ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ (Actor Darshan) ಮನೆ ಊಟ ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ವಜಾ ಮಾಡಿ ಎಂಬ ಆದೇಶ ಈಗಾಗಲೇ ಬಂದಿದೆ. ಹೀಗಾಗಿ ದರ್ಶನ್‌ಗೆ ಸಂಕಷ್ಟಗಳು ಮಾತ್ರ ನಿವಾರಣೆ ಆಗುತ್ತಿಲ್ಲ. ಇದೀಗ ದರ್ಶನ್ ಬೇಗ ಬಿಡುಗಡೆ ಆಗಲಿ ಎಂದು ವಿಜಯಲಕ್ಷ್ಮೀ ಅವರು ದೇವರ ಮೋರೆ ಹೋಗಿದ್ದಾರೆ. ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿ ದೇವಾಲಯದಲ್ಲಿ ನವ ಚಂಡಿಕಾ ಹೋಮ ಮಾಡಿಸಿದ್ದಾರೆ.
ನರಸಿಂಹ ಅಡಿಗ ನೇತೃತ್ವದಲ್ಲಿ ನವ ಚಂಡಿಕಾ ಹೋಮ, ಪಾರಾಯಣ ನಡೆದಿದೆ. ದರ್ಶನ್ ಬಂಧನ ಮುಕ್ತಿಗಾಗಿ ವಿಜಯಲಕ್ಷ್ಮೀ ಪ್ರಾರ್ಥನೆ ಮಾಡಿದ್ದಾರೆ. ಜುಲೈ 24ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಸಹೋದರ ದಿನಕರ್ ತೂಗುದೀಪ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ಮಾಡಿದ್ರು. ಮಗನ ಸ್ಕೂಲ್ ಸೀಟ್ ವಿಚಾರಕ್ಕೆ ಚರ್ಚೆ ಮಾಡಿದ್ರು ಎನ್ನಲಾಗ್ತಿದೆ. ದರ್ಶನ್ ವಿಚಾರವಾಗಿ ಮಾತುಕತೆ ನಡೆದಿಲ್ಲ ಎನ್ನಲಾಗ್ತಿದೆ.
ದರ್ಶನ್ ಮನೆ ಊಟದ ಅರ್ಜಿ ವಜಾ ಆಗಲು ಕಾರಣ ಇದು
ಕರ್ನಾಟಕ ಪ್ರಿಸನ್ಸ್ ಕರೆಕ್ಷನ್ ಮ್ಯಾನ್ಯುಲ್ 2021ರ ಸೆಕ್ಷನ್ 728ರ ಪ್ರಕಾರ ಕೊಲೆ ಆರೋಪಿಗೆ ಮನೆ ಊಟಕ್ಕೆ ಅವಕಾಶ ಇಲ್ಲ. ಅಲ್ಲದೆ ಜೈಲು ಅಧಿಕಾರಿಗಳು ನೀಡಿರುವ ವರದಿಯಲ್ಲಿ ಮನೆಯೂಟದ ಅವಶ್ಯಕತೆ ಕಾಣಿಸುತ್ತಿಲ್ಲ. ಜತೆಗೆ ಮನೆ ಊಟದ ಅವಶ್ಯಕತೆ ಸಂಬಂಧ ಪೂರಕವಾದ ವೈದ್ಯಕೀಯ ಪ್ರಮಾಣಪತ್ರಗಳು ಇಲ್ಲ-ಈ ಮೂರು ಅಂಶಗಳನ್ನಿಟ್ಟು ದರ್ಶನ್ ಅರ್ಜಿ ವಜಾಗೊಂಡಿದೆ.
ದರ್ಶನ್ ಪರ ವಕೀಲ ವಕೀಲರ ವಾದ ಏನಾಗಿತ್ತು?
ಜುಲೈ 22ರಂದು ದರ್ಶನ್ ಪರ ವಕೀಲ ವಕೀಲ ರಾಘವೇಂದ್ರ ವಾದ ಮಂಡಿಸಿ, ದರ್ಶನ್‌ಗೆ ಜೈಲು ಊಟ ಜೀರ್ಣವಾಗುತ್ತಿಲ್ಲ, ಅತಿಸಾರವಾಗುತ್ತಿದೆ. ಹೀಗಾಗಿ ಖಾಸಗಿ ಊಟ, ಹಾಸಿಗೆ ಕೆಳಲಾಗುತ್ತಿದೆ. ವಿಚಾರಣಾಧೀನ ಕೈದಿಗೆ ಮನೆಯೂಟ ಪಡೆಯಲು ಅವಕಾಶವಿದೆ. ತನಿಖೆ ಪೂರ್ಣವಾಗದ ಸಂಧರ್ಬದಲ್ಲಿ ಮನೆ ಊಟ ನೀಡಲು ಅವಕಾಶವಿದೆ. ಕರ್ನಾಟಕ ಕಾರಾಗೃಹ ಕಾಯ್ದೆ ಪ್ರಕಾರ ಸಿವಿಲ್ ಕೈದಿ ಹಾಗೂ ವಿಚಾರಣಾಧೀನ ಕೈದಿಗೆ ಸ್ವಂತ ಹಣದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಅಧಿಕಾರಿಗಳೇ ರೇಷನ್ ನೀಡಬೇಕು. ಸೆಂಟ್ರಲ್ ಕಿಚನ್‌ನಲ್ಲಿ ಅಡುಗೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಮನವಿ ಸಲ್ಲಿಸಿದ್ದರು.
ದರ್ಶನ್ ಒಬ್ಬ ಸೆಲೆಬ್ರಿಟಿ ಅಗಿರುವುದರಿಂದ ಪ್ರಚಾರ ಸಿಗುತ್ತದೆ. ಆಗಾಗಿಯೇ ಜೈಲು ಅಧಿಕಾರಿಗಳು ಮನೆ ಊಟಕ್ಕೆ ಅವಕಾಶ ನೀಡುತ್ತಿಲ್ಲ. ಆರೋಪ ಸಾಬೀತಾಗುವವರೆಗೂ ಮುಗ್ಧನೆಂದು ಪರಿಗಣಿಸಿ ಮನೆ ಊಟ, ಹಾಸಿಗೆ ಒದಗಿಸಬೇಕೆಂದು ಹೇಳಿದ್ದರು.
ಇದನ್ನೂ ಓದಿ: Actor Darshan: ನಟ ದರ್ಶನ್‌ಗೆ ಜೈಲೂಟ ಫಿಕ್ಸ್; ಕೋರ್ಟ್ ಮನೆಯೂಟದ ಅರ್ಜಿ ವಜಾಗೊಳಿಸಿದ್ದೇಕೆ?
ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ಆಗಲ್ಲ
ಇದಕ್ಕೆ ಎಸ್‌ಪಿಪಿ ಪ್ರಸನ್ನ ಕುಮಾರ್ ಪ್ರತಿವಾದ ಆರಂಭಿಸಿ, ಜೈಲು ಊಟ ಜೀರ್ಣವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಮೆಡಿಕಲ್ ರಿಪೋರ್ಟ್ ಕೋರ್ಟ್‌ಗೆ ಸಲ್ಲಿಸಿದ್ದೇವೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸುವಾಗ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಅವರಿಗೆ ಆರ್ಥೋಪೆಡಿಕ್ ಸಮಸ್ಯೆ ಇದೆ. ಅದಕ್ಕೆ ಮೊದಲು ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದನ್ನ ಮುಂದುವರಿಸಲು ಸೂಚನೆ ನೀಡಿದ್ದರು. ಈಗ ಡಯಟ್ ಪುಡ್ ಕೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಜೈಲು ಮ್ಯಾನ್ಯುವಲ್ ಪ್ರಕಾರ ಏನೇನು ನೀಡಬೇಕೋ ಅದನ್ನು ನೀಡುತ್ತಿದ್ದೇವೆ. ಜೈಲು ಕೈಪಿಡಿಯಲ್ಲಿ ಮನೆ ಊಟ ಎಂಬ ಪದವೇ ಇಲ್ಲ. ಹುಷಾರಿಲ್ಲದ ವೇಳೆ ಎಕ್ಟ್ರಾ ಡಯಟ್ 30 ದಿನ ನೀಡಬಹುದು. ವಾರದಲ್ಲಿ ಒಂದು ದಿನ ಮೊಟ್ಟೆ ಹಾಗೂ ಬಾಳೆ ಹಣ್ಣು ನೀಡಬಹುದು. ಜ್ವರ ಇದ್ದಾಗ ಬಿಸಿ ನೀರು ನೀಡುತ್ತಾರೆ. ಪ್ರತಿದಿನ ಬಿರಿಯಾನಿ ತಿನ್ನಬೇಕು ಅಂದ್ರೆ ನಿಯಮದಲ್ಲಿ ಅವಕಾಶ ಇಲ್ಲ ಎಂದು ತಿಳಿಸಿದ್ದರು.