ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ (Actor Darshan) ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಮನೆ ಊಟ, ಮಲಗಲು ಹಾಸಿಗೆ, ಓದಲು ಕೆಲವು ಪುಸ್ತಕಗಳನ್ನು ಮನೆಯಿಂದ ತರಿಸಿಕೊಳ್ಳಲು ಅವಕಾಶ ಕೊಡಬೇಕೆಂದು ಹೈಕೋರ್ಟ್ಗೆ ಜುಲೈ 19 ರಂದು ರಿಟ್ ಅರ್ಜಿ ಸಲ್ಲಿಸಿದ್ದರು. ಅಂದರೆ ಜುಲೈ 18ಕ್ಕೆ ಮುಂದೂಡಿತ್ತು. ಆದರೆ ಈಗ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 19 ಅಂದರೆ ನಾಳೆಗೆ ಮುಂದೂಡಲಾಗಿದೆ. ಹಾಗೇ ಆಗಸ್ಟ್ 1 ರವರೆಗೆ ದರ್ಶನ್ ಅಂಡ್ ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶ ನೀಡಿದೆ. ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿಶ್ವನಾಥ ಸಿ ಗೌಡರ್ ಆದೇಶವಾಗಿದೆ.
ದರ್ಶನ್ & ಗ್ಯಾಂಗ್ ನ್ಯಾಯಾಂಗ ಬಂಧನ ವಿಸ್ತರಣೆಗೆ 13 ಕಾರಣ ನೀಡಿದ ಪೊಲೀಸರು.
1) ಪ್ರಕರಣದ ಎ1 ರಿಂದ ಎ17 ಆರೋಪಿಗಳು ಅಪಹರಣ, ಕೊಲೆ, ಒಳ ಸಂಚು, ಮತ್ತು ಸಾಕ್ಷಿನಾಶಪಡಿಸಿದಂತ ಒಂದು ಗಂಭೀರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವುದು ಇದುವರೆಗೂ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿದಾರರ ಹೇಳಿಕೆ, ತಾಂತ್ರಿಕ ಮತ್ತು ಸಾಕ್ಷಾಧಾರಗಳಿಂದ ದೃಢಪಟ್ಟಿರುತ್ತದೆ.
2) ಪ್ರಕರಣದಲ್ಲಿ ಈವರೆಗೆ 83,65,500/- ರೂಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದು ಸದರಿ ಹಣವನ್ನು ಆರೋಪಿಗಳಿಗೆ ನೀಡಿರುವ ಕೆಲವು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ಪಡೆದುಕೊಂಡಿರುತ್ತದೆ, ಮುಂದುವರೆದು ಆರೋಪಿಗಳಿಗೆ ಹಣ ನೀಡಿದ ಇನ್ನು ಕೆಲವರನ್ನು ವಿಚಾರಣೆ ಮಾಡಿ ಹೇಳಿಕೆ ಪಡೆದುಕೊಳ್ಳುವುದು ಹಾಗೂ ಹಾಗೂ ಹಣದ ಮೂಲದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಬೇಕಾಗಿರುತ್ತದೆ.
3) ಪ್ರಕರಣದ ತನಿಖಾ ಕಾಲದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ವಾಹನಗಳ ಪೈಕಿ ಕೆಲವು ವಾಹನಗಳು ಬೇರೆ ಬೇರೆಯವರ ಹೆಸರಿನಲ್ಲಿದ್ದು ಸದರಿ ವಾಹನದ ಆರ್‌ಸಿ ಮಾಲೀಕರನ್ನು ಪತ್ತೆ ಮಾಡಿ ಹೇಳಿಕೆ ದಾಖಲಿಸಿಕೊಳ್ಳಬೇಕಾಗಿರುತ್ತದೆ.
4) ಎಲ್ಲಾ ಎ1 ರಿಂದ ಎ17 ಆರೋಪಿಗಳು ಸಮಾನ ಉದ್ದೇಶದಿಂದ ಕೃತ್ಯ ವೆಸಗಲು ಒಳಸಂಚು ರೂಪಿಸಿರುವುದು ಮತ್ತು ಕೃತ್ಯ ನಡೆದ ನಂತರ ಭೌತಿಕ ಮತ್ತು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಈಗಾಗಲೇ ನಾಶಪಡಿಸಿರುವುದು ಮತ್ತು ನಾಶಪಡಿಸಲು ಪ್ರಯತ್ನಿಸಿರುವುದು ತನಿಖೆಯಲ್ಲಿ ದೃಢಪಟ್ಟಿರುತ್ತದೆ.
5) ಪ್ರಕರಣದ ಎ-13 ಆರೋಪಿಯ ವರ್ತಮಾನದ ಮೇರೆಗೆ ಅಮಾನತ್ತುಪಡಿಸಿಕೊಂಡ ಹೊಂಡಾ ಡಿಯೋ ಕೆ.ಎ- 51, ಹೆಚ್‌ಡಿ-9022 ಈ ವಾಹನವು ಕಳುವಾಗಿರುವ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿರುವುದು ತನಿಖೆಯಲ್ಲಿ ತಿಳಿದು ಬಂದಿದ್ದು ಈ ಬಗ್ಗೆ ಸದರಿ ಪೊಲೀಸ್ ಠಾಣೆಯಿಂದ ದಾಖಲಾತಿಗಳನ್ನು ಸಂಗ್ರಹಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗಿರುತ್ತದೆ
ಇದನ್ನೂ ಓದಿ: Actor Darshan: ಇಂದು ಜಡ್ಜ್ ಮುಂದೆ ದರ್ಶನ್ & ಟೀಂ ಹಾಜರು; ಜೈಲುವಾಸ ಮುಕ್ತಾಯವಾಗುತ್ತಾ?
6) ಆರೋಪಿಗಳ ಪೈಕಿ ಕೆಲವು ಆರೋಪಿಗಳು ಕೃತ್ಯಕ್ಕೆ ಬಳಸಿಕೊಂಡಿದ್ದ ಮೊಬೈಲ್ ಸಿಮ್ ಗಳನ್ನು ಬೇರೆಯವರ ಹೆಸರಿನಲ್ಲಿ ಖರೀದಿ ಮಾಡಿ ಉಪಯೋಗಿಸಿರುವುದು ತನಿಖೆಯಲ್ಲಿ ದೃಡಪಟ್ಟಿದ್ದು, ಸದರಿ ಸಿಮ್ಗಳು ನೊಂದಣಿಯಾದ ವ್ಯಕ್ತಿಗಳ ಮಾಹಿತಿಯನ್ನು ಸಂಗ್ರಹಿಸಿ ಹೇಳಿಕೆ ದಾಖಲಿಸಿದ್ದು ಇನ್ನು ಕೆಲವು ಸಿಮ್ ಖರೀದಿದಾರರ ವಿಳಾಸವನ್ನು ಪತ್ತೆ ದಾಖಲಿಸಿಕೊಳ್ಳಬೇಕಾಗಿರುತ್ತದೆ. ಮಾಡಿ ಅವರುಗಳನ್ನು ಮಾಡಿ ವಿಚಾರಣೆ ಹೇಳಿಕೆ.
7) ಪ್ರಕರಣದ ತನಿಖಾ ಕಾಲದಲ್ಲಿ ಅಮಾನತ್ತು ಪಡಿಸಿಕೊಂಡು ಪರಿಶೀಲಿಸಲಾದ ತಾಂತ್ರಿಕ ಸಾಕ್ಷ್ಯಾಧಾರಗಳಲ್ಲಿ ಎಲ್ಲಾ ಆರೋಪಿಗಳು ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು ಇನ್ನೂ ಹಲವಾರು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ತಜ್ಞರ ಪರಿಶೀಲನೆಗೆ ಕಳುಹಿಸಿದ್ದು ವರದಿ ಸಂಗ್ರಹಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಬೇಕಾಗಿರುತ್ತದೆ.
8) ಪ್ರಕರಣದಲ್ಲಿ ಅಮಾನತ್ತುಪಡಿಸಿಕೊಂಡ ಆರೋಪಿಗಳಿಗೆ ಸಂಬಂಧಿಸಿದ ಮೊಬೈಲ್‌ಗಳನ್ನು ಹಾಗೂ ಸಾಕ್ಷಿದಾರರಿಂದ ಅಮಾನತ್ತುಪಡಿಸಿಕೊಂಡ ಮೊಬೈಲ್ ಪೋನ್‌ಗಳಲ್ಲಿನ ಪ್ರಕರಣಕ್ಕೆ ಪೂರಕವಾದ ದತ್ತಾಂಶವನ್ನು ಸಂಗ್ರಹಿಸಲು ಮತ್ತು ದತ್ತಾಂಶದ ಅಸಲುತನದ ಪರೀಕ್ಷೆಗಾಗಿ ಸಿ.ಎಫ್.ಎಸ್.ಎಲ್ ಹೈದ್ರಾಬಾದ್‌ಗೆ ಕಳುಹಿಸಿಕೊಟ್ಟಿದ್ದು ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
9) ಪ್ರಕರಣದಲ್ಲಿ ಅಮಾನತ್ತುಪಡಿಸಿಕೊಂಡಿರುವ ಡಿ.ವಿ.ಆರ್‌ಗಳಲ್ಲಿನ ದತ್ತಾಂಶದ ರಿಟ್ರಿವ್ ಕಾರ್ಯವು ಸಿಐಡಿ ಅಧಿಕಾರಿಗಳ ಬಳಿ ಇನ್ನು ಪ್ರಗತಿಯಲ್ಲಿರುತ್ತದೆ, ಡಿವಿಆರ್‌ನಲ್ಲಿನ ದತ್ತಾಂಶವನ್ನು ಸಂಗ್ರಹಿಸಿದ ನಂತರ ಪರಿಶೀಲನೆ ಮಾಡಿ ಆರೋಪಿಗಗಳು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿ ಎಫ್.ಎಸ್.ಎಲ್‌ಗೆ ಕಳುಹಿಸಿ ವರದಿಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.
10) ಪ್ರಕರಣದಲ್ಲಿ ಆರೋಪಿಗಳು ಕೃತ್ಯಕ್ಕೆ ಮೊದಲು ಹಾಗೂ ಕೃತ್ಯದ ಸಮಯದಲ್ಲಿ ಹಾಗೂ ಕೃತ್ಯದ ನಂತರ ಹಲವಾರು ವ್ಯಕ್ತಿಗಳನ್ನು ಸಂಪರ್ಕಿಸಿದ್ದು ಅವರ ಪೈಕಿ ಕೆಲವಾರು ಸಾಕ್ಷಿದಾರರನ್ನು ವಿಚಾರಣೆ ಮಾಡಿದ್ದು, ಇನ್ನು ಹಲವು ಸಾಕ್ಷಿದಾರರುಗಳನ್ನು ವಿಚಾರಣೆ ಮಾಡಿ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿರುತ್ತದೆ. ಈ ಸಮಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ಸಾಕ್ಷ್ಯ ನಾಶ ಮಾಡುವ ಸಾದ್ಯತೆ ಹೆಚ್ಚಾಗಿರುತ್ತದೆ.
11) ಪ್ರಕರಣದಲ್ಲಿ ಇನ್ನೂ ಹಲವಾರು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷಿದಾರರುಗಳನ್ನು ವಿಚಾರಣೆ ಮಾಡಿ ಹೇಳಿಕೆಗಳನ್ನು ಹಾಗೂ ಕಲಂ 164 ಅಡಿ ಹೇಳಿಕೆಗಳನ್ನು ಪಡೆದುಕೊಳ್ಳಬೇಕಾಗಿದ್ದು ಈ ಹಂತದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದಲ್ಲಿ ಪ್ರಕರಣದ ಸಾಕ್ಷಿದಾರರಿಗೆ ಹೇಳಿಕೆ ನೀಡದಂತೆ ನೇರವಾಗಿ ಮತ್ತು ಅವರ ಸಹಚರರ ಮೂಲಕ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯಲ್ಲಿ ಸಾಕ್ಷ್ಯ ನಾಶ ಮಾಡುವ ಸಾದ್ಯತೆ ಹೆಚ್ಚಾಗಿರುತ್ತದೆ. ಅಲ್ಲದೇ ಸಾಕ್ಷಿದಾರರಿಗೆ ಬೆದರಿಕೆ ಹಾಕಿರುವ ಬಗ್ಗೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ನಂ-315/2024 ರೀತ್ಯ ದೂರು ದಾಖಲಾಗಿರುತ್ತದೆ
12) ಪ್ರಕರಣದ ಆರೋಪಿಗಳು ಪ್ರಭಾವಿಗಳು ಹಾಗೂ ಹಣಬಲ ಮತ್ತು ಅಭಿಮಾನಿ ಬಳಗವನ್ನು ಹೊಂದಿದ್ದು ಪ್ರಕರಣದಲ್ಲಿ ಇನ್ನೂ ಹಲವಾರು ಪ್ರತ್ಯಕ್ಷ ಹಾಗೂ ಪರೋಕ್ಷ ಸಾಕ್ಷ್ಯಗಳನ್ನು ಸಂಗ್ರಹಿಸಬೇಕಾಗಿರುತ್ತದೆ. ಈ ಸಮಯದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದಲ್ಲಿ ತಮ್ಮ ಪ್ರಭಾವಗಳನ್ನು ಬಳಸಿ ಪ್ರಕರಣದ ಸಾಕ್ಷಿದಾರರುಗಳಿಗೆ ಸಾಕ್ಷಿ ನುಡಿಯದಂತೆ ಬೆದರಿಕೆ ಹಾಕುವ ಮತ್ತು ವ್ಯವಸ್ಥಿತ ರೀತಿಯನ್ನು ಸಾಕ್ಷ್ಯನಾಶ ಪಡಿಸುವ ಸಾದ್ಯತೆಗಳು ಹೆಚ್ಚಾಗಿರುತ್ತದೆ.
13) ಪ್ರಕರಣವು ಹಾಲಿ ತನಿಖೆಯಲ್ಲಿದ್ದು ಪ್ರಕರಣದಲ್ಲಿ ಎಲ್ಲಾ ಆರೋಪಿಗಳ ಕೃತ್ಯದಲ್ಲಿನ ಅವರ ಸಂಪೂರ್ಣ ಪಾತ್ರದ ಬಗ್ಗೆ ಹೆಚ್ಚಿನ ವಿಷಯಗಳನ್ನು ತಿಳಿಯಬೇಕಾಗಿದ್ದು ಈ ಬಗ್ಗೆ ತನಿಖೆ ಮುಂದುವರೆದಿರುತ್ತದೆ.
ಈ ಮೇಲ್ಕಂಡ ಎಲ್ಲಾ ಕಾರಣಗಳಿಂದ ಎ1 ರಿಂದ ಎ17 ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡದೇ ನ್ಯಾಯಾಂಗ ಬಂಧನ ಮುಂದುವರಿಸುವಂತೆ ಮನವಿ.