ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder) ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ್ (Actor Darshan) ಸೆರೆವಾಸ ಇಂದು ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನವೂ ದರ್ಶನ್ ಅವರ ಅಮ್ಮ ಹಾಗೂ ತಮ್ಮ ಮಗನ ಭೇಟಿಗೆ ಸೆರೆಮನೆಯತ್ತ ಕಾಲಿಟ್ಟಿರಲಿಲ್ಲ. ಇಂದಾದರೂ ಅವರು ಆಗಮಿಸಲಿದ್ದಾರಾ ಎಂಬ ಕುತೂಹಲ ಮೂಡಿದೆ. ರಚಿತಾ ರಾಮ್, ರಕ್ಷಿತಾ, ಪ್ರೇಮ್ ಸೇರಿದಂತೆ ಸಾಕಷ್ಟು ಮಂದಿ ದರ್ಶನ್ ಪರ ನಿಂತಿದ್ದಾರೆ. ಈಗ ನಾದ ಬ್ರಹ್ಮ ಹಂಸಲೇಖ ಕೂಡ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಂಸಲೇಖ ಮಾತನಾಡಿ ʻʻನಾವು ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷ ಇದೆಯಲ್ಲ ಅದನ್ನು ಕ್ಯಾರೆಕ್ಟರ್ ಮಾಡಬೇಕು. ಸಿಟ್ಟು ಅಂದರೆ ಅದೊಂದು ಸ್ಕ್ರಿಪ್ಟ್ . ದ್ವೇಷ ಅಂದರೆ ಅದು ಕ್ಯಾರೆಕ್ಟರ್ ಅಯ್ಯ. ಆತರ ಸಿನಿಮಾದಲ್ಲಿ ತೋರಿಸಬೇಕಷ್ಟೆ ನಾವು. ನಿಜ ಜೀವನದಲ್ಲಿ ಸ್ಕ್ರಿಪ್ಟ್ ತರಬಾರದು. ನಿಜ ಜೀವನದಲ್ಲಿ ಕ್ಯಾರೆಕ್ಟರ್ ಅನ್ನು ತರಬಾರದು. ಇದು ಕಲಾವಿದರ ಕರ್ತವ್ಯ.” ಎಂದು ಹಂಸಲೇಖ ಹೇಳಿದ್ದಾರೆ.
“ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ನನ್ನ ಮಗು ತಪ್ಪು ಮಾಡಿದ್ದರೆ, ತಂದೆ ಎಷ್ಟು ನೋವು ತಿಂತಾನೋ ಅಷ್ಟೇ ನಾನು ನೋವು ತಿನ್ನುತ್ತೀನಿ. ಆ ಮಗು ಕೂಡ ಅಷ್ಟೇ ನೋವು ತಿನ್ನುತ್ತಿರುತ್ತೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆ ನೋಡೋಣ.” ಎಂದು ದರ್ಶನ್ ಜೈಲು ಸೇರಿರುವ ಬಗ್ಗೆ ಹಂಸಲೇಖ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Actor Darshan: ಇಂದಾದ್ರೂ ಭೇಟಿಗೆ ಬರ್ತಾರಾ ದರ್ಶನ್ ಅಮ್ಮ, ತಮ್ಮ?
ಕನ್ನಡ ಚಿತ್ರರಂಗದ ನಷ್ಟದ ಹಾದಿ ಹಿಡಿದಿರುವ ಬಗ್ಗೆನೂ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. “ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟು ಪ್ರಶಸ್ತಿಗಳು. ಎಷ್ಟು ರಾಷ್ಟ್ರ ಪ್ರಶಸ್ತಿಗಳು. ಎಷ್ಟು ಗೌರವ. ಎಂತಹ ಪ್ರತಿಭಾವಂತರು ಹುಟ್ಟಿ ಬೆಳೆದಿದ್ದಾರೆ. ಅಂದರೆ, ಆ ಎತ್ತರಕ್ಕೆ ಏರಿದ್ದಾರೆ. ಆ ಎತ್ತರಕ್ಕೆ ಹೋದ ಮೇಲೆ ಅಲ್ಲಿಂದ ಕೆಳಗೆ ಬೀಳಬೇಕಾಗುತ್ತೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದ ಕೂಡಲೇ ಅಲ್ಲಿಂದ ಮತ್ತೆ ಏಳುವ ಚಾನ್ಸ್ ಇದೆ.” ಎಂದು ಹಂಸಲೇಖ ಚಿತ್ರರಂಗದ ಬಗ್ಗೆ ಹೇಳಿದ್ದಾರೆ.
ಜೈಲೂಟ ಒಗ್ಗದೆ ಇದ್ದರೂ ವಿಧಿಯಿಲ್ಲದೆ ಜೈಲೂಟ ಸವಿಯುತ್ತಿರುವ ದರ್ಶನ್ ಇಂದು ಜೈಲಿನ ಮೆನುವಿನಂತೆ ಉಪ್ಪಿಟ್ಟು ಸೇವಿಸಿದ್ದಾನೆ. ಜೈಲಿನಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ನಟ ದರ್ಶನ್ ತಾಯಿ ಮತ್ತು ಸಹೋದರ ಇಂದು ಭೇಟಿ ನೀಡಲಿದ್ದು, ದರ್ಶನ್‌ಗೆ ತಾಯಿ ಮತ್ತು ಸಹೋದರ ಧೈರ್ಯ ಹೇಳಲಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ದರ್ಶನ್ ಮಡದಿ ಮಗ ಆಗಮಿಸಿದ್ದರು. ಅವರು ಬಂದು ಹೋದ ದಿನ ಖುಷಿಯಾಗಿದ್ದ ದರ್ಶನ್, ಬಳಿಕ ಮತ್ತೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗಿ ಹೋಗಿದ್ದಾನೆ. ಸಹ ಬಂಧಿಗಳ ಜೊತೆ ಬೆರೆಯದೆ ಒಬ್ಬಂಟಿಯಾಗಿ ಕುಳಿತು ಮೌನಕ್ಕೆ ಶರಣಾಗಿದ್ದಾನೆ.