Site icon Vistara News

Salaar Movie: ಎಷ್ಟೇ ಪ್ಲಾಪ್‌ ಆದರೂ ಒಂದು ಹಿಟ್‌ ಸಾಕು; ಶಾರುಖ್‌ರಂತೆ ಪ್ರಭಾಸ್‌ ಎಂದ ನೀಲ್‌!

Salaar Director prashanth neel

ಬೆಂಗಳೂರು: ಕೆಜಿಎಫ್‌ʼ ಸರಣಿ ಮತ್ತು ʼಕಾಂತಾರʼ ಚಿತ್ರಗಳ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ ವಿಜಯ್‌ ಕಿರಗಂದೂರು ಮಾಲೀಕತ್ವದ ಹೊಂಬಾಳೆ ಫಿಲ್ಮ್ಸ್ (Hombale Films) ಇದೀಗ ʼಸಲಾರ್‌ʼ ಚಿತ್ರದ ಬಿಡುಗಡೆಯ ತಯಾರಿಯಲ್ಲಿದೆ. ಪ್ರಶಾಂತ್‌ ನೀಲ್‌ ಮತ್ತು ಪ್ರಭಾಸ್‌ ಮೊದಲ ಬಾರಿಗೆ ಒಂದಾಗುತ್ತಿರುವ ಈ ಚಿತ್ರದ ಬಗ್ಗೆ ಬೆಟ್ಟದಷ್ಟು ನಿರೀಕ್ಷೆ ಇದೆ. 2014ರ “ಉಗ್ರಂ” ಸಿನಿಮಾದೊಂದಿಗೆ (Salaar Movie) ನಿರ್ದೇಶನಕ್ಕೆ ಇಳಿದರು ಪ್ರಶಾಂತ್‌ ನೀಲ್‌. ಸಂದರ್ಶನವೊಂದರಲ್ಲಿ ಪ್ರಶಾಂತ್‌ ನೀಲ್‌ ಹಲವು ವಿಚಾರಗಳನ್ನು ತೆರೆದಿಟ್ಟರು. ನಾನು ಸಿನಿಮಾಗಳನ್ನು ಮಾಡುವಾಗ ಪ್ಯಾನ್-ಇಂಡಿಯಾ ಯೋಜನೆಗಳಾಗಿ ಎಂದಿಗೂ ಯೋಜಿಸುವುದಿಲ್ಲ ಎಂದು ಹೇಳಿದರು. ಹಾಗೇ ಶಾರುಖ್‌ ಅವರ ರೀತಿ ಪ್ರಭಾಸ್‌ ಕೂಡ ಹಿಟ್‌ ಸಿನಿಮಾ ಕೊಡುತ್ತಾರೆ ಎಂದರು.

ಸಲಾರ್ ಪ್ಯಾನ್-ಇಂಡಿಯಾ ಸಿನಿಮಾ ಎಂತಾದರೆ ನಮಗೆಲ್ಲರಿಗೂ ಬೋನಸ್

ಪ್ರಶಾಂತ್‌ ನೀಲ್‌ ಮಾತನಾಡಿ ʻʻನಾನು ಒಂದು ಕಥೆಯನ್ನು ಬರೆದು ಇಡುತ್ತೇನೆ. ಬಳಿಕ ಅದನ್ನು ಕಾರ್ಯಗತಗೊಳಿಸುತ್ತೇನೆ. ಇದು (‘ಸಲಾರ್’) ಪ್ಯಾನ್-ಇಂಡಿಯಾ ಚಲನಚಿತ್ರವಾಗುತ್ತದೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಪ್ಯಾನ್-ಇಂಡಿಯಾ ಸಿನಿಮಾ ಎಂತಾದರೆ, ಅದು ನಮಗೆಲ್ಲರಿಗೂ ಬೋನಸ್ʼʼಎಂದರು.

ʻʻಆರ್ಗಾನಿಕ್ ಆಗಿ ಸಿನಿಮಾಗಳು ಮೂಡಿಬಂದರೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಸಲಾರ್‌ನಲ್ಲಿ ಇಬ್ಬರು ಸ್ನೇಹಿತರಾದ ದೇವ ಮತ್ತು ವರ್ಧ ಅವರ ಕಥೆ ಇದೆ. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರು ಈ ಪಾತ್ರದಲ್ಲಿ ನಟಿಸಿದ್ದಾರೆ. ಬಳಿಕ ಅವರೇ ಪ್ರತಿಸ್ಪರ್ಧಿಗಳಾಗುತ್ತಾರೆʼʼಎಂದರು.

ನನ್ನ ತಲೆಯಲ್ಲಿದ್ದ ಕಲ್ಪನೆ ಸಿನಿಮಾವಿದು!

ʻʻಈ ಸಿನಿಮಾ ಕತೆ ನನ್ನ ತಲೆಯಲ್ಲಿದ್ದ ಕಲ್ಪನೆ. ಆದರೆ ಅದಕ್ಕೆ ಬಹಳ ದೊಡ್ಡ ಬಜೆಟ್ ಬೇಕಿತ್ತು. ಹಾಗಾಗಿ ನನ್ನ ಮೊದಲ ಸಿನಿಮಾ ‘ಉಗ್ರಂ’, ನಂತರ ‘ಕೆಜಿಎಫ್’ ಸಿನಿಮಾ ಮಾಡಿದೆ. ಸುಮಾರು ಎಂಟು ವರ್ಷಗಳ ಕಾಲ ‘ಕೆಜಿಎಫ್’ನಲ್ಲಿ ತೊಡಗಿಸಿಕೊಂಡಿದ್ದೆ. ಕೋವಿಡ್‌ ಸಮಯದಲ್ಲಿ, ನಾನು ಈ ಸಲಾರ್‌ ಬಗ್ಗೆ ಪ್ರಭಾಸ್ ಅವರ ಬಳಿ ಹೇಳಿದ್ದೆ. ಬಳಿಕ ಈ ಸಿನಿಮಾ ಮಾಡಲು ಒಪ್ಪಿಕೊಂಡರುʼʼಎಂದರು. ಪ್ರಶಾಂತ್‌ ನೀಲ್‌ ಅವರ ಪ್ರಕಾರ, ಬಿಗ್ ಬಜೆಟ್ ಚಿತ್ರಗಳಲ್ಲಿ ಕಥೆ ಮತ್ತು ಪಾತ್ರಗಳಿಗೆ ಸಮಾನ ಪ್ರಾಮುಖ್ಯತೆ ನೀಡಬೇಕು.

ಯಾವತ್ತೂ ಒತ್ತಡ ಇರಲಿಲ್ಲ

“ನಾವು ಒಂದು ಕಥೆಯನ್ನು ಹೇಳಲು ಸಿನಿಮಾವನ್ನು ಮಾಡುತ್ತೇವೆ. ಪ್ರತಿ ಪಾತ್ರವನ್ನು ಚಿತ್ರಿಸಲು ಸರಿಯಾದ ಪಾತ್ರಗಳು ಮತ್ತು ಸರಿಯಾದ ನಟರನ್ನು ನಾವು ಹುಡುಕಲು ಶುರು ಮಾಡುತ್ತೇವೆ. ನಮಗೆ ಬೇಕಾದ ಸಿನಿಮಾಗಳನ್ನು ಮಾಡಲು ನಾವು ದೊಡ್ಡ ಬಜೆಟ್‌ಗಳನ್ನು ಪಡೆಯುತ್ತೇವೆʼʼಎಂದರು.

ʻʻ’ಸಲಾರ್’ ಮಾಡಲು ಯಾವತ್ತೂ ಒತ್ತಡ ಇರಲಿಲ್ಲ. ನಟ ಪಾತ್ರದಂತೆ ಕಾಣುವಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ. ನೀವು ಪ್ರಭಾಸ್ ಅವರನ್ನು ಪ್ರಭಾಸ್ ಆಗಿ ತೋರಿಸಲು ಬಯಸುವುದಿಲ್ಲ, ನೀವು ಅವರನ್ನು ಪಾತ್ರವಾಗಿ ತೋರಿಸಲು ಬಯಸುತ್ತೀರಿ. ಅಂತಹದನ್ನು ಮಾಡಲು ನಾನು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆ, ”ಎಂದು ಅವರು ಹೇಳಿದರು.

ಇದನ್ನೂ ಓದಿ: Salaar Movie: ಸಲಾರ್‌ ಶೋ ಹೌಸ್​ಫುಲ್; ಪ್ರಿ ಬುಕ್ಕಿಂಗ್‌​ಗೆ ಭರ್ಜರಿ ರೆಸ್ಪಾನ್ಸ್

ಶಾರುಖ್ ಖಾನ್ ತರ!

“ಪ್ರಭಾಸ್ ದೊಡ್ಡ ಸ್ಟಾರ್. ‘ಬಾಹುಬಲಿ’ ನಂತರ ದೊಡ್ಡ ಸ್ಟಾರ್ ಆದರು. ನಕ್ಷತ್ರಗಳು ಯಾವುತ್ತೂ ನಕ್ಷತ್ರಗಳೇ ಆಗಿರುತ್ತದೆ. ಒಂದು ಫ್ಲಾಪ್ ಅಥವಾ 20 ಫ್ಲಾಪ್‌ ಸಿನಿಮಾಗಳನ್ನು ನೀಡರಬಹುದು. ಆದರೆ ಒಂದು ಹಿಟ್‌ ಸಿನಿಮಾ ಸಾಕು, ಮತ್ತೆ ಮೇಲೆ ಏಳಲು. ಇತ್ತೀಚೆಗೆ, ಶಾರುಖ್ ಖಾನ್ ಅದನ್ನು ಮಾಡಿ ತೋರಿಸಿದ್ದಾರೆ. ಸ್ಟಾರ್ ಯಾವಾಗಲೂ ಸ್ಟಾರ್ ಎಂದು ತೋರಿಸಿದರು. ಅದನ್ನು ಅಲ್ಲಗಳೆಯುವಂತಿಲ್ಲ ”ಎಂದು ನೀಲ್ ಹೇಳಿದರು.

“ಸಿನಿಮಾ ಸಿದ್ಧವಾದ ನಂತರ ಮುಂದೆ ಏನಾಗುತ್ತದೆ ಎಂಬ ಲಾಜಿಸ್ಟಿಕ್ಸ್‌ನಲ್ಲಿ ನಾನು ತೊಡಗಿಸಿಕೊಳ್ಳುವುದಿಲ್ಲ. ನಾನು ನಿರ್ದಿಷ್ಟ ಬಜೆಟ್‌ನಲ್ಲಿ ಸಿನಿಮಾವನ್ನು ಮಾಡಬೇಕು ಮತ್ತು ಅವರು ಬಿಡುಗಡೆ ಮಾಡಲು ಬಯಸುವ ಸಮಯದಲ್ಲಿ ನಾನು ಸಿನಿಮಾವನ್ನು ಅವರಿಗೆ ನೀಡಬೇಕುʼʼ ಎಂದರು. ʻಜನರು ಯಾವಾಗಲೂ ಯಾವುದೇ ಟ್ರೈಲರ್‌ ಅಥವಾ ಟೀಸರ್‌ನಲ್ಲಿ ಅತ್ಯಂತ ಮಾನವೀಯ ವಿಷಯವನ್ನು ನೋಡಲು ಬಯಸುತ್ತಾರೆ. ಈ ರೀತಿಯ ಅಂಶಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲು ಪ್ರಯತ್ನಿಸುತ್ತೇವೆʼʼಎಂದರು.

ಇದನ್ನೂ ಓದಿ: Salaar Movie: ʻಸಲಾರ್‌ʼ ಫಸ್ಟ್‌ ಸಾಂಗ್‌ ಔಟ್‌; ಗೆಳೆತನ ಸಂಭ್ರಮಿಸುವ ಹೊತ್ತಿದು!

ʼಸಲಾರ್‌ʼ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಡಿಸೆಂಬರ್ 15ರಂದು ಶುರುವಾಗಿತ್ತು. ಪ್ರಭಾಸ್‌ ಚಿತ್ರ ತನ್ನ ಆರಂಭಿಕ ದಿನದಂದು 5.99 ಕೋಟಿ ರೂ. ಗಳಿಸಿದೆ. ಸಲಾರ್‌ʼ ಚಿತ್ರದ ಟಿಕೆಟ್ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ಲಭ್ಯವಿದೆ. ಪ್ರಶಾಂತ್‌ ನೀಲ್‌ ʼಸಲಾರ್‌ʼ ಚಿತ್ರವನ್ನು ನಿರ್ದೇಶಿಸಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೆ ಸತತ ಸೋಲುಗಳಿಂದ ಕಂಗೆಟ್ಟಿರುವ ಪ್ರಭಾಸ್‌ ವೃತ್ತಿ ಜೀವನಕ್ಕೆ ಇದು ತಿರುವು ನೀಡಲಿದೆ ಎಂದೇ ಹೇಳಲಾಗುತ್ತಿದೆ. ಪೃಥ್ವಿರಾಜ್‌, ಶ್ರುತಿ ಹಾಸನ್‌ ಮತ್ತತರರು ಮುಖ್ಯ ಪಾತ್ರದಲ್ಲಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

Exit mobile version