ಬೆಂಗಳೂರು: ನಿರೀಕ್ಷೆಯಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಸಂಜೆ ಬೆಂಗಳೂರಿನ ಒರಾಯನ್ ಮಾಲ್ ಪಿವಿಆರ್ ಚಿತ್ರಮಂದಿರದಲ್ಲಿ 777 ಚಾರ್ಲಿ ಕನ್ನಡ ಚಲನಚಿತ್ರವನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ, ಬಿ ಸಿ ನಾಗೇಶ್, ಶಾಸಕ ರಘುಪತಿ ಭಟ್, ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಮತ್ತು ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.
ನಾಯಿ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಮುಖ್ಯಮಂತ್ರಿಗಳನ್ನು ಈ ಚಿತ್ರ ವೀಕ್ಷಿಸುವಂತೆ ಚಿತ್ರ ತಂಡ ಆಹ್ವಾನಿಸಿತ್ತು. ಚಿತ್ರತಂಡದ ಮನವಿಗೆ ಸಿಎಂ ಸ್ಪಂದಿಸಿದ್ದು, ಸಾಧ್ಯವಾದರೆ ವೀಕ್ಷಣೆಗೆ ಬರುವುದಾಗಿ ಹೇಳಿದ್ದರು. ಸೋಮವಾರ ಸಂಜೆ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ, ಅವರು ಖುಷಿಯಲ್ಲಿ ಈ ಚಿತ್ರ ವೀಕ್ಷಿಸಿದರು.
ಒಂದು ವರ್ಷದ ಹಿಂದೆ…
ಕಳೆದ ವರ್ಷ ಜುಲೈನಲ್ಲಿ ಬಸವರಾಜ ಬೊಮ್ಮಾಯಿ ಇನ್ನೂ ಮುಖ್ಯಮಂತ್ರಿಯಾಗಿರಲಿಲ್ಲ, ರಾಜ್ಯದ ಗೃಹಸಚಿವರಾಗಿದ್ದರು. ಆಗ ಅವರ ಮನೆಯ ನಾಯಿ ʼಸನ್ನಿʼ ವಯೋಸಹಜವಾಗಿ ಮೃತಪಟ್ಟಿತ್ತು. ಇದಕ್ಕೆ ಇಡೀ ಕುಟುಂಬ ಕಣ್ಣೀರು ಹಾಕಿತ್ತು. ಇದನ್ನು ನೋಡಿದ ರಾಜ್ಯದ ಜನತೆ ಬೊಮ್ಮಾಯಿಯವರ ನಾಯಿ ಪ್ರೀತಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿತ್ತು.
ನಾಯಿ ʼಸನ್ನಿʼ ಬೊಮ್ಮಾಯಿ ಅವರ ಕುಟುಂಬದ ಭಾಗವೇ ಆಗಿತ್ತು. ಬೆಂಗಳೂರಿನ ಅವರ ನಿವಾಸದಲ್ಲಿಯೇ ಅದೂ ನೆಲಸಿತ್ತು. ಅಂದು ಮೃತಪಟ್ಟ ಪ್ರೀತಿಯ ನಾಯಿಗೆ ಅವರೇ ಮುಂದೆ ನಿಂತು ಅಂತಿಮ ಕಾರ್ಯ ಮಾಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಅವರು ಬರೆದುಕೊಂಡಿದ್ದರು.
ಈಗ ನಾಯಿಯ ಕತೆಯುಳ್ಳ ಸಿನಿಮಾವನ್ನು ಬಸವರಾಜ ಬೊಮ್ಮಾಯಿ ವೀಕ್ಷಿಸುವ ಮೂಲಕ ತಮ್ಮ ಶ್ವಾನ ಪ್ರೀತಿಯನ್ನು ಮತ್ತೊಮ್ಮೆ ಪ್ರಚುರ ಪಡಿಸಿದ್ದಾರೆ. ಅವರು ಸನ್ನಿ ನೆನಪಿಸಿಕೊಳ್ಳುತ್ತಲೇ ಈ ಸಿನಿಮಾ ನೋಡಿದರೆಂದು ಚಿತ್ರತಂಡದ ಮೂಲಗಳು ತಿಳಿಸಿವೆ.
ಚಿತ್ರದ ವೀಕ್ಷಣೆ ನಂತರ ಮಾತನಾಡಿದ ಬೊಮ್ಮಾಯಿ, ಒಂದು ನಾಯಿ ಜತೆಗೆ ಪಾತ್ರ ಮಾಡುವುದು ಸುಲಭದ ಮಾತಲ್ಲ. ರಕ್ಷಿತ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದಾರೆ. ನಾಯಿ ಹಾಗೂ ಮಾನವನ ಸಂಬಂಧವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಈಗ ನಮ್ಮ ಮನೆಯಲ್ಲಿ ಟಿಯಾ ಹೆಣ್ಣು ನಾಯಿ ಇದೆ. ನಮ್ಮ ನಾಯಿಯೂ ಈ ಚಲನಚಿತ್ರದಲ್ಲಿರುವ ನಾಯಿಯ ರೀತಿಯಲ್ಲೆ ನನ್ನನ್ನು ಪ್ರೀತಿಸುತ್ತದೆ. ನನಗೆ ಈ ಸಿನಿಮಾ ಬಹಳ ಕನೆಕ್ಟ್ ಆಯಿತು. ನಾಯಿ ಎಂದರೆ ಪ್ರೀತಿ. ಕೆಲವು ಸನ್ನಿವೇಶಗಳು ಅರ್ಥಪೂರ್ಣವಾಗಿವೆ. ಕನ್ನಡದ ಸಿನಿಮಾಗಳು ವಿಶ್ವಾದ್ಯಂತ ಹೆಸರು ಮಾಡುತ್ತಿರುವುದು ಸಂತಸ ತಂದಿದೆ.
ಕೆಲ ವರ್ಷದ ಹಿಂದಿನ ಹಿನ್ನಡೆಯಿಂದ ಕನ್ನಡ ಸಿನಿಮಾ ಪುಟಿದೆದ್ದಿದೆ. ಈಗ ಅತ್ಯುತ್ತಮ ರೀತಿಯಲ್ಲಿ ಬೆಳವಣಿಗೆ ಆಗಿದೆ. ಕನ್ನಡಕ್ಕೆ ಚಿತ್ರರಂಗ ಒಂದು ವಿಶ್ವಮಟ್ಟದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ನಾಯಿಗಳ ಕೇಂದ್ರಗಳ ಕುರಿತು ವಿಶೇಷ ಪ್ರೋತ್ಸಾಹ ನೀಡಬೇಕು ಎಂಬ ಯೋಚನೆ ಇದೆ. ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಹಾಗೂ ಸರಿಯಾಗಿ ನೋಡಿಕೊಳ್ಳಲು ತಜ್ಞರ ಜತೆ ಚರ್ಚಿಸುತ್ತೇನೆ. ಫಿಲಂ ಸಿಟಿಗೆ ಮೈಸೂರಿನಲ್ಲಿ ಜಾಗ ಇದೆ. ಹಿಂದೆ ಆಗಿರುವ ಯೋಜನೆ ಬೇರೆ, ಈಗಿನ ತಂತ್ರಜ್ಞಾನಕ್ಕೆ ಅನುಗುಣವಾಗಿ ನಿರ್ಮಾಣ ಮಾಡಲು ಚಿಂತನೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ| Movie Review | 777 ಚಾರ್ಲಿ ಪ್ರೀತಿಯ ಜರ್ನಿಯಲ್ಲಿ ನಗುವಿದೆ, ಕಣ್ಣೀರಿದೆ, ಮೌನವೂ ಇದೆ!