Site icon Vistara News

Actor Dwarakish: ಪತ್ನಿ, ಮಕ್ಕಳಿದ್ದರೂ ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು ದ್ವಾರಕೀಶ್​​

Actor Dwarakish

ಬೆಂಗಳೂರು: ಮದುವೆಯಾಗಿ ಮಕ್ಕಳಾದ ಮೇಲೆ ಇನ್ನೊಂದು ಮದುವೆ ಅಷ್ಟೊಂದು ಸುಲಭವಲ್ಲ. ಅದೂ ಪ್ರೀತಿಸಿ ಮದುವೆಯಾಗುವುದೆಂದರೆ ಅದೊಂದು ಅಪರೂಪದಲ್ಲೊಂದು ಪ್ರಕರಣವಾಗುವುದು ಖಚಿತ. ಅಂಥದ್ದೇ ಅಪರೂಪದ ವ್ಯಕ್ತಿಯಾಗಿದ್ದು ನಟ ದ್ವಾರಕೀಶ್​. ಸಿನಿಮಾ ನಟನಾಗಿ. ನಿರ್ಮಾಪಕನಾಗಿದ್ದುಕೊಂಡು ಸಿನಿಮಾ ಕತೆಯ ರೀತಿಯಲ್ಲೇ ತಮ್ಮ ಜೀವನವನ್ನು ಸಾಗಿಸಿದ್ದರು ಸ್ಯಾಂಡಲ್​ವುಡ್​ನ ಕುಳ್ಳ. ಆದರೆ ನನ್ನ ಬದುಕಲ್ಲಿ ಎಲ್ಲವೂ ಸುಖಾಂತ್ಯವಾಗಿ ಎಂದು ನಗುತ್ತಿದ್ದರು ಹಾಸ್ಯ ನಟ (comedian) ದ್ವಾರಕೀಶ್ (actor dwarakish).

ನಟನಾಗಿ (actor), ನಿರ್ಮಾಪಕನಾಗಿ (producer), ನಿರ್ದೇಶಕನಾಗಿ (director) ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ದ್ವಾರಕೀಶ್ ಅವರ ವಯಕ್ತಿಕ ಬದುಕು ಕೂಡ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಏನೂ ಇರಲಿಲ್ಲ. ಮದುವೆಯಾಗಿ, ಮಕ್ಕಳಿದ್ದರೂ ಅವರು ಎರಡನೇ ಬಾರಿ ಪ್ರೀತಿಯಲ್ಲಿ ಬಿದ್ದರು. ಅದನ್ನು ಸುಖಾಂತ್ಯಗೊಳಿಸಲು ಪ್ರಯತ್ನಿಸಿದ್ದರು.

ಮೊದಲ ಮದುವೆ

ವಯಸ್ಸಿನಲ್ಲಿ ದೊಡ್ಡವರೂ, ಸಂಬಂಧಿಯು ಆಗಿದ್ದ ಅಂಬುಜಾ ಅವರನ್ನು ಪ್ರೀತಿಸಿ 1967 ಏಪ್ರಿಲ್ 26ರಂದು ದ್ವಾರಕೀಶ್ ಕೈ ಹಿಡಿದಿದ್ದು, ನಾಲ್ಕು ಗಂಡು ಮಕ್ಕಳ ತಂದೆಯಾದರು. ಇದಾಗಿ ಕೆಲವು ವರ್ಷಗಳ ಬಳಿಕ ಅಕ್ಕನ ಮಗಳಿಗೆ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಶೈಲಜಾ ಅವರು ದ್ವಾರಕೀಶ್‌ ಬಳಿ ಬಂದಿದ್ದರು.

ಇದನ್ನೂ ಓದಿ: ‌Actor Dwarakish: ಚಿತ್ರರಂಗ ಮಾತ್ರವಲ್ಲ, ರಾಜಕೀಯಕ್ಕೂ ಎಂಟ್ರಿ ಕೊಟ್ಟಿದ್ದ ದ್ವಾರಕೀಶ್!

ಪ್ರೀತಿಯಲ್ಲಿ ಬಿದ್ದ ಕುಳ್ಳ

ಈ ಮೂಲಕ ಶೈಲಜಾ ದ್ವಾರಕೀಶ್‌ ಅವರಿಗೆ ಪರಿಚಿತರಾದರು. ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಹಾಗೂ ನಟ ದ್ವಾರಕೀಶ್‌ ಅವರ ನಡುವೆ ಮೊದಲು ಸ್ನೇಹ ಬೆಳೆದು ಬಳಿಕ ಅದು ಪ್ರೀತಿಗೆ ತಿರುಗಿತ್ತು. ಆದರೆ ಈ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಗೆ ಹೇಳಬೇಕು ಎನ್ನುವ ಗೊಂದಲ, ಚಿಂತೆ ಅವರನ್ನು ಕಾಡಿತ್ತು. ಹೀಗಾಗಿ ಒಂದು ದಿನ ಎಲ್ಲರಿಗೂ ವಿಷಯ ತಿಳಿಸಬೇಕು ಎಂದು ನಿರ್ಧರಿಸಿಯೇ ಬಿಟ್ಟರು.

ಹೆಂಡತಿ ಒಪ್ಪಿಗೆ

ಈ ವಿಷಯವನ್ನು ಮನೆ ಮಂದಿಗೆ ತಿಳಿಸಬೇಕು ಎಂದು ನಿರ್ಧರಿಸಿ ಮನೆ ಮಂದಿಯನ್ನೆಲ್ಲ ಕರೆದುಕೊಂಡು ಮದ್ರಾಸ್ ನ ಫೈವ್ ಸ್ಟಾರ್ ಹೊಟೇಲ್ ಗೆ ಹೋದ ಅವರು ಊಟ ಮಾಡುವ ಮುನ್ನ ಪತ್ನಿ ಅಂಬುಜಾ ಅವರಿಗೆ ಒಂದು ನೋಟ್ ಪುಸ್ತಕ ಕೊಟ್ಟು ಹೀಗೆ ಹೇಳಿದರು…

ಇದೊಂದು ಕಾದಂಬರಿ ಅಂತಾ ತಿಳಿದುಕೋ. ಆದರೆ ಇದು ನನ್ನ ಜೀವನದ ಕಥೆ. ನಾನು ಪ್ರೀತಿಯಲ್ಲಿ ಬಿದ್ದಿದ್ದೇನೆ. ಆಕೆಯ ಹೆಸರು ಶೈಲಜಾ. ನೀನು ಒಪ್ಪಿದರೆ ಮದುವೆಯಾಗುತ್ತೇನೆ. ಇಲ್ಲವಾದರೆ ಇಲ್ಲ. ಎಲ್ಲವನ್ನೂ ಮರೆತು ಬಿಡಲು ಪ್ರಯತ್ನಿಸುತ್ತೇನೆ. ಈ ನೋಟ್ ಪುಸ್ತಕದ ಕೊನೆಯಲ್ಲಿ ನಿನ್ನ ಅಭಿಪ್ರಾಯವನ್ನು ಬರೆ. ಅದು ಖುಷಿ ಕೊಟ್ಟರೂ ಸರಿ ದುಃಖ ನೀಡಿದರೂ ಸರಿ ನಾನು ಅದನ್ನು ಸ್ವೀಕರಿಸುತ್ತೇನೆ ಎಂದು ಹೇಳಿ ಮೌನವಾದರು.

ಸುಮಾರು ಐದು ನಿಮಿಷ ಯೋಚಿಸಿದ ಅಂಬುಜಾ, ನೋಟ್ ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಏನೋ ಬರೆದರು. ಬಳಿಕ ಅದನ್ನು ತೆರೆದು ಓದಿದ ದ್ವಾರಕೀಶ್ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಂಬುಜಾ ಅವರು ಅದರಲ್ಲಿ ನಿಮ್ಮ ಸಂತೋಷವೇ ನನ್ನ ಸಂತೋಷ ಎಂದು ಹೇಳಿದ್ದರು.

ಎರಡನೇ ಮದುವೆ

ಮಡದಿಯ ಒಪ್ಪಿಗೆ ಸಿಕ್ಕಿದ ಬಳಿಕ ಅಲ್ಲಿಂದಲೇ ಶೈಲಜಾ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರು. ಅಂಬುಜಾ ಕೂಡಾ ಶೈಲಜಾ ಅವರೊಂದಿಗೆ ಮಾತನಾಡಡಿದ್ದರು. ಈ ವಿಷಯ ಕೇಳಿ ಅವರ ಮಕ್ಕಳೂ ಖುಷಿ ಪಟ್ಟಿದ್ದರು. ಎಲ್ಲರೂ ಶುಭ ಹಾರೈಸಿದರು. ಬಳಿಕ ಎಲ್ಲರ ಸಮ್ಮುಖದಲ್ಲೂ ಶೈಲಜಾ ಅವರನ್ನು ಮದುವೆಯಾಗಿರುವುದಾಗಿ ದ್ವಾರಕೀಶ್ ನೆನಪಿಸಿಕೊಂಡಿದ್ದರು.

ದ್ವಾರಕೀಶ್ ಅವರಿಗೆ ಎರಡನೇ ಮದುವೆಯಾದಾಗ ಅವರಿಗೆ 51 ವರ್ಷ. ಮೊದಲ ಹೆಂಡತಿಯ ಒಪ್ಪಿಗೆ ಪಡೆದು ಅವರು ಎರಡನೇ ಮದುವೆಯಾದರೂ ಇದು ಆಗ ಸಾಕಷ್ಟು ವಿವಾದ ಎಬ್ಬಿಸಿತ್ತು.


ದ್ವಾರಕೀಶ್ ಮತ್ತು ಅಂಬುಜಾ ಅವರ ಮೊದಲ ಮಗ ತಂದೆಯೊಂದಿಗೆ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಉಳಿದವರು ಒಂದೆರಡು ಚಿತ್ರಗಳ ಬಳಿಕ ಬೇರೆ ಕೆಲಸಗಳಲ್ಲಿ ಆಸಕ್ತಿ ತೋರಿಸಿದರು. ದ್ವಾರಕೀಶ್ ಮತ್ತು ಶೈಲಜಾ ಅವರಿಗೆ ಓರ್ವ ಮಗನಿದ್ದಾನೆ. ಒಟ್ಟಿನಲ್ಲಿ ಇಬ್ಬರು ಮಡದಿಯರ ಮುದ್ದಿನ ಗಂಡನಾಗಿ ದ್ವಾರಕೀಶ್ ಅವರ ಪ್ರೇಮ ಕಥೆ ಅವರ ಎರಡನೇ ಮದುವೆ ವೇಳೆ ಸಾಕಷ್ಟು ಸುದ್ದಿ ಮಾಡಿತ್ತು.

Exit mobile version