Site icon Vistara News

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅವಾರ್ಡ್: ನಾಮ ನಿರ್ದೇಶನದಲ್ಲಿ ದರ್ಶನ್, ರಕ್ಷಿತ್ ಚಿತ್ರಗಳಿಗೆ ಸಿಂಹಪಾಲು

award

award

ಬೆಂಗಳೂರು: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ (Chandanavana Film Critics Academy Awards) ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು. ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ (Indrajith Lankesh) ಮತ್ತು ನಟಿ ಅಮೂಲ್ಯ (Amulya) ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನಗಳನ್ನು ಘೋಷಿಸಲಾಗಿದೆ. ಈ ಪೈಕಿ ದರ್ಶನ್ ನಟನೆಯ ʼಕಾಟೇರʼ (Kaatera) ಚಿತ್ರವು ಅತೀ ಹೆಚ್ಚು ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದ್ದು, ರಕ್ಷಿತ್ ಶೆಟ್ಟಿ ಅಭಿನಯದ ʼಸಪ್ತ ಸಾಗರದಾಚೆ ಎಲ್ಲೋʼ (Sapta Saagaradaache Ello) ಸಿನಿಮಾ ಎರಡನೇ ಸ್ಥಾನ ಪಡೆದಿದೆ.

ಅತ್ಯುತ್ತಮ ನಟ (ದರ್ಶನ್), ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ (ತರುಣ್ ಸುಧೀರ್) ಸೇರಿದಂತೆ ‘ಕಾಟೇರ’ ಸಿನಿಮಾ ಬರೋಬ್ಬರಿ 15 ವಿಭಾಗಗಳಲ್ಲಿ ನಾಮ ನಿರ್ದೇಶನಗೊಂಡಿದೆ. ಅತ್ಯುತ್ತಮ ನಟ (ರಕ್ಷಿತ್ ಶೆಟ್ಟಿ) ಸೇರಿದಂತೆ ʼಸಪ್ತ ಸಾಗರದಾಚೆ ಎಲ್ಲೋʼ 13 ವಿಭಾಗಗಳಲ್ಲಿ ಕಾಣಿಸಿಕೊಂಡಿದೆ. ಐದು ಚೊಚ್ಚಲ ಪ್ರಶಸ್ತಿಗಳು ಸೇರಿದಂತೆ ಒಟ್ಟು 25 ವಿಭಾಗಗಳಲ್ಲಿ ಈ ನಾಮ ನಿರ್ದೇಶನಗೊಂಡಿದ್ದು, ಚೊಚ್ಚಲ ವಿಭಾಗದಲ್ಲಿ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ, ʼಡೇರ್ ಡೆವಿಲ್ ಮುಸ್ತಫಾʼ, ʼಆಚಾರ್ ಆ್ಯಂಡ್‌ ಕೋʼ ಚಿತ್ರಗಳು ಕೂಡ ನಾನಾ ವಿಭಾಗಗಳಲ್ಲಿ ಕಾಣಿಸಿಕೊಂಡಿವೆ.

ಇಂದ್ರಜಿತ್ ಲಂಕೇಶ್ ಮಾತನಾಡಿ, ʼʼಕನ್ನಡದ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನು ಗುರುತಿಸುವಲ್ಲಿ ಮತ್ತು ಚಿತ್ರೋದ್ಯಮವನ್ನು ಉತ್ತೇಜಿಸಲು ಚಲನಚಿತ್ರ ಪತ್ರಕರ್ತರು ಪ್ರಶಸ್ತಿಯನ್ನು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆʼʼ ಎಂದು ಶ್ಲಾಘಿಸಿದರು. ನಟಿ ಅಮೂಲ್ಯ ಮಾತನಾಡಿ ʼʼಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿ ಪ್ರಶಸ್ತಿ ಅಂದರೆ ಅದೊಂದು ದೊಡ್ಡ ಗೌರವ. ಟೀಕಿಸುವ ಪತ್ರಕರ್ತರೇ ಮೆಚ್ಚಿ ಪ್ರಶಸ್ತಿ ಕೊಡುವಾಗ ಆಗುವ ಖುಷಿಯೇ ಬೇರೆ. ನಾಮ ನಿರ್ದೇಶನಗೊಂಡ ಎಲ್ಲರಿಗೂ ಮತ್ತು ಪ್ರಶಸ್ತಿ ಪಡೆಯುವ ಪ್ರತಿಯೊಬ್ಬರಿಗೂ ಶುಭಾಶಯಗಳುʼʼ ಎಂದರು.

ಅಕಾಡೆಮಿಯು ಪ್ರಶಸ್ತಿಗಳನ್ನು ನೀಡುವುದರ ಜತೆಗೆ ಪ್ರತಿ ವರ್ಷವೂ ಸಮಾಜಮುಖಿ ಕೆಲಸಗಳನ್ನು ಉತ್ತೇಜಿಸುವಂತಹ ಕೆಲಸಕ್ಕೆ ಮುಂದಾಗಿದೆ. ಈ ಬಾರಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಜತೆ ಅಂಗಾಂಗ ದಾನ ಅಭಿಯಾನಕ್ಕೆ ಕೈ ಜೋಡಿಸಿದೆ. ಈ ಕುರಿತು ಮಾತನಾಡಿದ ಬೆಂಗಳೂರಿನ ಕಾವೇರಿ ಆಸ್ಪತ್ರೆಯ ಉಪಾಧ್ಯಕ್ಷ ವೆಲ್ ಫ್ರೆಡ್ ಸ್ಯಾಮ್ಸನ್ ʼʼಅಂಗಾಂಗ ದಾನ ಪ್ರಚಾರಕ್ಕೆ ಚಿತ್ರೋದ್ಯಮದ ಕೊಡುಗೆ ಅಪಾರ. ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರು ಕಣ್ಣುದಾನ ಮಾಡುವ ಮೂಲಕ ಸಾಕಷ್ಟು ಜನರಿಗೆ ಪ್ರೇರಣೆ ನೀಡಿದ್ದಾರೆ. ಸಂಚಾರಿ ವಿಜಯ್ ಅವರು ಅಂಗಾಂಗ ದಾನ ಮಾಡಿದ್ದರೆ, ಲೋಕೇಶ್ ಹಾಗೂ ಲೋಹಿತಾಶ್ವ ಅವರು ದೇಹದಾನ ಮಾಡಿದ್ದಾರೆ. ಇಂತಹ ಉದ್ಯಮಕ್ಕೆ ಬೆಂಬಲವಾಗಿ ನಿಂತಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡಮಿಯ ಕಾರ್ಯಕ್ರಮಕ್ಕೆ ನಾವು ಭಾಗವಾಗಿದ್ದು ಹೆಮ್ಮೆ ಅನಿಸುತ್ತದೆʼʼ ಎಂದು ಹೇಳಿದರು.

ನಟ ಶರಣ್ ನಾಮ ನಿರ್ದೇಶನದ ಪಟ್ಟಿಯನ್ನು ಬಿಡುಗಡೆ ಮಾಡಿ, ʼʼವಿಮರ್ಶಕರು ನೀಡುವ ಪ್ರಶಸ್ತಿ ಅತ್ಯಂತ ಜವಾಬ್ದಾರಿಯಿಂದ ಕೂಡಿರುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದು ಹೆಮ್ಮೆ ತಂದಿದೆʼʼ ಎಂದು ತಿಳಿಸಿದರು.
ಜನವರಿ 28ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ನಾಮಿನೇಷನ್‌ ವಿವರ

ಅತ್ಯುತ್ತಮ ಚೊಚ್ಚಲ ನಿರ್ಮಾಣ-ಡಾ. ಪುನೀತ್ ರಾಜಕುಮಾರ್ ಪ್ರಶಸ್ತಿ

ಅತ್ಯುತ್ತಮ ಚೊಚ್ಚಲ ನಟಿ-ತ್ರಿಪುರಾಂಬ ಅವಾರ್ಡ್

ಅತ್ಯುತ್ತಮ ಚೊಚ್ಚಲ ನಟ-ಸಂಚಾರಿ ವಿಜಯ್ ಪ್ರಶಸ್ತಿ

ಅತ್ಯುತ್ತಮ ಚೊಚ್ಚಲ ಬರಹಗಾರ-ಚಿ.ಉದಯಶಂಕರ್ ಪ್ರಶಸ್ತಿ

ಚೊಚ್ಚಲ ನಿರ್ದೇಶನ-ಶಂಕರ್‌ ನಾಗ್‌ ಪ್ರಶಸ್ತಿ

ಅತ್ಯುತ್ತಮ ವಿಎಫ್‍ಎಕ್ಸ್‌

ಅತ್ಯುತ್ತಮ ಕಲಾ ನಿರ್ದೇಶನ

ಅತ್ಯುತ್ತಮ ಸಾಹಸ ನಿರ್ದೇಶನ

ಅತ್ಯುತ್ತಮ ಛಾಯಾಗ್ರಹಣ

ಅತ್ಯುತ್ತಮ ಸಂಕಲನ

ಅತ್ಯುತ್ತಮ ನೃತ್ಯ ನಿರ್ದೇಶನ

ಅತ್ಯುತ್ತಮ ಚಿತ್ರ ಸಾಹಿತ್ಯ

ಅತ್ಯುತ್ತಮ ಹಿನ್ನೆಲೆ ಸಂಗೀತ

ಅತ್ಯುತ್ತಮ ಹಿನ್ನೆಲೆ ಗಾಯಕಿ

ಅತ್ಯುತ್ತಮ ಹಿನ್ನೆಲೆ ಗಾಯಕ

ಅತ್ಯುತ್ತಮ ಸಂಗೀತ ನಿರ್ದೇಶನ

ಅತ್ಯುತ್ತಮ ಬಾಲ ಕಲಾವಿದ / ಕಲಾವಿದೆ

ಅತ್ಯುತ್ತಮ ಪೋಷಕ ನಟಿ

ಅತ್ಯುತ್ತಮ ಪೋಷಕ ನಟ

ಅತ್ಯುತ್ತಮ ನಟಿ

ಅತ್ಯುತ್ತಮ ನಟ

ಅತ್ಯುತ್ತಮ ಸಂಭಾಷಣೆ

ಅತ್ಯುತ್ತಮ ಚಿತ್ರಕಥೆ

ಅತ್ಯುತ್ತಮ ನಿರ್ದೇಶಕ

ಅತ್ಯುತ್ತಮ ಚಿತ್ರ

ಇದನ್ನೂ ಓದಿ: Vijay Raghavendra: ವಿಜಯ್‌ ರಾಘವೇಂದ್ರ ಈಗ ಖಡಕ್‌ ಪೊಲೀಸ್‌; ʼಕೇಸ್ ಆಫ್ ಕೊಂಡಾಣʼ ಚಿತ್ರದ ಟ್ರೈಲರ್‌ ಔಟ್‌

Exit mobile version