ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ (Actor Darshan) ಮತ್ತು ಅವರ ಗೆಳತಿ ಪವಿತ್ರಾ ಗೌಡ ಇಂದೇ (ಜೂನ್ 15) ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಇದೀಗ ಬಂದಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೂ ದರ್ಶನ್ ಪೊಲೀಸರ ಮುಂದೆ ಹೇಳೋದು ಒಂದೇ ಮಾತು ಅದು ಏನೆಂದರೆ ʻʻಸರ್ ನನಗೇನೂ ಗೊತ್ತಿಲ್ಲ. ರೇಣುಕಾ ಸ್ವಾಮಿನ ಕರ್ಕೊಂಡು ಬಂದಿದ್ದ ದಿನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿದ್ದೆ, ನನ್ನ ಇಂಟೆನ್ಷನ್ ಅವನನ್ನ ಕೊಲೆ ಮಾಡಬೇಕು ಎಂದು ಇರಲಿಲ್ಲʼʼ ಎಂದು ಪದೇಪದೇ ಇದೇ ಹೇಳಿಕೆ ಹೇಳುತ್ತಿದ್ದಾರಂತೆ.
ದರ್ಶನ್ ಪೊಲೀಸರು ಮುಂದೆ ಮಾತನಾಡಿದ್ದು ಹೀಗೆ: ʻʻಸರ್ ನನಗೇನೂ ಗೊತ್ತಿಲ್ಲ. ರೇಣುಕಾನನ್ನ ಕರ್ಕೊಂಡ್ ಬಂದಿರೋದು ನನಗೆ ಗೊತ್ತಿಲ್ಲ. ರೇಣುಕಾಸ್ವಾಮಿ ಕರ್ಕೊಂಡ್ ಬಂದಿದ್ದ ದಿನ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಲ್ಲಿ ಇದ್ದೆ. ಹುಡುಗರ ಜತೆ ಎಣ್ಣೆ ಹಾಕ್ತಿದ್ದಾಗ ಪವನ್ ಅಲ್ಲಿಗೆ ಬಂದಿದ್ದ. ನನ್ನ ಕಿವಿಯಲ್ಲಿ ರೇಣುಕಾಸ್ವಾಮಿ ಕರ್ಕೊಂಡ್ ಬಂದಿರೋದಾಗಿ ಹೇಳಿದ್ದ. ನಾನು ಸೀದಾ ಅಲ್ಲಿಂದ ಮನೆಗೆ ಹೋಗಿ ಪವಿತ್ರಾನಾ ಕರ್ಕೊಂಡು ಶೆಡ್‌ಗೆ ಹೋದೆ. ನನ್ನ ಇಂಟೆನ್ಷನ್ ಅವನನ್ನ ಕೊಲೆ ಮಾಡಬೇಕು ಎಂದು ಇರಲಿಲ್ಲ. ನಾಲ್ಕು ಏಟು ಬಿಟ್ಟು ಅವನ ಕೈಯಿಂದ ಸಾರಿ ಕೇಳಿಸಬೇಕು ಎಂದು ಇದ್ದೆ. ಅದೇ ರೀತಿ ಅಲ್ಲಿಗೆ ಹೋದಾಗ ನನ್ನ ಹಾಗೂ ಪವಿತ್ರಾನ ನೋಡುತ್ತಿದ್ದಂತೆ ಅವನು ತಪ್ಪಾಯ್ತು ಎಂದು ಕೇಳಿಕೊಂಡ. ಆಮೇಲೆ ನಾನು ಅವನಿಗೆ ಎರಡು ಏಟು ಹೊಡೆದೆ. ಅವನಿಗೆ ಊಟಕ್ಕೆ ಕಾಸ್ ಕೊಟ್ಟು ಊಟ ಮಾಡ್ಕೋಂಡು ಊರಿಗೆ ಹೋಗು ಎಂದು ಹೇಳಿ ಬಂದೆ. ನಾನು ಅಲ್ಲಿಂದ ಬಂದ ಮೇಲೆ ಇವ್ರೆಲ್ಲಾ ಸೇರಿ ಹೀಗ್ ಮಾಡಿ ನನ್ನ ತಲೆ ತಂದಿದ್ದಾರೆ. ಅಷ್ಟೆ ಸರ್ʼʼ ಎಂದು ದರ್ಶನ್ ಪೊಲೀಸರ ಮುಂದೆ ಪದೇಪದೇ ಹೇಳಿದ್ದಾರೆ.
ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ
ಸ್ಕಾರ್ಪಿಯೋ ಕಾರಿನ ಮೇಲಿದ್ದ ಗುರುತು ತೆಗಿಸಿದ್ದ ಆರೋಪಿಗಳು!
ಇನ್ನು ಶವ ಸಾಗಿಸಿದ ಸ್ಕಾರ್ಪಿಯೋ ಕಾರಿನ ಮೇಲೆ ಮೊದಲು ದರ್ಶನ್ ಫೋಟೊ ಇತ್ತು. ಆ ಬಳಿಕ ಆರೋಪಿಗಳು ಮಾಸ್ಟರ್ ಪ್ಲ್ಯಾನ್ ಮಾಡಿ ಕಾರಿನ ಗುರುತು ಸಿಗಬಾರದು ಎಂದು ಕಾರಿನ ಮೇಲಿದ್ದ ಡಿ ಬಾಸ್ ಫೋಟೊ ಹಾಗೂ ಗುರುತುಗಳನ್ನು ನಾಶ ಮಾಡಿದ್ದರು. ಸಂಚಾರ ಪೊಲೀಸರ ಟ್ರಾಫಿಕ್ ವೈಲೇಶನ್ ರೆಕಾರ್ಡ್‌ನಲ್ಲಿ ಈ ಕಾರಿನ ಫೋಟೊ ಸೆರೆಯಾಗಿದೆ.
ಮೃತ ರೇಣುಕಾಸ್ವಾಮಿ ಹಲ್ಲೆ ಮಾಡಲು ಲಾಠಿ, ರೀಪಿಸ್ ಪಟ್ಟಿ, ದೊಣ್ಣೆ, ಬೆಲ್ಟ್ ಬಳಕೆಯಾಗಿತ್ತು. ಕೈ ಕಾಲುಗಳನ್ನು ಕಟ್ಟಿಹಾಕಿ ಲಾಠಿಯಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಎರಡು ಮೂರು ಲಾಠಿಗಳು ಒಡೆದು ಹೋದರೂ ಬಿಡದೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಕೃತ್ಯದ ಸಮಯದಲ್ಲಿ ಆರೋಪಿಗಳು ಧರಿಸಿದ್ದ ಬಟ್ಟೆ ಶೂಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾಠಿ ಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದೆ. ಇದೀಗ ಆರೋಪಿಗಳು ಬಳಸಿದ ಈ ಎಲ್ಲ ವಸ್ತುಗಳನ್ನು ಎಫ್ ಎಸ್ ಎಲ್‌ಗೆ ಕಳುಹಿಸಿ ವರದಿ ಪಡೆಯಲು ನಿರ್ಧಾರ ಆಗಿದೆ ಎನ್ನಲಾಗಿದೆ.