ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಬಂಧಿತನಾಗಿರುವ ನಟ ದರ್ಶನ್‌ಗೆ (Actor Darshan) ಮತ್ತೆ ಪರಪ್ಪನ ಅಗ್ರಹಾರವೇ ಗತಿಯಾಗಿದೆ. ನಟ ದರ್ಶನ್ ಸೇರಿ ಹಲವು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಜುಲೈ 18ರವರೆಗೆ ವಿಸ್ತರಣೆ ಮಾಡಲಾಗಿದೆ. ಇದೀಗ ಪೊಲೀಸ್ ತನಿಖೆ ವೇಳೆ ದರ್ಶನ್ ಬಳಸುತ್ತಿದ್ದ ಸಿಮ್ ಸೀಕ್ರೆಟ್ ರಿವೀಲ್ ಆಗಿದೆ. ನಟ ದರ್ಶನ್ ಮಾತ್ರವಲ್ಲ, ಪವಿತ್ರಗೌಡ, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಕೂಡ ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ತನಿಖೆ ವೇಳೆ ಬಯಲಿಗೆ ಬಂದಿದೆ. ಹೀಗಾಗಿ ಸಿಮ್ ಖರೀದಿದಾರರಿಗೆ ಪೊಲೀಸರು ನೋಟಿಸ್ ನೀಡಲು ಮುಂದಾಗಿದ್ದಾರೆ. ಮಾತ್ರವಲ್ಲ ದರ್ಶನ್ ಪರಿಚಯಸ್ಥರ ವಿಚಾರಣೆಗೆ ಕೂಡ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.
ಪೊಲೀಸ್ ತನಿಖೆ ವೇಳೆ ಆರೋಪಿಗಳು ಬೇರೊಬ್ಬರ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದೆ. ಮಾಹಿತಿ ಸಂಗ್ರಹಿಸಿ ಪರಿಶೀಲನೆ ವೇಳೆ ಸಿಮ್ ಕಾರ್ಡ್ ರಹಸ್ಯ ಬಯಲಾಗಿದೆ. ಹೇಮಂತ್ ಹೆಸರಿನಲ್ಲಿರುವ ಸಿಮ್‌ವನ್ನು ದರ್ಶನ್ ಬಳಸುತ್ತಿದ್ದರೆ, ಪವಿತ್ರಗೌಡ ಅವರು ಮನೋಜ್ ಹೆಸರಿನಲ್ಲಿದ್ದ ಸಿಮ್ ಬಳಸುತ್ತಿದ್ದರು. ಆರೋಪಿ ನಂದೀಶ್ ಅವರು ಹೇಮಂತ್ ಹೆಸರಿನಲ್ಲಿ, ಆರೋಪಿ ಪ್ರದ್ಯೂಷ್ ಖಾಸಗಿ ಕಂಪನಿ ಸೀನಿಯರ್ ಮ್ಯಾನೇಜರ್ ಹೆಸರಿನಲ್ಲಿ, ಆರೋಪಿ ಕಾರ್ತಿಕ್ ಅವರು ವೇಲು ಎಂಬಾತನ ಹೆಸರಲ್ಲಿ, ಕೇಶವಮೂರ್ತಿ ಅರು ಪ್ರಜ್ಞಾ ಎಂ ಹೆಸರಲ್ಲಿ, ನಿಖಿಲ್ ನಾಯಕ್ ಅವರು ಗೀತಾ ಹೆಸರಲ್ಲಿ ಸಿಮ್ ಬಳಕೆ ಮಾಡುತ್ತಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಇದನ್ನೂ ಓದಿ: Actor Darshan: ದರ್ಶನ್ ಅತ್ಯಂತ ಸರಳ, ದೇವತಾ ಮನುಷ್ಯ; ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದ ಖ್ಯಾತ ನಟಿ!
ಸದರಿ ಸಿಮ್ ಮಾಲೀಕರ ವಿಚಾರಣೆಗೆ ಪೊಲೀಸರು ಮುಂದಾಗಿದ್ದಾರೆ. ನೋಟಿಸ್ ನೀಡಿ ವಿಚಾರಣೆ ಮಾಡಲು ಪೊಲೀಸರು ಸಿದ್ಧತೆ ಮಾಡುತ್ತಿದ್ದಾರೆ. ಮಾತ್ರವಲ್ಲ ಬೆಂಗಳೂರಿನ ಪ್ರಭಾವಿ ಶಾಸಕನ ಕಾರು ಚಾಲಕನಿಗೂ ನೋಟಿಸ್ ನೀಡಿಲಾಗಿದೆ. ಕಾರ್ತಿಕ್ ಪುರೋಹಿತ್ ಎಂಬ ಕಾರು ಚಾಲಕನಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ತಲುಪುತ್ತಿದ್ದಂತೆ ಪುರೋಹಿತ್ ಎಸ್ಕೇಪ್ ಆಗಿದ್ದಾನೆ. ಈತ ಆರೋಪಿ ಪ್ರದೋಷ್‌ಗೆ ಆಪ್ತನಾಗಿದ್ದ.
ದರ್ಶನ್ ಪರಿಚಯಸ್ಥರ ವಿಚಾರಣೆಗೆ ಸಿದ್ಧತೆ
ಈಗಾಗಲೇ ಪೊಲೀಸರು ದರ್ಶನ್ ಪರಿಚಯಸ್ಥರ ವಿಚಾರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ದರ್ಶನ್‌ನ ಇಬ್ಬರು ಪರಿಚಯಸ್ಥರನ್ನು ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ. ಸಾಕ್ಷಿದಾರರು ಎಂದು ಪರಿಗಣಿಸಿ ಹೇಳಿಕೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೋಹನ್ ರಾಜು ಹಾಗೂ ಪ್ರಕಾಶ್ ಹೇಳಿಕೆ ಪಡೆಯಲಿದ್ದಾರೆ. ಹಣಕ್ಕೆ ಸಂಬಂಧಿಸಿದಂತೆ ಹಾಗೇ ಇಬ್ಬರು ಪರಿಚಯಸ್ಥರ ಜೊತೆಗೆ ಇನ್ನೂ ಕೆಲವರ ವಿಚಾರಣೆ ಆಗಲಿದೆ.
ದರ್ಶನ್ ಮನೆ ಕೆಲಸಗಾರರಾದ ಬಾಬುಲ್ ಖಾನ್, ಸುಶೀಲಮ್ಮ ಮತ್ತು ಅಮೀರ್ ಖಾನ್ ,ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಕೆಲಸಗಾರ ಚೇತನ್ ಗೌಡ ಹೇಳಿಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಆರೋಪಿ ಪವಿತ್ರಗೌಡ ಸ್ನೇಹಿತೆ ಸಮಂತ ಎಂಬಾಕೆಗೂ ವಿಚಾರಣೆ ಬಿಸಿ ತಟ್ಟಿದೆ. ಇದರ ಜೊತೆಗೆ ಇನ್ನಷ್ಟು ಪರೋಕ್ಷ ಸಾಕ್ಷಿಗಳ ಸಂಗ್ರಹ ಕೂಡ ಆಗುತ್ತಿದೆ. ಪೊಲೀಸರು ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ.