Site icon Vistara News

Salman Khan: ಸಲ್ಮಾನ್‌ ಖಾನ್‌ ಮನೆ ಎದುರು ಫೈರಿಂಗ್‌ ಕೇಸ್‌; ಐದನೇ ಆರೋಪಿಯ ಬಂಧನ

Salman Khan

Salman Khan

ಮುಂಬೈ: ಇತ್ತೀಚೆಗೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ (Salman Khan) ನಿವಾಸದ ಎದುರು ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಕ್ರೈಂ ಬ್ರ್ಯಾಂಚ್‌ ಐದನೇ ಆರೋಪಿಯನ್ನು ಬಂಧಿಸಿದ್ದಾರೆ. ʼʼರಾಜಸ್ತಾನದ ಮೊಹಮ್ಮದ್‌ ಚೌಧರಿಯನ್ನು ಬಂಧಿಸಲಾಗಿದ್ದು, ಈತ ಇಬ್ಬರು ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಅವರಿಗೆ ಹಣ ನೀಡಿದ್ದ ಮಾತ್ರವಲ್ಲ ಅವರು ಸ್ಥಳದಿಂದ ಪರಾರಿಯಾಗಲು ನರೆವಾಗಿದ್ದʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊಹಮ್ಮದ್‌ ಚೌಧರಿಯನ್ನು ಇಂದು (ಮಂಗಳವಾರ) ಮುಂಬೈಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆಗಾಗಿ ಆತನನ್ನು ವಶಕ್ಕೆ ನೀಡುವಂತೆ ಮನವಿ ಸಲ್ಲಿಸಲಾಗುವುದು ಎಂದು ಮುಂಬೈ ಕ್ರೈಂ ಬ್ರ್ಯಾಂಚ್‌ ತಿಳಿಸಿದೆ.

ಎಪ್ರಿಲ್‌ 14ರಂದು ಮುಂಬೈಯ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿ ನಡೆದಿತ್ತು. ದಾಳಿ ನಡೆಸಿದ್ದ ಶೂಟರ್‌ಗಳಾದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಎಂಬ ಇಬ್ಬರು ದುಷ್ಕರ್ಮಿಗಳನ್ನು ಬಳಿಕ ಅರೆಸ್ಟ್‌ ಮಾಡಲಾಗಿತ್ತು. ಮುಂಬೈ ಪೊಲೀಸರು ಜೈಲಿನಲ್ಲಿರುವ ಗ್ಯಾಂಗ್​ಸ್ಟರ್ ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಕಿರಿಯ ಸಹೋದರ ಅನ್ಮೋಲ್ ಬಿಷ್ಣೋಯ್ ಅವರನ್ನು ಈ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಘೋಷಿಸಿದ್ದರು.

ಈ ಮಧ್ಯೆ ಗುಂಡಿನ ದಾಳಿ ನಡೆಸಿದ್ದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದ್ದ ಆರೋಪ ಎದುರಿಸುತ್ತಿದ್ದ ಅನೂಜ್‌ ಥಾಪನ್‌ ಕೆಲವು ದಿನಗಳ ಹಿಂದೆ ಪೊಲೀಸ್‌ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆತ ಕೊನೆಯುಸಿರೆಳೆದಿದ್ದ. ಅನುಜ್ ಥಾಪನ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಆತನ ಕುಟುಂಬ ಇದರ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು. ಲಾಕಪ್‌ನಲ್ಲಿ ಥಾಪನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರೆ ಆತನ ತಾಯಿ ಇದು ಕೊಲೆ ಎಂದು ಆರೋಪಿಸಿದ್ದರು.

ಗುಂಡಿನ ದಾಳಿಗೆ ಕಾರಣವೇನು?

ಹಲವು ವರ್ಷಗಳ ಹಿಂದಿನ ಕೃಷ್ಣಮೃಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಅವರನ್ನು ಕೊಲ್ಲುವುದಾಗಿ 2018 ರಲ್ಲಿ ಬೆದರಿಕೆ ಹಾಕಿದ ನಂತರ ಬಿಷ್ಣೋಯ್ ಅವರ ಸಹಾಯಕರಲ್ಲಿ ಒಬ್ಬನನ್ನು ಬಂಧಿಸಲಾಯಿತು. ಜೋಧಪುರ್​ನ ಬಿಷ್ಣೋಯ್​ಗಳು ಕೃಷ್ಣಮೃಗವನ್ನು ತಮ್ಮ ಧಾರ್ಮಿಕ ಗುರು ಭಗವಾನ್ ಜಂಬೇಶ್ವರ ಅವರ ಪುನರ್ಜನ್ಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ಕೃಷ್ಣಮೃಗ ಕೊಲ್ಲುವುದನ್ನು ಬಿಷ್ಣೋಯ್​ಗಳು ಎಂದಿಗೂ ಸಹಿಸುವುದಿಲ್ಲ. ಈ ಕಾರಣಕ್ಕೆ ಸಲ್ಮಾನ್ ಖಾನ್ ಹತ್ಯೆ ಮಾಡಲು ಲಾರೆನ್ಸ್ ಬಿಷ್ಣೋಯ್ ನಿರ್ಧರಿಸಿದ್ದ. ಎಬಿಪಿ ನ್ಯೂಸ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, ʻʻಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿ. ಸಲ್ಮಾನ್‌ ಅವರು ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆʼʼ ಎಂದು ಹೇಳಿದ್ದ.

ಇದನ್ನೂ ಓದಿ: Salman Khan: ಸಲ್ಮಾನ್‌ ಖಾನ್‌ ಮನೆ ಹೊರಗೆ ಗುಂಡಿನ ದಾಳಿ; ಶಂಕಿತರ ಫೋಟೊ ಬಿಡುಗಡೆ ಮಾಡಿದ ಪೊಲೀಸರು

ʼʼಸಲ್ಮಾನ್ ಖಾನ್ ಕ್ಷಮೆಯಾಚಿಸಿದರೆ, ಈ ವಿಷಯ ಕೊನೆಗೊಳ್ಳುತ್ತದೆ. ಸಲ್ಮಾನ್ ಅಹಂಕಾರಿ, ಗಾಯಕ ಮೂಸೆವಾಲಾ ಕೂಡ ಹಾಗೇ ಇದ್ದ. ಸಲ್ಮಾನ್ ಖಾನ್‌ನ ಅಹಂ ರಾವಣನಿಗಿಂತ ದೊಡ್ಡದಾಗಿದೆ. ಸಲ್ಮಾನ್ ಖಾನ್ ಬಗ್ಗೆ ನಮ್ಮ ಸಮಾಜದಲ್ಲಿ ಕೋಪವಿದೆ. ಅವರು ನನ್ನ ಸಮಾಜವನ್ನು ಅವಮಾನಿಸಿದರು. ಅವರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಅವರು ಕ್ಷಮೆ ಕೇಳಲಿಲ್ಲʼʼ ಎಂದು ಲಾರೆನ್ಸ್ ಬಿಷ್ಣೋಯ್ ಹೇಳಿದ್ದ.

Exit mobile version