ಬೆಂಗಳೂರು: ನಟ ದರ್ಶನ್ (Actor Darshan) ಅವರ ಮಾಜಿ ಪಿ.ಎ ಮಲ್ಲಿಕಾರ್ಜುನ್ ವಿರುದ್ಧ ಹಲವು ಆರೋಪಗಳು ಈ ಹಿಂದೆ ಕೇಳಿ ಬಂದಿದ್ದವು. ನಟ ಅರ್ಜುನ್ ಸರ್ಜಾ (Arjun Sarja) ಅವರು ʻಪ್ರೇಮ ಬರಹ’ (Prema Baraha) ಚಿತ್ರದ ವಿತರಣೆ ಹಣದ ವಿಚಾರವಾಗಿ ಮಲ್ಲಿಕಾರ್ಜುನ್ ವಿರುದ್ಧ ಕೇಸ್ ದಾಖಲಿಸಿದ್ದರು. ಮಲ್ಲಿಕಾರ್ಜುನ್ ವಿರುದ್ಧ 1 ಕೋಟಿ ರೂ. ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ. ಆದರೆ, ಮಲ್ಲಿ ಕಳೆದ 7 ವರ್ಷಗಳಿಂದ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ ಅರ್ಜುನ್ ಸರ್ಜಾ. ಇದೀಗ ದರ್ಶನ್ ಆಪ್ತ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಿ ಅಚಾನಕ್ಕಾಗಿ ಕಾಣೆಯಾದ ಪ್ರಕರಣ ಇದೀಗ ಮುನ್ನೆಲೆಗೆ ಬಂದಿದೆ. ಮಲ್ಲಿ ಎಲ್ಲಿದ್ದಾನೆ? ಬದುಕಿದ್ದಾನೆಯೇ? ಅಥವಾ ರೇಣುಕಾ ಸ್ವಾಮಿ ರೀತಿಯ ಆತನದ್ದೂ ಕೊಲೆ ಆಗಿದೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.
ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಕಂಪನಿ ಒಡೆಯರಾಗಿದ್ದ ಮಲ್ಲಿಕಾರ್ಜುನ್, ಗಾಂಧಿನಗರದಲ್ಲಿ ಹಲವರಿಗೆ 11 ಕೋಟಿ ರೂ. ಮೋಸ ಮಾಡಿರುವುದಾಗಿ ತಿಳಿದು ಬಂದಿತ್ತು. ಮಾತ್ರವಲ್ಲ ನಟ ದರ್ಶನ್‌ಗೆ 2 ಕೋಟಿ ರೂ. ಮೋಸ ಮಾಡಿ ನಾಪತ್ತೆಯಾಗಿದ್ದಾರೆ ಎಂಬ ದೂರಿತ್ತು. ಮಲ್ಲಿಕಾರ್ಜುನ್ ವಿಚಾರವಾಗಿ ಅರ್ಜುನ್ ಸರ್ಜಾ ಅವರು ಮತ್ತು ಅವರ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದರು. ಮಲ್ಲಿಕಾರ್ಜುನ್ ಹಾಜರಾಗದೇ ಇದ್ದರೆ ವಾರಂಟ್ ಜಾರಿ ಮಾಡಬಹುದು ಎಂದು ಕೋರ್ಟ್ ಆದೇಶ ನೀಡಿತ್ತು.
ಪ್ರೇಮ ಬರಹ ಸಿನಿಮಾ ಪ್ರಕರಣ
ಅರ್ಜುನ್ ಸರ್ಜಾ (Arjun Sarja) ನಿರ್ದೇಶನ ಮತ್ತು ನಿರ್ಮಾಣದ ಚಿತ್ರ ʻಪ್ರೇಮ ಬರಹʼ ಚಿತ್ರವನ್ನು ಮಲ್ಲಿಕಾರ್ಜುನ್ (ಮಲ್ಲಿ) ರಾಜ್ಯಾದ್ಯಂತ ವಿತರಣೆ ಮಾಡಿದ್ದರು. 2018 ಫೆಬ್ರವರಿ 9ನೇ ತಾರೀಖು ರಾಜ್ಯಾದ್ಯಂತ ʻಪ್ರೇಮ ಬರಹʼ ಸಿನಿಮಾ ರಿಲೀಸ್ ಆಗಿತ್ತು. ಚಂದನ್ ಕುಮಾರ್ ಹಾಗೂ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯ ಅರ್ಜುನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ದಿವಂಗತ ಚಿರು ಸರ್ಜಾ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. 2018ರ ಶುರುವಿನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಪ್ರೇಮ ಬರಹ ಸಿನಿಮಾದ ವಿತರಣೆಯ ಹಣದ ವಿಚಾರದಲ್ಲಿ ದರ್ಶನ್ ಮಾಜಿ ಪಿ.ಎ ಮಲ್ಲಿಕಾರ್ಜುನ್ ಮತ್ತು ನಟ-ನಿರ್ಮಾಪಕ-ನಿರ್ದೇಶಕ ಅರ್ಜುನ್ ಸರ್ಜಾರಲ್ಲಿ ವೈ ಮನಸ್ಸು ಶುರುವಾಯ್ತು. ಅರ್ಜುನ್ ಸರ್ಜಾ ಮತ್ತು ಮಲ್ಲಿಕಾರ್ಜುನ್ ನಡುವೆ ʻಪ್ರೇಮ ಬರಹʼ ಸಿನಿಮಾದ ವಿತರಣೆಯ ವಿಚಾರವಾಗಿ ಬರೋಬ್ಬರಿ 1 ಕೋಟಿ ರೂ. ಕೊಡುವ ಒಪ್ಪಂದ ಆಗಿತ್ತು. ಈ ವಿಚಾರವಾಗಿ ಸ್ವತಃ ಮಲ್ಲಿಕಾರ್ಜುನ್ ಅವರೇ ಅವರದ್ದೇ ಆದ ಶ್ರೀ ಕಾಲಕಾಲೇಶ್ವರ ಎಂಟರ್ಪ್ರೈಸಸ್ ಬುಕ್ಲೆಟ್ನಲ್ಲಿ ವಿತರಣೆಯ ಹಣದ ವಿಚಾರವನ್ನು ಬರೆದುಕೊಟ್ಟಿದ್ದರು.
ಪ್ರೇಮ ಬರಹದ ಕಲೆಕ್ಷನ್ ಅಮೌಂಟ್ ಕೊಡಲೇ ಇಲ್ಲ
2018ರ ಫೆಬ್ರವರಿ ತಿಂಗಳು 9ನೇ ತಾರೀಕು ತೆರೆಕಂಡ “ಪ್ರೇಮ ಬರಹʼದ ಕಲೆಕ್ಷನ್ ಅಮೌಂಟ್ ಮಲ್ಲಿಕಾರ್ಜುನ್ ಕೊಟ್ಟಿರಲಿಲ್ಲ. 2018 ಫೆಬ್ರವರಿ ತಿಂಗಳ ನಂತರ ಮುಂದಿನ ಆರೇಳು ತಿಂಗಳು ಅರ್ಜುನ್ ಸರ್ಜಾ ಅವರು ಮಲ್ಲಿಕಾರ್ಜುನ್ ಅವರಲ್ಲಿ ವಿತರಣೆಯ ಹಣವನ್ನು ಕೊಡುವಂತೆ ಕೇಳಿಕೊಂಡಿದ್ದಾರೆ. ಇದೇ ಸಮಯದಲ್ಲಿ ಮಲ್ಲಿಕಾರ್ಜುನ್ ನಾಪತ್ತೆ ಆಗಿಬಿಟ್ಟರು. ಒಟ್ಟು ಸುಮಾರು 11 ಕೋಟಿ ರೂ. ಮೋಸ ಮಾಡಿ ಓಡಿಹೋಗಿದ್ದಾರೆ ಎಂದು ಆಗ ಗಾಂಧಿನಗರದಲ್ಲಿ ಮಾತುಗಳು ಕೇಳಿಬರುತ್ತಿತ್ತು. ಈ ವಿಚಾರವನ್ನ ನಟ ದರ್ಶನ್ ಅವರಲ್ಲಿ ಕೇಳಿದಾಗ ‘‘ನನಗೆ 2 ಕೋಟಿ ಕೊಡಬೇಕಿತ್ತು ಮಲ್ಲಿ‘. ನನ್ನ ಹೆಸರಿನಲ್ಲಿ ಅನೇಕರಿಗೆ ಮೋಸ ಮಾಡಿದ್ದಾನೆ ಎನ್ನುವ ವಿಚಾರ ಕೇಳಿದ್ದೇನೆ. ಆತ ಎಲ್ಲಿಗೆ ಹೋಗಿದ್ದಾನೆ ಎಂದು ನನಗೆ ಗೊತ್ತಿಲ್ಲ ಎಂದಿದ್ದರುʼʼ ದರ್ಶನ್.
ಮುಲತಃ ಉತ್ತರ ಕರ್ನಾಟಕದ ಗದಗ ಜಿಲ್ಲೆಯವರಾಗಿದ್ದ ಮಲ್ಲಿಕಾರ್ಜುನ್ ಏಳು ವರ್ಷದಿಂದ ಯಾರಿಗೂ ಸಿಕ್ಕಿಲ್ಲ. 2018ರಲ್ಲಿ ಮಲ್ಲಿಕಾರ್ಜುನ್ ನಾಪತ್ತೆಯಾದಾಗ ಅರ್ಜುನ್ ಸರ್ಜಾ ಟೀಮ್ ಅವರ ಊರಿನ ಕಡೆ ಹೊರಟಿತ್ತು. ಮಲ್ಲಿ ಅವರ ಪತ್ನಿ ಕೊಪ್ಪಳ ಮೂಲದವರು. ಆಗ ಅವರ ಮನೆಗೆ ಹುಡುಕಿಕೊಂಡು ಹೋದಾಗ ಮಲ್ಲಿಕಾರ್ಜುನ್ ಪತ್ನಿ ತೇಜಸ್ವಿನಿ ”ನಮ್ಮ ಮನೆಗೂ ನನ್ನ ಗಂಡ ಬಂದಿಲ್ಲ. ಇದೊಂದು ಪತ್ರ ಬರೆದು ಹೊರಟು ಹೋಗಿದ್ದಾರೆʼʼ ಎಂದು ಹೇಳಿದ್ದರು.
ಪತ್ರದಲ್ಲಿ ಏನಿದೆ?
ಪ್ರೀತಿಯ ತೇಜಸ್ವಿನಿಗೆ, ಮೊದಲನೆದಾಗಿ ದಯವಿಟ್ಟು ನನ್ನನ್ನು ಕ್ಷಮಿಸು. ನಾನು ನನ್ನ ವೈಯಕ್ತಿಕ ವ್ಯವಹಾರಕ್ಕಾಗಿ ತುಂಬಾ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇನೆ. ನನ್ನ ಈ ಕೆಲಸದಿಂದ ನಾನು ಯಾರಿಗೂ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿದ್ದೇನೆ. ಆದ ಕಾರಣ ನಾನು ಎಲ್ಲೋ ಕಷ್ಟಪಟ್ಟು ದುಡಿದು ವಾಪಸ್ಸು ಬಂದು ಸಾಲ ತೀರಿಸಿ, ನನಗಂಟಿರುವ ಕಳಂಕ ಹೋಗಲಾಡಿಸಿ ಮತ್ತೆ ಧೈರ್ಯವಾಗಿ ತಲೆಯತ್ತಿ ಎಲ್ಲರ ಮುಂದೆ ಜೀವನ ನಡೆಸಬೇಕೆಂದುಕೊಂಡಿದ್ದೇನೆ. ಅಲ್ಲಿಯವರಿಗೆ ನಿಮ್ಮ ಎದುರಿಗೆ ಬರುವ ಶಕ್ತಿ ನನಗಿಲ್ಲ. ನನ್ನನ್ನು ಯಾವುದೇ ಕಾರಣಕ್ಕೂ ಹುಡುಕುವ ಪ್ರಯತ್ನ ಮಾಡಬೇಡಿ. ನನ್ನ ಸಮಸ್ಯೆಯಿಂದ ನಿನ್ನನ್ನು, ಮಗನನ್ನು ಹಾಗೂ ಮನೆಯವರನ್ನೂ ಬಿಟ್ಟು ಹೋಗುವ ಪರಿಸ್ಥಿತಿ ಬಂದೊದಗಿದೆ. ದಯವಿಟ್ಟು ನನ್ನನ್ನು ಕ್ಷಮಿಸುʼʼ ಎಂದು ಬರೆದಿದ್ದರು.
ಇದೀಗ ರೇಣುಕಾ ಸ್ವಾಮಿ ಪ್ರಕರಣ ಹೊರಬಂದ ಬಳಿಕ ಮಲ್ಲಿ ಕುರಿತು ಸಹ ಪ್ರಶ್ನೆಗಳು ಎದ್ದಿವೆ. ಮಲ್ಲಿ ಎಲ್ಲಿದ್ದಾನೆ? ಬದುಕಿದ್ದಾನೆಯೇ? ಅಥವಾ ರೇಣುಕಾ ಸ್ವಾಮಿ ರೀತಿಯ ಆತನದ್ದೂ ಕೊಲೆ ಆಗಿವೆಯೇ? ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಎದ್ದಿವೆ.2018ರ ಬಳಿಕ ಮಲ್ಲಿ ಅಚಾನಕ್ಕಾಗಿ ಕಾಣೆಯಾದರು. ಅಂದಿನಿಂದ ಈ ವರೆಗೆ ಮಲ್ಲಿ ಎಲ್ಲಿದ್ದಾರೆಂಬುದು ಯಾರಿಗೂ ಗೊತ್ತಿಲ್ಲ.