Site icon Vistara News

Kantara Movie: ರಾಮೋಜಿ ಫಿಲ್ಮ್‌ ಸಿಟಿ ಮೀರಿಸುವಂತಿದೆಯಂತೆ ʻಕಾಂತಾರ ಚಾಪ್ಟರ್​ 1ʼ ಸೆಟ್‌!

Kantara Movie Massive Set Constructed In Kundapura

ಬೆಂಗಳೂರು: ʼಕಾಂತಾರʼ ಪ್ಯಾನ್‌ (Kantara Movie) ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಹೀಗಾಗಿ ಪ್ರೀಕ್ವೆಲ್ ಕೂಡ ಕನ್ನಡದ ಜತೆಗೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಕೆಲವು ದಿನಗಳ ಹಿಂದೆ ಹೊರ ಬಿದ್ದ ಫಸ್ಟ್‌ ಲುಕ್‌ ಪೋಸ್ಟರ್‌ ದೇಶದ ಗಮನ ಸೆಳೆದಿತ್ತು. ಇದನ್ನೂ ಹೊಂಬಾಳೆ ಫಿಲ್ಮ್ಸ್‌ (Hombale Films) ನಿರ್ಮಿಸಲಿದ್ದು, ಅಂದಾಜು 125 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರೀಕರಣಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಇತ್ತೀಚಿನ ವರದಿಗಳ ಪ್ರಕಾರ ಕುಂದಾಪುರದ ಕರಾವಳಿ ಪ್ರದೇಶದಲ್ಲಿ ಅದ್ಧೂರಿ ಸೆಟ್​ ನಿರ್ಮಿಸಲಾಗಿದೆ. 200×200 ಅಡಿಯ ಬೃಹತ್ ಸೆಟ್ ನಿರ್ಮಿಸಲಾಗಿದೆ.

ಒಂದು ವಾರದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದ್ದು, 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಚಿತ್ರದ ಹೆಚ್ಚಿನ ಭಾಗವನ್ನು ಕಾಡಿನಲ್ಲಿ ಚಿತ್ರೀಕರಿಸಲಿದ್ದರೆ, ಬೃಹತ್ ಸೆಟ್ ಡಬ್ಬಿಂಗ್ ಸ್ಟುಡಿಯೊ ಮತ್ತು ಎಡಿಟಿಂಗ್ ಸೂಟ್ ಒಳಗೊಂಡಿರುತ್ತದೆ ಎಂದು ವರದಿಯಾಗಿದೆ.

ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಸ್ಥಳಗಳಿಂದ ಸೆಟ್ ನಿರ್ಮಾಣಕ್ಕಾಗಿ 600 ನುರಿತ ಬಡಗಿಗಳು ಮತ್ತು ಸ್ಟಂಟ್ ಮಾಸ್ಟರ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಮೋಜಿ ಫಿಲ್ಮ್‌ ಸಿಟಿಯ ನಂತರ ದೇಶದಲ್ಲೇ ಅತಿ ದೊಡ್ಡ ಸೆಟ್‌ ಇದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Kantara Movie: ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರಾ ಮೋಹನ್​ಲಾಲ್?

ಕಾಂತಾರʼ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್‌ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಕ್ರಿ.ಶ. 301-400ರ ಕಾಲಘಟ್ಟದ ಕಥೆ ತೆರೆ ಮೇಲೆ ಅನಾವರಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಿನಿಮಾ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳ ಮೂಲದ ಕಥೆಯನ್ನು ಒಳಗೊಂಡಿದೆ ಎನ್ನಲಾಗುತ್ತಿದೆ.

ಕಾಂತಾರ ಒಂದು ದಂತಕಥೆʼ ಎಂದರೆ ಮೊದಲ ಭಾಗ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಇದೀಗ ಪ್ರೀಕ್ವೆಲ್ ರೈಟ್ಸ್ ಕೂಡ ಅಮೇಜಾನ್ ಪ್ರೈಂ ವಿಡಿಯೋ ಪಾಲಾಗಿದೆ. ಕೆಲವು ಮೂಲಗಳ ಪ್ರಕಾರ ಚಿತ್ರದಲ್ಲಿ ಒಂದಕ್ಕಿಂತ ಹೆಚ್ಚು ನಾಯಕಿಯ ಪಾತ್ರ ಇರಲಿದೆ ಎನ್ನಲಾಗಿದೆ. ಇನ್ನು ಕೆಲವು ವರದಿಗಳು ನಾಯಕಿಯಾಗಿ ರುಕ್ಮಿಣಿ ವಸಂತ್‌ ಆಯ್ಕೆಯಾಗಿದ್ದಾರೆ ಎಂದಿವೆ. ಚಿತ್ರತಂಡ ಇನ್ನೂ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿಲ್ಲ.

ಕಾಂತಾರʼವನ್ನು ಕೇವಲ 16 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣ ಮಾಡಿ ವಿಶ್ವಾದ್ಯಂತ 400 ಕೋಟಿ ರೂ.ಗಳನ್ನು ಗಳಿಸಿತು. ಕಾಂತಾರ ಸಿನಿಮಾ ಸಾರ್ವಕಾಲಿಕವಾಗಿ ಕನ್ನಡದ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತು. ವರದಿಗಳ ಪ್ರಕಾರ ಕಾಂತಾರ 2 ಸಿನಿಮಾ ಬರೋಬ್ಬರಿ 125 ಕೋಟಿ ರೂ. ಬಜೆಟ್‌ನಲ್ಲಿ (budget of 125 crores) ನಿರ್ಮಾಣವಾಗುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Exit mobile version