ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Actor Darshan) ಬಂಧನವಾಗಿರುವ ನಟ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಸೋಮವಾರ ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಇವರಷ್ಟೇ ಅಲ್ಲದೇ ದರ್ಶನ್ ಆಪ್ತ ವಿನೋದ್ ಪ್ರಭಾಕರ್ ಕೂಡ ಸ್ನೇಹಿತರ ಜತೆ ಆಗಮಿಸಿ ಭೇಟಿ ಮಾಡಿದರು. ಈ ವೇಳೆ ದರ್ಶನ್ ಅವರು ಮಗನನ್ನು ನೋಡಿ ಕಣ್ಣೀರಿಟ್ಟರು. ಮಗ ವಿನೀಶ್ ಹಾಗೂ ಪತ್ನಿ ವಿಜಯಲಕ್ಷ್ಮಿ ನೋಡುತ್ತಿದ್ದಂತೆ ದರ್ಶನ್ ಭಾವುಕರಾದರು.
ಮಗನನ್ನು ತಬ್ಬಿಕೊಂಡು ಕೆಲ ಹೊತ್ತು ದರ್ಶನ್ ಕಣ್ಣೀರಿಟ್ಟರು. ಪತ್ನಿ ಬಳಿ ನಡೆದ ಘಟನೆಯ ಬಗ್ಗೆ ದರ್ಶನ್ ಕೆಲ ಮಾತುಗಳನ್ನಾಡಿದರು. ಕಾನೂನು ಹೋರಾಟದ ಬಗ್ಗೆ ಪತ್ನಿ ದರ್ಶನ್‌ಗೆ ಮಾಹಿತಿ ನೀಡಿದರು. ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮೀ ಧೈರ್ಯ ತುಂಬಿದರು. . ಮಗ ವಿನೀಶ್ ನನ್ನು ತಬ್ಬಿಕೊಂಡೇ ಅಳುತ್ತಾ ಮಾತನಾಡಿದ್ದಾರೆ. ಅರ್ಧ ಘಂಟೆಯ ಭೇಟಿಯಲ್ಲಿ ದರ್ಶನ್ ಭಾವುಕದಿಂದಲೇ ಮಾತನಾಡಿದರು. ಪತ್ನಿ ವಿಜಯಲಕ್ಷ್ಮಿಗಿಂತ ಹೆಚ್ಚಿನ ಸಮಯವನ್ನು ಮಗನ ಜೊತೆಗೆ ಕಳೆದರು.
ಇದನ್ನೂ ಓದಿ: Actor Darshan: ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್ ಕಪ್ಪು ಬಣ್ಣದ ಕಿಯಾ ಕಾರಿನಲ್ಲಿ ಆಗಮಿಸಿದ್ದರು. ಮೊದಲು ಜೈಲಿನ ಚೆಕ್ ಪೋಸ್ಟ್ ಸಮೀಪ ಕಾರು ನಿಲ್ಲಿಸಲಾಗಿತ್ತು. ಆಗ ಮಾಧ್ಯಮಗಳ ಕ್ಯಾಮೆರಾ ಕಂಡು ವಿಜಯಲಕ್ಷ್ಮಿ, ವಿನೀಶ್ ವಾಪಸ್ ತೆರಳಿದರು. ನಂತರ ಬೇರೊಂದು ಕಾರಿನಲ್ಲಿ ಜೈಲಿನ ಬಳಿ ಬಂದರು. ಆಗ ಮಾಧ್ಯಮಗಳ ಕಣ್ತಪ್ಪಿಸಿ ಜೈಲಿನ ಒಳಗೆ ದರ್ಶನ್ ಪತ್ನಿ, ಪುತ್ರನನ್ನು ಪೊಲೀಸರು ಕರೆದೊಯ್ದರು.
ಇನ್ನು ಜೈಲಿನಲ್ಲಿದ್ದರೂ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎನ್ನಲಾಗಿದೆ. ಸಾಮಾನ್ಯ ಕೈದಿಗಳನ್ನು ಭೇಟಿಯಾಗಲು ಬಂದರೆ ನೂರೊಂದು ಕಂಡಿಷನ್ಸ್ ವಿಧಿಸುವ ಪೊಲೀಸರು, ಸೆಲೆಬ್ರಿಟಿ, ರಾಜಕಾರಣಿಗಳು, ಬಲಾಢ್ಯರಿಗೆ ರಾಜಾತಿಥ್ಯ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ದರ್ಶನ್ ಪತ್ನಿ, ಪುತ್ರ ಭೇಟಿ ಮಾಡಿ ಹೊರಟ ಬಳಿಕ, ನಟ ವಿನೋದ್ ಪ್ರಭಾಕರ್ ಅವರು ಸ್ನೇಹಿತರ ಜತೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ನಿರ್ಗಮಿಸಿದರು. ನಂತರ ಮಾತನಾಡಿದ ವಿನೋದ್ ಪ್ರಭಾಕರ್ ಅವರು, ಮೃತ ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ನೋವನ್ನು ಬರಿಸುವ ಶಕ್ತಿ ಭಗವಂತ ನೀಡಲಿ. ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದರು.
ದರ್ಶನ್ ಅವರನ್ನು ಭೇಟಿ ಮಾಡಿ ನಾಲ್ಕು ತಿಂಗಳು ಆಗಿತ್ತು. ಅವರ ಹುಟ್ಟುಹಬ್ಬದಂದು ಭೇಟಿ ಮಾಡಿದ್ದೆ. ಮಾಧ್ಯಮಗಳಲ್ಲಿ ಬರುವುದನ್ನು ನೋಡಿ ವಿಚಾರ ತಿಳಿದುಕೊಂಡೆ, ಪೊಲೀಸ್ ಸ್ಟೇಷನ್ ಹತ್ತಿರ ಹೋಗಿ ಭೇಟಿಯಾಗಲು ಪ್ರಯತ್ನಪಟ್ಟೆ, ಆದರೆ ಸಾಧ್ಯವಾಗಿರಲಿಲ್ಲ. ಇಂದು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಭೇಟಿ ಮಾಡಿದ್ದೇನೆ. ದರ್ಶನ್ ಅವರು ಮೌನವಾಗಿದ್ದರು, ಏನ್ ಟೈಗರ್ ಅಂತ ಹೇಳಿದರು ಅಷ್ಟೇ… ಅವರಿಗೆ ಶೆಕ್ ಹ್ಯಾಂಡ್ ಮಾಡಿ ಬಂದೆ ಎಂದು ತಿಳಿಸಿದರು.
ಪ್ರಕರಣದ ಬಗ್ಗೆ ಎಲ್ಲೂ ಪ್ರತಿಕ್ರಿಯಿಸಿಲ್ಲ ಎಂಬ ಬಗ್ಗೆ ಸ್ಪಂದಿಸಿ, ಎಲ್ಲಾ ಕಡೆ ವಿನೋದ್ ಪ್ರಭಾಕರ್ ಪೋಸ್ಟ್ ಮಾಡಿಲ್ಲ, ಮಾತನಾಡಿಲ್ಲ ಎನ್ನುತ್ತಿದ್ದರು. ಪೋಸ್ಟ್ ಹಾಕಿ ಈ ಪ್ರಾಬ್ಲಮ್ ಸರಿಹೋಗುತ್ತೆ ಎಂದರೆ ನಾನೇ ಸಾವಿರ ಪೋಸ್ಟ್ ಹಾಕುತ್ತಿದ್ದೆ. ಈ ಪ್ರಕರಣ ಬಹಳ ಗಂಭೀರವಾಗಿದೆ. ಪೊಲೀಸ್ ತನಿಖೆಯಲ್ಲಿ ಕೇಸ್ ಇದೆ. ಏನು ಮಾತನಾಡಬೇಕು ಎನ್ನುವ ಕ್ಲ್ಯಾರಿಟಿ ನನಗಿಲ್ಲ. ಅದಕ್ಕೆ ಅವರನ್ನು ಭೇಟಿ ಮಾಡುವವರೆಗೆ ಮಾತನಾಡಬಾರದು ಅಂದುಕೊಂಡಿದ್ದೆ. ಕಾನೂನಿಗಿಂತ ಯಾರೂ ದೊಡ್ಡವರಿಲ್ಲ, ಎಲ್ಲರಿಗೂ ನ್ಯಾಯ ಸಿಗಲಿ ಎಂದರು.