ಬೆಂಗಳೂರು: ಈ ವರ್ಷದ ಬಹು ನಿರೀಕ್ಷಿತ ಚಿತ್ರ ಸಲಾರ್: ಭಾಗ 1-ಸೀಸ್‌ಫೈರ್ (Salaar: Part 1 – Ceasefire)ನ ಟ್ರೈಲರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕೆಜಿಎಫ್ (KGF) ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ ಈ ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ಕಾದು ನಿಂತಿದ್ದಾರೆ. ಅದಕ್ಕೆ ತಕ್ಕಂತೆ ಟ್ರೈಲರ್ ಮೂಡಿ ಬಂದಿದ್ದು, ನಿರೀಕ್ಷೆ ಹೆಚ್ಚಿಸಿದೆ.
ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಈ ಚಿತ್ರದಲ್ಲಿ ಅಬ್ಬರಿಸಿರುವುದು ಟ್ರೈಲರ್ ಮೂಲಕ ಕಂಡು ಬಂದಿದೆ. ಜತೆಗೆ ಮಾಲಿವುಡ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕೂಡ ಮಿಂಚು ಹರಿಸಿದ್ದಾರೆ. ರವಿ ಬಸ್ರೂರ್ ಸಂಗೀತ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. ಛಾಯಾಗ್ರಾಹಕ ಭವನ್ ಗೌಡ್ ‘ಸಲಾರ್’ನ ಬೇರೆಯದೇ ಪ್ರಪಂಚವನ್ನು ಕಟ್ಟಿಕೊಟ್ಟಿದ್ದಾರೆ. ಖಾನ್‌ಸಾರ್ ಸಾಮ್ರಾಜ್ಯದಲ್ಲಿ ಕಥೆ ನಡೆಯಲಿದೆ.
ಸ್ನೇಹದ ಕಥೆ ಎಂದ ಪ್ರಶಾಂತ್ ನೀಲ್
ಇತ್ತೀಚೆಗೆ ಚಿತ್ರದ ಬಗ್ಗೆ ಮಾತನಾಡಿದ್ದ ಪ್ರಶಾಂತ್ ನೀಲ್ ಸಲಾರ್ ಚಿತ್ರದಲ್ಲಿ ಸ್ನೇಹವೇ ಪ್ರಮುಖ ತಿರುಳು ಎಂದಿದ್ದರು. ʼʼಇದು ಸ್ನೇಹಿತರಿಬ್ಬರು ಶತ್ರುಗಳಾಗುವ ಕಥೆಯನ್ನು ಒಳಗೊಂಡಿದೆ. ಸ್ನೇಹವೇ ʼಸಲಾರ್ʼನ ಪ್ರಮುಖ ಭಾವನೆ. ಡಿಸೆಂಬರ್ 1ರಂದು ಬಿಡುಗಡೆಯಾಗುವ ಟ್ರೈಲರ್‌ನಲ್ಲಿ ʼಸಲಾರ್ʼ ಪ್ರಪಂಚದ ಚಿಕ್ಕ ಪರಿಚಯ ನಿಮಗಾಗಲಿದೆʼʼ ಎಂದು ಸುಳಿವು ನೀಡಿ ಕುತೂಹಲ ಹೆಚ್ಚಿಸಿದ್ದರು.
“ಸಲಾರ್‌ನಿಂದ ಪ್ರೇಕ್ಷಕರು ಮತ್ತೊಂದು ʼಕೆಜಿಎಫ್ʼ ಅನ್ನು ನಿರೀಕ್ಷಿಸಬಾರದು. ಯಾಕೆಂದರೆ ʼಸಲಾರ್ʼ ತನ್ನದೇ ಆದ ಜಗತ್ತು, ಅದಕ್ಕೆ ತನ್ನದೇ ಆದ ಭಾವನೆ ಮತ್ತು ಪಾತ್ರಗಳಿವೆ. ʼಸಲಾರ್ʼನ ಮೊದಲ ದೃಶ್ಯದಿಂದಲೇ ನಾವು ಬೇರೆಯದೇ ಪ್ರಪಂಚಕ್ಕೆ ಕೊಂಡೊಯ್ಯಲಿದ್ದೇವೆʼʼ ಎಂದು ಪ್ರಶಾಂತ್ ನೀಲ್ ಈ ಹಿಂದಿನ ಸಂದರ್ಶನದಲ್ಲಿ ತಿಳಿಸಿದ್ದರು. ʼʼಸಲಾರ್ʼನ ಕಥೆಯನ್ನು ಸುಮಾರು 6 ಗಂಟೆಗಳ ಚಲನಚಿತ್ರವನ್ನಾಗಿಸಬಹುದು. ಅದಕ್ಕಾಗಿ ಎರಡು ಪಾರ್ಟ್ ಮಾಡಿದ್ದೇನೆʼʼ ಎಂದು ಅವರು ಹೇಳಿದ್ದರು.
Prashanth Neel: ʼಸಲಾರ್ʼ ಬಿಗ್ ಅಪ್‌ಡೇಟ್; ಕಥೆಯ ಗುಟ್ಟು ಬಿಟ್ಟುಕೊಟ್ಟ ಪ್ರಶಾಂತ್ ನೀಲ್!
ʼಕೆಜಿಎಫ್ʼ ಸರಣಿ ಚಿತ್ರಗಳನ್ನು ನಿರ್ಮಿಸಿದ್ದ ಫಿಲ್ಮ್ಸ್ ನ ವಿಜಯ್ ಕಿರಂಗದೂರು ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ತೆಲುಗು ಮಾತ್ರವಲ್ಲದೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲೂ ಈ ಚಿತ್ರ ತೆರೆಕಾಣಲಿದೆ. ಶ್ರುತಿ ಹಾಸನ್, ಜಗಪತಿ ಬಾಬು ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
2014ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ತೆರೆಕಂಡ ಮುರಳಿ-ಹರಿಪ್ರಿಯಾ ಅಭಿನಯದ ʼಉಗ್ರಂʼ ಚಿತ್ರ ನಿರ್ದೇಶನದ ಮೂಲಕ ಪ್ರಶಾಂತ್ ನೀಲ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುವ ಜತೆಗೆ ವಿಮರ್ಶಕರ ಮೆಚ್ಚುಗೆಯೂ ಗಳಿಸಿತ್ತು. ಬಳಿಕ ಅವರು ರಾಕಿಂಗ್ ಸ್ಟಾರ್ ಯಶ್ ಜತೆ ʼಕೆಜಿಎಫ್ʼ ಚಿತ್ರ ಮಾಡುವ ಮೂಲಕ ತೆರೆ ಮೇಲೆ ಮ್ಯಾಜಿಕ್ ಸೃಷ್ಟಿಸಿದ್ದರು. ʼಉಗ್ರಂʼ ಚಿತ್ರ ಕೂಡ ಸ್ನೇಹಿತರಿಬ್ಬರ ಕಥೆಯನ್ನೊಳಗೊಂಡಿತ್ತು. ಇತ್ತ ʼಕೆಜಿಎಫ್ʼನಲ್ಲಿ ತಾಯಿ-ಮಗನ ಸೆಂಟಿಮೆಂಟ್ ಗಮನ ಸೆಳೆದಿತ್ತು. ʼಸಲಾರ್ ಪಾರ್ಟ್ 1ʼ ಡಿಸೆಂಬರ್ 22ರಂದು ವಿಶ್ವಾದ್ಯಂತ ತೆರೆ ಕಾಣಲಿದ್ದು, ದಾಖಲೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ