜಮೌಳಿ, ಗೋಲ್ಡನ್ ಗ್ಲೋಬ್ ಪುರಸ್ಕಾರಕ್ಕೆ ತಮ್ಮ ಚಿತ್ರ ನಾಮಾಂಕಿತಗೊಂಡಿರುವ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವಿಷಯವನ್ನು ಜ್ಯೂ. ಎನ್‌ಟಿಆರ್ ಸಹ ಹೇಳಿಕೊಂಡಿದ್ದಾರೆ. ʻಆರ್‌ಆರ್‌ಆರ್ʼನ ಸೋಷಿಯಲ್ ಮೀಡಿಯಾದ ಅಧಿಕೃತ ಪುಟದಲ್ಲೂ ಚಿತ್ರತಂಡ ಈ ವಿಷಯವನ್ನು ಹಂಚಿಕೊಂಡಿದೆ.
ಆಸ್ಕರ್ 2023ರ ಬೇರೆಬೇರೆ 15 ವಿಭಾಗಗಳಲ್ಲಿ ಆರ್‌ಆರ್‌ಆರ್ ಸ್ಪರ್ಧೆಗೆ ಪ್ರಯತ್ನಿಸುತ್ತಿದೆ. ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ನಟಿ, ಅತ್ಯುತ್ತಮ- ಹಾಡು, ಸ್ಕ್ರೀನ್‌ಪ್ಲೇ, ಸಂಕಲನ, ಸಿನೆಮಾಟೋಗ್ರಫಿ, ವಸ್ತ್ರವಿನ್ಯಾಸ, ಮೇಕಪ್ ಮುಂತಾದ ಒಟ್ಟು 15 ವಿಭಾಗಗಳಲ್ಲಿ ಸ್ಪರ್ಧೆಗೆ ಪ್ರಯತ್ನ ನಡೆದಿದೆ. ಈಗಾಗಲೇ ಕೆಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಚಿತ್ರಕ್ಕೆ ಮನ್ನಣೆ ಪ್ರಾಪ್ತವಾಗಿದೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಸರ್ಕಲ್ ಅವಾರ್ಡ್‌ನಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ಅಟ್ಲಾಂಟ ಫಿಲ್ಮ್ ಕ್ರಿಟಿಕ್ ಅವಾರ್ಡ್‌ನಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಿತ್ರ ಪ್ರಶಸ್ತಿಯನ್ನು ಆರ್‌ಆರ್‌ಆರ್ ಮುಡಿಗೇರಿಸಿಕೊಂಡಿದೆ.
ಆರ್‌ಆರ್‌ಆರ್ ಚಿತ್ರ ಗಳಿಕೆಯ ವಿಚಾರದಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈವರೆಗೆ 1200 ಕೋಟಿ ರೂ. ಗಳಿಸಿದೆ.
ಜಪಾನ್‌ನಲ್ಲಿ ರಜನಿಕಾಂತ್ ಚಿತ್ರದ ದಾಖಲೆ ಮುರಿದ ಆರ್‌ಆರ್‌ಆರ್!
ವಿಶ್ವದ ಎಲ್ಲೆಡೆ ಈಗ ಭಾರತೀಯ ಸಿನೆಮಾಗಳದ್ದೇ ಮಾತು. ನಿರ್ದೇಶಕ ಎಸ್. ಎಸ್. ರಾಜಮೌಳಿ ಅವರ ಮಹತ್ವಾಕಾಂಕ್ಷೆಯ ʻಆರ್‌ಆರ್‌ಆರ್ʼ ಚಿತ್ರ ಈಗ ಹಲವಾರು ದೇಶಗಳಲ್ಲಿ ಸುದ್ದಿ ಮಾಡುತ್ತಿದೆ. ಕಳೆದ ಅಕ್ಟೋಬರ್ 21ರಂದು ಜಪಾನ್‌ನಲ್ಲಿ ಬಿಡುಗಡೆಗೊಂಡಿದ್ದ ಈ ಚಿತ್ರ, ಅಲ್ಲಿಯೂ ಗಳಿಕೆಯಲ್ಲಿ ಹೊಸ ದಾಖಲೆ ಸೃಷ್ಟಿಸುತ್ತಿದೆ.
ರಜನೀಕಾಂತ್ ಅವರ ʻಮುತ್ತುʼ ಚಿತ್ರದ ಗಳಿಕೆಯೇ ಕಳೆದ 24 ವರ್ಷಗಳಿಂದ ನಂಬರ್ 1 ಸ್ಥಾನದಲ್ಲಿತ್ತು. 40 ಕೋಟಿ ಜಪಾನ್ ಯೆನ್ ಗಳಿಕೆ ಅದರದ್ದಾಗಿತ್ತು. ಆದರೀಗ ʻಆರ್‌ಆರ್‌ಆರ್ʼ ಚಿತ್ರ ಆ ದಾಖಲೆಯನ್ನೂ ಹಿಂದಿಕ್ಕಿದ್ದು, 40.3 ಕೋಟಿ ಜಪಾನ್ ಯೆನ್ ದಾಟಿದೆ. ರಾಮ್ ಚರಣ್, ಜ್ಯೂ. ಎನ್‌ಟಿಆರ್, ಅಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ನಟಿಸಿರುವ ಈ ಚಿತ್ರ ಈವರೆಗೆ ಜಪಾನ್‌ನಲ್ಲಿ ಅತಿಹೆಚ್ಚು ಆದಾಯ ಗಳಿಸಿದ ಭಾರತೀಯ ಚಲನಚಿತ್ರ ಎಂಬ ಗರಿಯನ್ನು ಹೊತ್ತಿದೆ.
ಇದನ್ನೂ ಓದಿ | Shahrukh Khan | ʻಪಠಾಣ್ʼ ಸಿನಿಮಾ ಸಾಂಗ್ ಔಟ್: ಸಖತ್ ಹಾಟ್ ಆಗಿ ಮಿಂಚಿದ ದೀಪಿಕಾ ಪಡುಕೋಣೆ!