ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ (Actor Darshan ) ಹಾಗೂ ಗ್ಯಾಂಗ್ ಜೈಲು ಸೇರಿದ್ದಾಗಿದೆ. ಈಗ ಒಂದೊಂದೆ ಮಾಹಿತಿಗಳು ಹೊರ ಬರುತ್ತಿವೆ. ಇದೀಗ ಮಾಧ್ಯಮವೊಂದರ ಮಾಹಿತಿ ಪ್ರಕಾರ ರೇಣುಕಾ ಸ್ವಾಮಿಯ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30 ಲಕ್ಷ ರೂಪಾಯಿ ದರ್ಶನ್ ನೀಡಿದ್ದರು ಎನ್ನಲಾಗಿದೆ. ಮೊದಲಿಗೆ ಶವ ವಿಲೇವಾರಿ ಮಾಡಲು ದರ್ಶನ್ ಪ್ಲ್ಯಾನ್ ಮಾಡಿದ್ದು, ಬಳಿಕ ಅದೇ ಫ್ಲ್ಯಾನ್ ಉಲ್ಟಾ ಆಗಿದೆ ಎನ್ನಲಾಗಿದೆ.
ನಾಲ್ವರಿಗೆ ದರ್ಶನ್ 30 ಲಕ್ಷ ರೂ. ನೀಡಿ ಸರೆಂಡರ್ ಆಗುವಂತೆ ಸೂಚನೆ
ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ದರ್ಶನ್ ಅವರಿಗೆ ಶವ ಸಾಗಿಸುವುದು ಹೇಗೆ ಎನ್ನುವ ಭಯ ಕಾಡಿತ್ತು. ಹೀಗಾಗಿ ನಾಲ್ವರಿಗೆ ದರ್ಶನ್ 30 ಲಕ್ಷ ರೂ. ನೀಡಿ ಸರೆಂಡರ್ ಆಗುವಂತೆ ಸೂಚನೆ ನೀಡಿದ್ದರು. ನಾಲ್ವರು ಕೂಡ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಹೇಳಿ ಸರೆಂಡರ್ ಆಗಿದ್ದರು. ಆದರೆ ಪೊಲೀಸರ ವಿಚಾರಣೆ ವೇಳೆಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೇಳಿಕೆ ಬಂದಿತ್ತು. ಇದರಿಂದ ಅನುಮಾನಗೊಂಡು ಪೊಲೀಸರು ಇನ್ನಷ್ಟು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಇಡೀ ತಂಡ ರಾತ್ರಿಯಿಡೀ ದರ್ಶನ್ ಜತೆ ಸಂಪರ್ಕದಲ್ಲಿ ಇರುವುದು ಬೆಳಕಿಗೆ ಬಂದಿತು. ಮತ್ತು ಕಠಿಣವಾಗಿ ಎಲ್ಲವನ್ನೂ ಪರಿಶೀಲಿಸಿದಾಗ ದರ್ಶನ್ ಹೆಸರು ಹೊರಬಿದ್ದಿದೆ.
ಇದನ್ನೂ ಓದಿ: Actor Darshan: ನಿಜ ಜೀವನದಲ್ಲಿ ನಟ ದರ್ಶನ್‌ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು; ಚೇತನ್ ಅಹಿಂಸಾ!
ಪವಿತ್ರಾ ಕೂಡ ಚಪ್ಪಲಿಯಿಂದ ಹೊಡೆದಿದ್ದರು
ಅಲ್ಲದೇ ಈ ಗ್ಯಾಂಗ್ ರೇಣುಕಾಸ್ವಾಮಿ ಅವರನ್ನು ಮನಬಂದಂತೆ ಥಳಿಸಿದ್ದಲ್ಲದೇ ಗುಪ್ತಾಂಗದ ಮೇಲೆ ಒದೆಯಲಾಗಿತ್ತು. ಮತ್ತೊಂದು ಮಾಹಿತಿ ಪ್ರಕಾರ ಪವಿತ್ರಾ ಅವರು ಕೂಡ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. ದರ್ಶನ್ ಕೂಡ ರೇಣುಕಾ ಸ್ವಾಮಿಗೆ ಅವಾಜ್ ಹಾಕಿ ಊಟ ಮತ್ತು ಟ್ಯಾಬ್ಲೆಟ್ ಕೊಡಿಸಿ ಎಂದು ಹೇಳಿದ್ದರು. ಆದರೆ ದರ್ಶನ್ ಗ್ಯಾಂಗ್ ಬಳಿಕ ಮತ್ತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ.
ಮೂಲಗಳ ಪ್ರಕಾರ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್ನಲ್ಲಿ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ.
ಪಟ್ಟಣಗೆರೆ ಗೋಡಾನ್‌ನಲ್ಲಿ ಸ್ಥಳ ಮಹಜರ್ ಸಾಧ್ಯತೆ!
ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಕೆ. ಪವನ್, ನಂದೀಶ್, ದೀಪಕ್ ಕುಮಾರ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ ಅಲಿಯಾಸ್ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಇಂದು ರೇಣುಕಾಸ್ವಾಮಿ ಕೊಲೆಯಾದ ಗೋಡಾನ್‌ಗೆ ಆರೋಪಿಗಳನ್ನ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳನ್ನ ಸ್ಥಳ ಮಹಜರ್ ಗೆ ಕರೆತರುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಈ ಗೋಡಾನ್‌ವನ್ನು ಸೀಜ್ ಮಾಡಿದ್ದಾರೆ. ಈ ಗೋಡಾನ್ ಸುತ್ತಮುತ್ತ ಹೆಚ್ಚಾಗಿ ಸಾರ್ವಜನಿಕರು ಓಡಾಟ ಕೂಡ ಇಲ್ಲ ಎನ್ನಲಾಗಿದೆ. ಈ ಗೋಡಾನ್ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿತ್ತು. ಸದ್ಯ ಬಾಡಿಗೆಗೆ ನೀಡಲಾಗಿತ್ತು. ನಿನ್ನೆಯಿಂದಲೂ ಪೊಲೀಸರ ವಶದಲ್ಲಿತ್ತು ಈ ಗೋಡಾನ್.