ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan ) ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್ ನೋಡಲು ಬಂದಿದ್ದಾರೆ.
ಇಂದು ಭಾನುವಾರ ಆದ ಕಾರಣ ದರ್ಶನ್ ಭೇಟಿಗೆ ಯಾರಿಗೂ ಅವಕಾಶ ಇಲ್ಲ. ಆದರೂ ನಟ ದರ್ಶನ್ ಭೇಟಿಗೆ ವಿಶೇಷ ಚೇತನ ಆಗಮಿಸಿದ್ದರು, ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಕಿವಿ ಕೇಳಿಸದಿದ್ದರು ಶಂಖ ಊದುತ್ತಾ, ಜಾಗಟೆ ಬಾರಿಸುತ್ತ ಜೈಲಿನ ಬಳಿ ಬಂದಿದ್ದರು. ತುರುವೆಕೆರೆಯ ಜಡಿಯೊ ಗ್ರಾಮದ ವಿಶೇಷ ಚೇತನ ಅಭಿಮಾನಿಯಾಗಿದ್ದಾರೆ. ʻʻನಟ ದರ್ಶನ್ ಒಳ್ಳೆಯ ವ್ಯಕ್ತಿ. ಅಂತಹವರನ್ನು ಜೈಲಿನಲ್ಲಿಟ್ಟರೆ ಸಿನಿ ಕಾರ್ಮಿಕರು, ನಿರ್ಮಾಪಕರಿಗೆ ತೊಂದರೆ. ಅವ್ರು ತಪ್ಪು ಮಾಡಿರಬಹುದು. ಆದರೆ ನಟ ದರ್ಶನ್ ಸಾಕಷ್ಟು ಸಮಾಜಸೇವೆ ಮಾಡಿದ್ದಾರೆ ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡಬೇಕು. ದರ್ಶನ್ ಬಿಡುಗಡೆಗಾಗಿ ಗೃಹ ಮಂತ್ರಿ ಜಿ ಪರಮೇಶ್ವರ ಭೇಟಿಗೆ ಹೋಗಿದ್ದೆ. ಆದರೆ ಅವರು ಸಿಗಲಿಲ್ಲʼʼ ಎಂದು ವಿಶೇಷ ಚೇತನ ಅಭಿಮಾನಿ ಗೋವಿಂದ ರಾಜು ಹೇಳಿಕೆ ನೀಡಿದರು.
ಇದನ್ನೂ ಓದಿ: Actor Darshan: ಎಲ್ಲಾ ಹಣೆಬರಹ ಸ್ವಾಮಿ ಏನು ಮಾಡೋದು? ದರ್ಶನ್ ಕೇಸ್ ಬಗ್ಗೆ ಶಿವಣ್ಣ ಮಾತು!
ಇನ್ನು ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್ ನೋಡಲು ಆಗಮಿಸಿದ್ದರು. ತಿಂಗಳಿಗೆ ಒಮ್ಮೆ ದರ್ಶನ್ ಅಣ್ಣನ ಭೇಟಿ ಮಾಡುತ್ತಿದ್ದೆ ಆದರೆ ಈಗ ಜೈಲಿನಲ್ಲಿ ಇದ್ದಾರೆ. ಹಾಗಾಗಿ ನೋಡಲು ಬಂದೆ. ನಮ್ ಬಾಸ್ ಒಳ್ಳೆಯ ಕೆಲಸಗಳನ್ನು ಜನರಿಗೆ ಮಾಡುತ್ತಿದ್ದರು. ಈಗ ಅವರು ಜೈಲಿನಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ತಂದೆ ತಾಯಿ ಬಿಟ್ರೆ ದರ್ಶನ್ ನನಗೆ ದೇವರುʼʼಎಂದಿದ್ದಾರೆ.
ದರ್ಶನ್ ಭೇಟಿ ಮಾಡಬೇಕೆಂದು ಅಭಿಮಾನಿಯೊಬ್ಬ ರಂಪಾಟವಾಡಿರುವುದು ಕಂಡುಬಂದಿದೆ. ಜೈಲ್ ಚೆಕ್ ಪೋಸ್ಟ್ ಬಳಿ ರಸ್ತೆಯಲ್ಲಿ ಕುಳಿತ ಅಭಿಮಾನಿ, ದರ್ಶನ್ ನೋಡಬೇಕೆಂದು ಕಣ್ಣೀರು ಹಾಕಿದ್ದಾನೆ. ಮದ್ಯಪಾನ ಮಾಡಿ ಬಂದಿದ್ದ ವ್ಯಕ್ತಿ, ದರ್ಶನ್ ನೋಡಲೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಆತನನ್ನು ಮನವೊಲಿಸಲು ಪೊಲೀಸರು ಹೈರಾಣಾದರು.