Site icon Vistara News

Duniya Vijay: ಸರ್ಕಸ್‌ ಮಾಡಿ ಗೆದ್ದ ಮೆಟ್ಟಿಲನ್ನು ಕಾಪಾಡಿಕೊಂಡು ಹೋಗು: ಮಗಳಿಗೆ ವಿಜಯ್‌ ಹಾರೈಕೆ!

Duniya Vijay

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijayಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಇಂದು (ಏ.11) ಸಿನಿಮಾದ ಮುಹೂರ್ತ ನೆರವೇರಿದೆ. ವಿಶೇಷ ಅಂದರೆ ಈ ಸಿನಿಮಾ ಮೂಲಕ ದುನಿಯಾ ವಿಜಯ್‌ ಅವರ ಮಗಳು ಮೋನಿಕಾ ಸಿನಿರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ‘ಕಾಟೇರ’ ಚಿತ್ರಕ್ಕೆ ಕಥೆ ಬರೆದಿದ್ದ ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೋನಿಕಾ ಈಗ ಹೆಸರು ಬದಲಾಯಿಸಿಕೊಂಡಿದ್ದಾರೆ. ಸಿನಿಮಾಗಾಗಿ ರಿತಾನ್ಯಾ ಎಂದು ಹೆಸರು ಇಟ್ಟುಕೊಂಡಿದ್ದಾರೆ.

ದುನಿಯಾ ವಿಜಯ್‌ ಈ ಸಂದರ್ಭದಲ್ಲಿ ಮಾತನಾಡಿ ʻʻಇಂದು ತಂಬ ವಿಶೇಷವಾದ ದಿನ. ಇವತ್ತಿಗೆ ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಕಳೆದವು. ಅದೇ ನಾನು ಮಗಳಿಗೆ ಹೇಳುತ್ತಿದ್ದೆ. ನಾನು ಸರ್ಕಸ್‌ ಮಾಡಿ ಇವತ್ತಿಗೆ 30 ವರ್ಷ ಆಯ್ತು. ಈ ಸ್ಥಾನಕ್ಕೆ ಬರುವುದಕ್ಕೆ 18 ವರ್ಷ ಬೇಕಾಯ್ತು. ಅದಕ್ಕೂ ಮುಂಚೆ ಹೀರೊ ಆಗುವುದಕ್ಕೆ ಸರ್ಕಸ್ ಹೊಡೆದಿದ್ದು 10 -12 ವರ್ಷ. ಇಲ್ಲಿವರೆಗೂ ಬರೋಕೆ ಮೆಟ್ಟಲಾಗಿದ್ದೇ ಪ್ರತಿ ದಿನ ನನಗಾಗುತ್ತಿರುವ ಅವಮಾನ ಹಾಗೂ ನೋವುಗಳು. ಅದನ್ನು ಸುಲಭವಾಗಿ ಹತ್ತಿಸಿಕೊಂಡು ಬಂದು ನಿನಗೆ ಕೊಡುತ್ತಿದ್ದೇನೆ. ಅದನ್ನು ಹುಷಾರಾಗಿ ಕಾಪಾಡಿಕೊಂಡು ಹೋಗು ಎಂದು ಮಗಳಿಗೆ ಹೇಳುತ್ತಿದ್ದೆ ಎಂದರು.

ಇದನ್ನೂ ಓದಿ: Duniya Vijay: ಪುತ್ರಿಗಾಗಿ ಹೊಸ ಸಿನಿಮಾ ಅನೌನ್ಸ್‌ ಮಾಡಿದ ದುನಿಯಾ ವಿಜಯ್‌

ಮಾತು ಮುಂದುವರಿಸಿ ʻʻತಂದೆ ಏನೆಲ್ಲ ಮಾಡಬಹುದು ಎಂದರೆ ನನಗಾಗಿ ಮಾಡಿರುವ ಸ್ಕ್ರಿಪ್ಟ್‌ನಲ್ಲೂ ಅರ್ಧ ಕೊಡಬಹುದು. ಜಡೇಶ್ ನನಗೆ ನಾನೇ ಹೀರೊ ಆಗಬೇಕು ಎಂದು ಹೇಳಬಹುದಿತ್ತು. ತಂದೆ ಇದನ್ನೂ ಮಗಳಿಗಾಗಿ ತ್ಯಾಗ ಮಾಡಬಹುದು ಎಂದು ಹೇಳಲು ಇಷ್ಟ ಪಡುತ್ತೇನೆ. ಇವತ್ತಿನಿಂದ ನೀನು ರಿತಾನ್ಯಾ (ಮೋನಿಕಾ). ಮೂವರು ನಿನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾರೆ. ಒಂದು ಯಾವಾಗಲೂ ನಿನ್ನನ್ನು ನೋಡುವ ಮಾಧ್ಯಮ. ಯಾವಾಗಲೂ ನಿನ್ನಲ್ಲಿ ಕಣ್ಣಿಟ್ಟು ತಿದ್ದುವುದಕ್ಕೆ ನೋಡುತ್ತಿರುತ್ತೆ. ಇನ್ನೊಂದು ಅಭಿಮಾನಿಗಳು. ನಮ್ಮನ್ನು ಪ್ರೋತ್ಸಾಹಿಸಿ ಊಟ ಕೊಡುವ ಅಭಿಮಾನಿಗಳು. ಇನ್ನೊಬ್ಬರು ದೇವರು ನೋಡುತ್ತಿರುತ್ತಾರೆʼʼ ಎಂದರು.

ಕೊನೆಗೆ ದುನಿಯಾ ಅವರು ಮಗಳಿಗೆ ʻಸುಖವಾಗಿರು. ದೇವರು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಲಿ. ಇನ್ನೂ ತುಂಬಾನೇ ಕಲಿಯೋದಿದೆ ನೀನುʼ ಎಂದು ಮಾತು ಮಗಿಸಿದರು.

ಸದ್ಯಕ್ಕೆ ಪ್ರೊಡಕ್ಷನ್ ನಂ 2. ಟೈಟಲ್ ಮೂಲಕ ಸಿನಿಮಾ ಚಿತ್ರೀಕರಣ ಚಾಲನೆ ದೊರೆತಿದೆ. ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಇದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ್ಯ ಕಥೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಿಕೊಂಡಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

ಈಗಾಗಲೇ ಸಿನಿಮಾದ ಪೋಸ್ಟರ್‌ ರಿವೀಲ್‌ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ‘ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ’ ಎನ್ನುವ ಲೈನ್ ಕೂಡ ಇದೆ. ಈ ಚಿತ್ರಕ್ಕೆ ರಚಿತಾ ರಾಮ್‍ ನಾಯಕಿ ಎನ್ನಲಾಗಿದೆ. ಜಡೇಶ್‍ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ‘ರಾಜಹಂಸ’, ‘ಜಂಟಲ್‍ಮ್ಯಾನ್‍’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Exit mobile version