ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಅವರು ಅರೆಸ್ಟ್ ಆದ ಬಳಿಕ ನಟಿ ರಮ್ಯಾ , ಚೇತನ್ ಅಹಿಂಸಾ ಸೇರಿದಂತೆ ಅನೇಕರು ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈಗ ನಟ ಜಗ್ಗೇಶ್ ಕೂಡ ಪರೋಕ್ಷವಾಗಿ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ʻಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆʼಎಂದು ಬರೆದುಕೊಂಡಿದ್ದಾರೆ.
ʻʻಸರ್ವ ಆತ್ಮಾನೇನ ಬ್ರಹ್ಮ” ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನವನ್ನು ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕು ತತಕ್ಷಣ ಫಲಿತಾಂಶ ಉಂಟು! ರಾಮನಾಗು.. ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!ʼʼಎಂದು ಬರೆದುಕೊಂಡಿದ್ದಾರೆ. ಮದ ಇದ್ದವನಿಗೆ ಕರುಣೆ ಎಂಬುದೆಲ್ಲ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ.ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
‘ತೋತಾಪುರಿ’ ಸಿನಿಮಾ ಚಿತ್ರೀಕರಣ ಸೆಟ್ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಸಿತ್ತು. ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೊ ಕ್ಲಿಪ್ ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಜಗ್ಗೇಶ್ ಅವರಲ್ಲಿ ಪಟ್ಟು ಹಿಡಿದಿದ್ದರು. ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಜಗ್ಗೇಶ್ಗೆ ಸ್ವತಃ ದರ್ಶನ್ ಕ್ಷಮೆ ಕೇಳಿದ್ದರು.
ಇನ್ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್ರವರೊಂದಿಗೆ ನಟ ಜಗ್ಗೇಶ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅಭಿಮಾನಿಗಳ ಬಗ್ಗೆ ಮಾತನಾಡುವ ವೇಳೆ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದರು.
ಇದನ್ನೂ ಓದಿ: Actor Darshan: ʻಡೆವಿಲ್ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!
ಈಗಾಗಲೇ ಚೇತನ್ ಅಹಿಂಸಾ ಕೂಡ ಎಕ್ಸ್ನಲ್ಲಿ ʻʻʻಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ನಿಜ ಜೀವನದಲ್ಲಿ ನಟ ದರ್ಶನ್ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು,” ಎಂಬುದಾಗಿ ಬರೆದುಕೊಂಡಿದ್ದಾರೆ.
ಚೇತನ್ ಅಹಿಂಸಾ ಹೀಗೆ ಬರೆದುಕೊಂಡಿದ್ದಾರೆ. ʻʻನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ. ಅಲ್ಲದೆ, ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರುʼʼಎಂದು ಬರೆದುಕೊಂಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್ಗೆ (Actor Darshan) ಮರಣದಂಡನೆಯಾಗಲಿ ಎಂಬ ಆಶಯವನ್ನು ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣದ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್ಗೆ ಇಂಡಿಯನ್ ಪಿನಲ್ ಕೋಡ್ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಸೆಕ್ಷನ್ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್ ಅನ್ನು ರಮ್ಯಾ ರೀಟ್ವೀಟ್ ಮಾಡಿದ್ದಾರೆ.