Site icon Vistara News

Dhanya Ramkumar: ಧನ್ಯಾ ರಾಮ್‌ಕುಮಾರ್ ನಟನೆಯ ʻಹೈಡ್ ಆ್ಯಂಡ್ ಸೀಕ್ʼ ಸಿನಿಮಾ ಟ್ರೈಲರ್‌ ಔಟ್‌!

Dhanya Ramkumar hide and seek trailer Out

ಬೆಂಗಳೂರು: ಯುವನಟ ಅನೂಪ್ ರೇವಣ್ಣ ಅಭಿನಯದ ನಾಲ್ಕನೇ ಚಿತ್ರ ʻಹೈಡ್ ಆ್ಯಂಡ್ ಸೀಕ್ʼ ಮಾರ್ಚ್ 15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸುನೇರಿ ಆರ್ಟ್ ಕ್ರಿಯೇಶನ್ಸ್ ಮೂಲಕ ಪುನೀತ್ ನಾಗರಾಜು ಹಾಗೂ ವಸಂತ್‌ರಾವ್ ಎಂ. ಕುಲಕರ್ಣಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪುನೀತ್ ನಾಗರಾಜು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಿ.ಪ.ಸದಸ್ಯ ಎಸ್.ವಿಶ್ವನಾಥ್ ಅವರುಗಳು ಟ್ರೈಲರ್ ರಿಲೀಸ್ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ರೇವಣ್ಣ ಅವರ ಅನೇಕ ಸ್ನೇಹಿತರು ಹಾಜರಿದ್ದು, ಶುಭ ಹಾರೈಸಿದರು. ಈ ಚಿತ್ರದಲ್ಲಿ ಅನೂಪ್ ರೇವಣ್ಣ ಅವರು ಒಬ್ಬ ಕಿಡ್ನಾಪರ್ ಆಗಿ ಕಾಣಿಸಿಕೊಂಡಿದ್ದಾರೆ. ಧನ್ಯಾ ರಾಮ್‌ಕುಮಾರ್ (Dhanya Ramkumar) ಚಿತ್ರದ ನಾಯಕಿ.

ವೇದಿಕೆಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ ʻʻರೇವಣ್ಣ ಅವರ ಮಗ ಹೀರೋ ಆಗಿ ನಟಿಸಿರುವ ಈ ಚಿತ್ರ ಯಶಸ್ವಿಯಾಗಲಿ, ಇದು ಅವರ ನಾಲ್ಕನೇ ಚಿತ್ರ. ಟ್ರೈಲರ್ ನಲ್ಲಿ ಆತನ ಅಭಿನಯ ಚೆನ್ನಾಗಿ ಬಂದಿದೆ, ಚಿತ್ರವೂ ಸಹ ಚೆನ್ನಾಗಿರುತ್ತದೆ, ಈ ಸಿನಿಮಾದಲ್ಲಿ ಕೆಲಸ ಮಾಡಿದ ಎಲ್ಲರಿಗೂ ಒಳ್ಳೆಯ ಹೆಸರು ಬರಬೇಕುʼʼ ಎಂದು ಶುಭ ಹಾರೈಸಿದರು. ಎಸ್.ವಿಶ್ವನಾಥ್ ಮಾತನಾಡುತ್ತ ʻʻಈ ಚಿತ್ರದಲ್ಲಿ ನಮ್ಮ ಹುಡುಗನೇ ಹೀರೋ ಆಗಿದ್ದಾನೆ. ರಾಜ್‌ಕುಮಾರ್ ಅವರ ಮೊಮ್ಮಗಳು ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಎಲ್ಲರ ಮನಗೆಲ್ಲಲಿ ಎಂದು ಹಾರೈಸಿದರು.
ಸೀನಿಯರ್ ಪ್ರೊಫೆಸರ್ ಡಿ.ಕೆ.ರವಿ ಮಾತನಾಡಿ ಟ್ರೈಲರ್ ತುಂಬಾ ಇಂಪ್ರೆಸಿವ್ ಆಗಿದೆ. ಅನೂಪ್ ಒಳ್ಳೇ ಹುಡುಗ, ಆತನಿಗೆ ಉತ್ತಮ ಭವಿಷ್ಯವಿದೆ, ನಾಯಕಿ ಕೂಡ ಶೃಗಾರ್ ನಾಗರಾಜ್ ಹಾಗೂ ರಾಜ್‌ಕುಮಾರ್ ಅವರ ಮೊಮ್ಮಗಳು, ಎಲ್ಲರೂ ಚಿತ್ರ ನೋಡಿ ಹರಸಿʼʼ ಎಂದು ಹೇಳಿದರು.

ಇದನ್ನೂ ಓದಿ: Sarfaraz Khan: ಸೂರ್ಯಕುಮಾರ್​ಗೆ ಧನ್ಯವಾದ ತಿಳಿಸಿದ ಸರ್ಫರಾಜ್ ತಂದೆ; ಕಾರಣವೇನು?


ನಂತರ ಮಾಜಿ ಸಚಿವ ರೇವಣ್ಣ ಮಾತನಾಡಿ ʻʻಚಿತ್ರರಂಗ ಇವತ್ತು ಚಾಲೆಂಜಿಂಗ್ ಏರಿಯಾ ಆಗಿದೆ. ಕನ್ನಡ ಚಿತ್ರರಂಗಕ್ಕೆ ಹಿಂದೆ ಸೀಮಿತ ಮಾರುಕಟ್ಟೆ ಇತ್ತು, ಈಗದು ವಿಸ್ತಾರವಾಗಿದೆ. ನಾನು ಈ ಚಿತ್ರದ ಶೂಟಿಂಗ್ ಟೈಮ್‌ನಲ್ಲಿ ಹೋಗಿದ್ದೇನೆ, ಎಲ್ಲರೂ ಕುಟುಂಬದ ರೀತಿ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು. ನಟ ಹಾಗೂ ಧನ್ಯಾ ಸಹೋದರ ಧೀರೇನ್ ರಾಮ್ ಕುಮಾರ್ ಮಾತನಾಡಿಹೈಡ್ ಆ್ಯಂಡ್ ಸೀಕ್ ಮಾ.15ಕ್ಕೆ ರಿಲೀಸ್‌ ಆಗುತ್ತಿದೆ ನನ್ನ ತಂಗಿ ಧನ್ಯಾ, ಅನೂಪ್ ಚಿತ್ರವನ್ನು ಪ್ರೋತ್ಸಾಹಿಸಿʼʼ ಎಂದು ಕೇಳಿಕೊಂಡರು.

ನಾಯಕಿ ಧನ್ಯಾ ರಾಮಕುಮಾರ್ ಮಾತನಾಡಿ ʻʻನನ್ನ ಪಾತ್ರದ ಹೆಸರು ಹಾಸಿನಿ. ಒಳ್ಳೇ ಫ್ಯಾಮಿಲಿಯಿಂದ ಬಂದ ಹುಡುಗಿ. ಅಂಥ ಹುಡುಗಿ ಕಿಡ್ನ್ಯಾಪ್ ಆದಾಗ ಆಕೆ ಎದುರಿಸಿದ ಪರಿಸ್ಥಿತಿ ಎಂಥಾದ್ದು, ಆ ಕಿಡ್ನಾಪರ್‌ ಉದ್ದೇಶ, ಹಿನ್ನೆಲೆ ಏನು ಅನ್ನೋದರ ಮೇಲೆ ಈ ಸಿನಿಮಾ ನಿಂತಿದೆʼʼ ಎಂದು ಹೇಳಿದರು, ರಿಜೋ ಪಿ.ಜಾನ್ ಅವರ ಛಾಯಾಗ್ರಾಹಣ, ಸ್ಯಾಂಡಿ ಅದಾನ್ಕಿ ಅವರ ಸಂಗೀತ ಸಂಯೋಜನೆ, ಮಧು ತುಂಬಕೆರೆ ಅವರ ಸಂಕಲನ ಈ ಚಿತ್ರಕ್ಕಿದೆ.

Exit mobile version