ಬೆಂಗಳೂರು: ಕೊಲೆಯಾದ ರೇಣುಕಾಸ್ವಾಮಿ (Renuka Swamy Murder case) ಕೂಡಾ ನಟ ದರ್ಶನ್ (Actor Darshan) ಅಭಿಮಾನಿಯಾಗಿದ್ದವನು. ಆದರೆ ಅದೇ ಅಭಿಮಾನಿಯ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರುವಂತಾಯಿತು. ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ನನ್ನು ಸಿದ್ಧಾರೂಢ ಎಂಬ ಮಾಜಿ ಕೈದಿ ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದ, ಈತನಿಗೆ ಈಗ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ಸನ್ನಡತೆ ಆಧಾರದಲ್ಲಿ ಇನ್ನೇನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಬೇಕಿದ್ದ ಸಿದ್ಧಾರೂಢ ಅವರು ದರ್ಶನ್‌ನ ಭೇಟಿ ಮಾಡಲೇಬೇಕು ಎನ್ನುವ ಆಸೆ ಹೊಂದಿದ್ದರು. ಅದಕ್ಕಾಗಿ ಅವರು ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದರು ಎನ್ನಲಾಗಿತ್ತು. ಇದಕ್ಕೆ ಜೈಲು ಅಧಿಕಾರಿ ಕೂಡ ಒಪ್ಪಿಕೊಂಡಿದ್ದರು ಎನ್ನಲಾಗಿತ್ತು. ಆದರೆ ಸಿದ್ಧರೂಢರನ್ನು ಭೇಟಿಯಾಗೋದಿಕ್ಕೆ ದರ್ಶನ್ ಒಪ್ಪುತ್ತಾರಾ? ಅವರಿಗೆ ಮನಸಿದ್ಯಾ ಅಂತ ಅಧಿಕಾರಿಗಳು ದರ್ಶನ್‌ನ ಕೇಳಿದ್ದರು. ಆದರೆ ದರ್ಶನ್ ಹಿಂದೂ ಮುಂದೂ ನೋಡಲೇ ಇಲ್ಲ. ಒಂಚೂರು ಯೋಚನೆ ಮಾಡದೇ ತನ್ನನ್ನು ಭೇಟಿಯಾಗಲು ಬಯಸುತ್ತಿರುವ ಅಭಿಮಾನಿಯ ಭೇಟಿಗೆ ಒಪ್ಪಿಕೊಂಡಿದ್ದರು. ಸಿದ್ಧಾರೂಢ ಅವರನ್ನು ಒಳ ಕಳುಹಿಸುವಂತೆ ಮನವಿ ಮಾಡಿದ್ದರು. ಎನ್ನಲಾಗಿತ್ತು. ಸಿದ್ಧಾರೂಢ, ತಾವು ದರ್ಶನ್ ಅನ್ನು ಜೈಲಿನಲ್ಲಿ ಭೇಟಿಯಾಗಿದ್ದು, ದರ್ಶನ್ಗೆ ಯೋಗ ಹೇಳಿಕೊಟ್ಟೆ, ಧ್ಯಾನ ಹೇಳಿಕೊಟ್ಟೆ, ದರ್ಶನ್ ಜೊತೆಗೆ ಹಲವು ಸಮಯ ಮಾತನಾಡಿದೆ ಎಂದೆಲ್ಲ ಹೇಳಿಕೊಂಡಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ಇದನ್ನು ಅಲ್ಲಗಳೆದಿದ್ದು, ದರ್ಶನ್ ಅನ್ನು ಸಿದ್ಧಾರೂಡ ಭೇಟಿ ಆಗಿಲ್ಲ ಎಂದಿದ್ದಾರೆ. ಇದೀಗ ಪೊಲೀಸ್ ಇಲಾಖೆಯು ಸಿದ್ಧಾರೂಢಗೆ ನೋಟಿಸ್ ಜಾರಿ ಮಾಡಿದೆ.
ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲು ಅಧಿಕಾರಿಗಳು
ಜೈಲಲ್ಲಿ ನಟ ದರ್ಶನ್ ಭೇಟಿಯಾಗದೆ ಸಿದ್ದರೂಢ ಸುಳ್ಳು ಕಥೆ ಕಟ್ಟಿದ್ದಾರೆ ಎನ್ನಲಾಗಿದೆ. ದರ್ಶನ್ ಭೇಟಿ ಮಾಡಿಸಲೇ ಇಲ್ಲವೆಂದು ಕಾರಾಗೃಹ ಇಲಾಖೆಗೆ ಜೈಲಾಧಿಕಾರಿಗಳು ರಿಪೋರ್ಟ್ ಕೊಟ್ಟಿದ್ದಾರೆ. ಸನ್ನಡತೆ ಮೇಲೆ ರಿಲೀಸ್ ಆಗಿರುವ ಸಿದ್ದರೂಢ ಮಾಧ್ಯಮ ಹೇಳಿಕೆ ಬಗ್ಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದಾರೆ. ಜೈಲು ಅಧಿಕಾರಿಗಳು, ದರ್ಶನ್ ಭೇಟಿಗೆ ಯಾವುದೇ ಬೇರೆ ಕೈದಿಗಳಿಗೆ ವಿಶೇಷವಾಗಿ ಜೈಲು ಸೆಲ್ನೊಳಗೆ ಹೋಗಲು ಅವಕಾಶ ಕೊಟ್ಟಿಲ್ಲವೆಂದು ಉತ್ತರಿಸಿದ್ದಾರೆ. ಹಾಗಾಗಿ ಮಾಧ್ಯಮಗಳ ಮುಂದೆ ಸುಳ್ಳು ಹೇಳಿರುವ ಸಿದ್ಧಾರೂಢನಿಗೆ ಪೊಲೀಸ್ ಇಲಾಖೆ ನೊಟೀಸ್ ನೀಡಿದ್ದು, ವಿಚಾರಣೆಗೆ ಕರೆದಿದೆ.
ಇದೇ ತಿಂಗಳ ಎಂಟನೇ ತಾರೀಖು ಬಳ್ಳಾರಿ ಜೈಲಿನಿಂದ ಪರಪ್ಪನ ಅಗ್ರಹಾರ ಜೈಲಿಗೆ ಸಿದ್ಧಾರೂಢ ಬಂದಿದ್ದ. ಆತನನ್ನು ಒಂಬತ್ತನೇ ತಾರೀಖು ಬಿಡುಗಡೆ ಮಾಡಿದ್ದೆವು. ಆತ ಇಲ್ಲಿ ದರ್ಶನ್ ಅನ್ನು ಭೇಟಿ ಆಗಿಲ್ಲ. ದರ್ಶನ್ ಸೆಲ್ ಒಳಕ್ಕೆ ಯಾರನ್ನೂ ಸಹ ಬಿಟ್ಟಿಲ್ಲ ಎಂದು ಜೈಲಧಿಕಾರಿಗಳು ಹೇಳಿದ್ದಾರೆ.
ಸಿದ್ಧಾರೂಢ ಮಾಧ್ಯಮದ ಮುಂದೆ ಹೇಳಿದ್ದೇನು?
ʻʻನಿನ್ನನ್ನ ಕಾನೂನು ಕ್ಷಮಿಸಿ ಒಂದು ಅವಕಾಶವನ್ನು ಕೊಟ್ಟಿದೆ. ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೋ, ಹೆಂಡತಿ ಮಕ್ಕಳ ಜತೆ ಪ್ರೀತಿಯಿಂದ ಬದುಕು ಅಂತ ಸಲಹೆಯನ್ನು ಕೊಟ್ಟಿದ್ದರಂತೆ. ದರ್ಶನ್ ಆಡಿರುವ ಈ ಮಾತುಗಳನ್ನು ಕೇಳಿದರೆ ನಿಜಕ್ಕೂ ಅವರಿಗೆ ಪಾಪಪ್ರಜ್ಞೆ ಕಾಡುತ್ತಿದೆ. ತಾನು ಮಾಡಿರುವ ತಪ್ಪಿನ ಅರಿವು ಆದಂತಿದೆʼʼ ಎಂದು ಸಿದ್ಧಾರೂಢ ತಿಳಿಸಿದ್ದರು.
ಜುಲೈ 8ರಂದು ಜೈಲಾಧಿಕಾರಿಗಳ ಅನುಮತಿ ಪಡೆದು ನಟ ದರ್ಶನ್‌ರನ್ನು ಭೇಟಿಯಾದ ಸಿದ್ಧರೂಢ, ಪಿರಮಿಡ್ ಧ್ಯಾನವನ್ನು ಹೇಳಿಕೊಟ್ಟಿದ್ದರಂತೆ. ನಾನು ನಿಮ್ಮ ಅಭಿಮಾನಿ ಎಂದಾಗ ಸಿದ್ಧರೂಢರನ್ನು ದರ್ಶನ್ ತಬ್ಬಿಕೊಂಡರಂತೆ. ಹತ್ತು ನಿಮಿಷ ಧ್ಯಾನ ಮಾಡಿದ ದರ್ಶನ್ ಇದು ಚೆನ್ನಾಗಿದೆ, ನಾನು ಇನ್ಮೆಲೆ ಇದನ್ನೂ ಮಾಡ್ತಿಲಿ ಎಂದು ಜೈಲಿನಿಂದ ಬಿಡುಗಡೆಗೊಂಡ ಕೈದಿ ಸಿದ್ಧಾರೂಢ ಹೇಳಿದ್ದಾರೆ. ದರ್ಶನ್ ಅವರನ್ನು ನೋಡಿದಾಗ ಬೇಸರ ಆಯಿತು. ಆದರೆ ಅವರು ನೀನು ನಾನ್ ಸೆಲೆಬ್ರಿಟಿ, ನಾನು ನಿನ್ನ ಸೆಲೆಬ್ರಿಟಿ ಎಂದು ಆಟೋಗ್ರಾಫ್ ಕೊಟ್ಟರು ಅಂತ ದರ್ಶನ್ ಕುರಿತು ಸಿದ್ಧರೂಢ ವಿವರಿಸಿದ್ದರು.