Site icon Vistara News

Sanchari Vijay birthday | ನೆನಪಿನ ದೋಣಿಯಲ್ಲಿ ವಿಜಯ್‌ ಸಂಚಾರ

Sanchari Vijay

ಬೆಂಗಳೂರು : ನಟ ಸಂಜಾರಿ ವಿಜಯ್‌ ಭಾನುವಾರ (ಜು.17) ಹುಟ್ಟುಹಬ್ಬದ ದಿನ. ಆದರೆ ಸಂಚಾರಿ ವಿಜಯ್‌ (Sanchari Vijay) ಕೇವಲ 37ನೇ ವಯಸ್ಸಿಗೆ ಬಾರದ ಲೋಕಕ್ಕೆ ಹೋಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್‌ ನಟನೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಹೊಂದಿದವರು.

ಜನುಮದಿನಕ್ಕೆ ನಾಟಕಗಳ ಉತ್ಸವ

ಜನುಮದಿನದ ಪ್ರಯುಕ್ತ, ವಿಜಯ್‌ ಅವರಿಗೆ ಸಂಚಾರಿ ಎಂಬ ಬಿರುದು ತಂದುಕೊಟ್ಟ ಮಂಗಳಾ ಅವರ ಸಂಚಾರಿ ಥಿಯೇಟರ್‌ನಲ್ಲಿ ಭಾನುವಾರ(ಜು.17) ಅವರ ಹೆಸರಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅವರ ಹೆಸರಿನಲ್ಲಿ ನಾಟಕೋತ್ಸವ ಆಯೋಜನೆ ಮಾಡಿದ್ದು, ನಾಟಕೋತ್ಸವದ ಪೋಸ್ಟರ್‌ನ್ನು ಬಿ.ಜಯಶ್ರೀ ಅವರು ಬಿಡುಗಡೆ ಮಾಡಿದ್ದಾರೆ. ಶ್ರೀದೇವಿ ಮಹಾತ್ಮೆ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ.

ಇನ್ನೂ ಹಲವೆಡೆ ಸಂಚಾರಿ ಅವರ ಹುಟ್ಟು ಹಬ್ಬದ ನಿಮಿತ್ತ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ವಿಜಯ್‌ ಅವರು ನಟಿಸಿರುವ ತಲೆದಂಡ ಸಿನಿಮಾ ಕೂಡ ಪ್ರಸಾರವಾಗಲಿದೆ.

ಇದನ್ನೂ ಓದಿ | ಸಂಚಾರಿ ವಿಜಯ್‌ ಮೊದಲ ಪುಣ್ಯ ಸ್ಮರಣೆ: ಅಭಿಮಾನಿಗಳ ಹೃದಯದಲ್ಲಿ ಸದಾ ವಿಹಾರಿ

ರಂಗಭೂಮಿಯೊಂದಿಗೆ ಸಂಚಾರಿ ನಂಟು

ಸ್ವಲ್ಪ ಸಮಯದವರೆಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಸಂಚಾರಿ, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕೆಲಸಕ್ಕೆ ವಿದಾಯ ಹೇಳಿ ಪೂರ್ಣ ಪ್ರಮಾಣದ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಂಚಾರಿ ಥಿಯೇಟರ್‌ ಹಾಗೂ ರಂಗ ತಂಡದ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಅಷ್ಟೇ ವಿಜಯ್‌ ಅವರು ಇಷ್ಟಪಟ್ಟು ನಟಿಸಿರುವ ಮೈಲಾರ ಆಲ್ಬಂ ಹಾಡಿಗೆ ಸಂಜಯ್‌ ಕುಲಕರ್ಣಿ ನಿರ್ದೇಶನ ಮಾಡಿದ್ದು, ವಿಜಯ್‌ ಪ್ರಕಾಶ್‌ ಹಾಡಿದ್ದಾರೆ. ಈ ಹಾಡು ಸಾಕಷ್ಟು ಅಭಿಮಾನಿಗಳನ್ನು ಹೊಂದಿದೆ.

ಬಣ್ಣದ ಲೋಕಕ್ಕೆ ಸಂಚಾರಿ

ಕಡೂರಿನಲ್ಲಿ ಜನಿಸಿದ ವಿಜಯ್‌ 2011ರಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ವಿಜಯ್, ರಮೇಶ್ ಅರವಿಂದ್ ನಟನೆಯ ‘ರಂಗಪ್ಪ ಹೋಗ್ಬಿಟ್ನಾ’ ಹಾಗೂ ‘ಜೋಗಿ’ ಪ್ರೇಮ್ ನಟಿಸಿದ್ದ ‘ದಾಸ್ವಾಳ’ ಚಿತ್ರಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ‘ದಾಸ್ವಾಳ’ ಚಿತ್ರದಲ್ಲಿನ ಅವರ ನಟನೆಗೆ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿತ್ತು. ಆ ಬಳಿಕವೇ ಬಹುಭಾಷಾ ನಟ ಪ್ರಕಾಶ್ ರೈ ನಟಿಸಿ, ನಿರ್ದೇಶನ ಮಾಡಿದ್ದ ‘ಒಗ್ಗರಣೆ’ ಚಿತ್ರದಲ್ಲಿ ಒಂದು ಮಹತ್ವದ ಪಾತ್ರ ಮಾಡಿದ್ದರು ವಿಜಯ್. ಅದು ಮೂರು ಭಾಷೆಯಲ್ಲಿ ತೆರೆಕಂಡಿದ್ದ ಸಿನಿಮಾವಾಗಿತ್ತು. ಆ ಸಿನಿಮಾದ ನಂತರ ವಿಜಯ್‌ಗೆ ದೊಡ್ಡ ಬ್ರೇಕ್ ಸಿಕ್ಕಿದ್ದು ‘ನಾನು ಅವನಲ್ಲ ಅವಳು’ ಚಿತ್ರದ ಮೂಲಕ.

ಸಂಚಾರಿ ವಿಜಯ್‌ ಅವರಿಗೆ ಮೊದಲ ಬಾರಿ ಖ್ಯಾತಿ ತಂದುಕೊಟ್ಟ ಸಿನಿಮಾ ʼಹರಿವುʼ (Harivu). ಈ ಚಿತ್ರಕ್ಕೆ ಮಂಸೋರೆ ನಿರ್ದೇಶನ ಮಾಡಿದ್ದರು. ಇನ್ನೂ ಹರಿವು ಸಿನಿಮಾದಲ್ಲಿ ತಂದೆಯ ಪಾತ್ರದ ಮೂಲಕ ವಿಜಯ್‌ ಅಭಿನಯಿಸಿದ್ದರು. ಮತ್ತು ʼಹರಿವುʼ ಸಿನಿಮಾ ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿತು.

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪ್ರತಿಭಾನ್ವಿತ ನಟ

62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡದ ʼನಾನು ಅವನಲ್ಲ ಅವಳುʼ (Nanu Avanalla Avalu) ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ತೃತೀಯ ಲಿಂಗಿಯ ಪಾತ್ರ ನಿರ್ವಹಿಸಿ ಮೆಚ್ಚುಗೆಯನ್ನು ಗಳಿಸಿದ್ದರು. ಬಿ.ಎಸ್‌.ಲಿಂಗದೇವರು ನಿರ್ದೇಶಿಸಿದ ಈ ಚಿತ್ರ ಸಂಚಾರಿ ಅವರ ವೃತ್ತಿ ಜೀವನಕ್ಕೆ ತಿರುವು ನೀಡಿತು.

ʼಕಿಲ್ಲಿಂಗ್ ವೀರಪ್ಪನ್ʼ, ʼಗೋಧಿ ಬಣ್ಣ ಸಾಧಾರಣ ಮೈಕಟ್ಟುʼ, ʼಸಿಪಾಯಿʼ, ʼಒಗ್ಗರಣೆʼ ಮುಂತಾದ ಸಿನಿಮಾಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ʼವ್ಯಾನಿಟಿ ಬ್ಯಾಗ್ʼ, ʼಹೀಗೆರಡು ಕಥೆಗಳುʼ, ʼಹಳ್ಳಿಯೂರ ಹಮ್ಮೀರʼ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ʼಪಾರ್ವತಿ ಪರಮೇಶ್ವರʼ, ʼಪಾಂಡುರಂಗ ವಿಠಲʼ, ʼಪಂಚರಂಗಿ ಪೋಂ..ಪೋಂʼ ಹಾಗೂ ʼಹೊಸ ಬಾಳಿಗೆ ನೀ ಜೊತೆಯಾದೆʼ ಮುಂತಾದ ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ.

ಕೊನೆಯದಾಗಿ ಕಾಣಿಸಿಕೊಂಡ ವಿಜಯ್‌

ವಿಜಯ್‌ ಅವರು ʻಆಕ್ಟ್‌ 1978 ʼಸಿನಿಮಾದಲ್ಲಿ ಕೊನೆಯದಾಗಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಮಂಸೋರೆ ನಿರ್ದೇಶನ ಮಾಡಿರುವ ಹರಿವು, ನಾತಿಚರಾಮಿ, ಆಕ್ಟ್-1978 ಈ ಮೂರು ಸಿನಿಮಾಗಳಲ್ಲೂ ವಿಜಯ್ ನಟಿಸಿದ್ದರು.

ಬಾರದ ಲೋಕಕ್ಕೆ ಸಂಚಾರಿ  

2021ರ ಜೂನ್‌ 15ರಂದು ಅಪಘಾತದಲ್ಲಿ ಗಾಯಗೊಂಡು ನಿಧನರಾದರು. ಪ್ರತಿಭಾನ್ವಿತ ನಟನಾಗಿರುವ ಸಂಚಾರಿ ವಿಜಯ್‌ ಅವರ ಅಗಲಿಕೆ ಅರಗಿಸಿಕೊಳ್ಳಲು ಅವರ ಅಭಿಮಾನಿಗಳಿಗೆ ಸಾಧ್ಯವಾಗಲೇ ಇಲ್ಲ. ವಿಜಯ್‌ ಅವರ ಬ್ರೇನ್‌ ಡೆಡ್‌ ಆಗಿದ್ದರಿಂದ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ವಿಜಯ್‌ ದೇಹದಿಂದ ಎರಡು ಕಿಡ್ನಿ, ಎರಡು ಕಣ್ಣು, ಲಿವರ್ ಹಾಗೂ ಹೃದಯದ ವಾಲ್ವ್‌ ದಾನ ಮಾಡಲಾಗಿತ್ತು. ಇದರಿಂದ ಏಳು ಜನರಿಗೆ ಉಪಯೋಗವಾಗಿತ್ತು.

ಇದನ್ನೂ ಓದಿ | Shivaraj Kumar Birthday |ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಶಿವರಾಜ್‌ ಕುಮಾರ್‌

Exit mobile version