Site icon Vistara News

Karavali Movie: ಪ್ರಜ್ವಲ್‌ ನಟನೆಯ ʼಕರಾವಳಿʼ ಚಿತ್ರಕ್ಕೆ ಇವರೇ ನಾಯಕಿ; ಪೋಸ್ಟರ್‌ ರಿಲೀಸ್‌

karavali movie

karavali movie

ಬೆಂಗಳೂರು: ಪ್ರಜ್ವಲ್‌ ದೇವರಾಜ್‌ (Prajwal Devaraj) ನಾಯಕನಾಗಿ ನಟಿಸುತ್ತಿರುವ, ಯುವ ನಿರ್ದೇಶಕ ಗುರುದತ್ ಗಾಣಿಗ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಕರಾವಳಿʼ (Karavali Movie) ಚಿತ್ರ ತನ್ನ ಟೈಟಲ್‌, ಪೋಸ್ಟರ್‌, ಟೀಸರ್‌ನಿಂದಲೇ ಕುತೂಹಲ ಕೆರಳಿಸಿದೆ. ಇಷ್ಟು ದಿನ ಚಿತ್ರತಂಡ ನಾಯಕಿ ಯಾರೆನ್ನುವುದನ್ನು ರಿವೀಲ್‌ ಮಾಡಿರಲಿಲ್ಲ. ಇಂದು (ಫೆಬ್ರವರಿ 14) ಸಿನಿಮಾ ತಂಡ ನಾಯಕಿಯನ್ನು ಪರಿಚಯಿಸುವ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ. ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಪದಾ ‘ಕರಾವಳಿ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಯಾರು ಈ ಸಂಪದಾ?

ಕಿರುತೆರೆಯಲ್ಲಿ ಗಮನ ಸೆಳೆದಿದ್ದ ಸಂಪದಾ ಇದೀಗ ಪ್ರಜ್ವಲ್‌ಗೆ ನಾಯಕಿಯಾಗುವ ಮೂಲಕ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಅವರು ʼಮಿಥುನ ರಾಶಿʼ ಎನ್ನುವ ಧಾರಾವಾಹಿಗೆ ಬಣ್ಣ ಹಚ್ಚಿದ್ದರು. ಈ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಆದರೆ ವಿದ್ಯಾಭ್ಯಾಸದ ಕಾರಣದಿಂದ ಕೇವಲ 10 ತಿಂಗಳಿಗೇ ಈ ಧಾರಾವಾಹಿಯಿಂದ ಹೊರ ಬಂದಿದ್ದರು. ಬಳಿಕ 2021ರಲ್ಲಿ ಬಿಡುಗಡೆಯಾದ ನಿಖಿಲ್‌ ಕುಮಾರಸ್ವಾಮಿ ಅಭಿನಯದ ʼರೈಡರ್‌ʼ ಸಿನಿಮಾದಲ್ಲಿ ನಟಿಸಿದ್ದರು. ಜತೆಗೆ ತೆಲುಗಿನ ʼಮಾಸ್‌ ಮಹಾರಾಜುʼ ಚಿತ್ರದಲ್ಲಿಯೂ ನಟಿಸಿದ್ದರು. ಇದೀಗ ʼಕರಾವಳಿʼ ಚಿತ್ರದಲ್ಲಿ ದಕ್ಷಿಣಾ ಎನ್ನುವ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

ಕರಾವಳಿ ಭಾಗದ ಕಥೆಯನ್ನು ಹೊಂದಿರುವ ಈ ಚಿತ್ರದ ಟೀಸರ್‌ ಈಗಾಗಲೇ ಸದ್ದು ಮಾಡುತ್ತಿದೆ. ಪ್ರಜ್ವಲ್‌ ನಟನೆಯ 40ನೇ ಚಿತ್ರ ಇದು ಎನ್ನುವುದು ಮತ್ತೊಂದು ವಿಶೇಷ. ಅಂಬರೀಷ್‌ ಅಭಿನಯದ ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾಗೆ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಗುರುದತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 2ನೇ ಸಿನಿಮಾ ಇದಾಗಿದೆ. ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಬಗ್ಗೆ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿದೆ. ಜತೆಗೆ ಕರಾವಳಿ ಸಂಸ್ಕೃತಿಯ ಭಾಗವಾಗಿರುವ ಕೋಲ, ಯಕ್ಷಗಾನ, ಕಂಬಳ ಮುಂತಾದ ಅಂಶವೂ ಸಿನಿಮಾದಲ್ಲಿ ಇರಲಿದೆ ಎನ್ನುವುದಕ್ಕೆ ಟೀಸರ್‌ ಮೂಲಕ ಕ್ಲೂ ಸಿಕ್ಕಿದೆ. ಇನ್ನು ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಇದುವರೆಗೆ ಕಾಣಿಸಿಕೊಳ್ಳದ ರೀತಿಯ ಪಾತ್ರದಲ್ಲಿ ಡೈನಾಮಿಕ್‌ ಪ್ರಿನ್ಸ್ ಪ್ರಜ್ವಲ್‌ ಈ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಕೂಡ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: Prajwal Devaraj: ಕೋಣದ ಮೇಲೆ ಪ್ರಜ್ವಲ್ ಸವಾರಿ; ‘ಕರಾವಳಿ’ ಟೀಸರ್ ಔಟ್‌!

ಸದ್ಯ ಕರಾವಳಿ ಕಥಾ ಹಂದರ ಹೊಂದಿರುವ ಚಿತ್ರಗಳು ಸ್ಯಾಂಡಲ್‌ವುಡ್‌ನಲ್ಲಿ ಸದ್ದು ಮಾಡುತ್ತಿವೆ. ‘ರಂಗಿ ತರಂಗ’, ‘ಕಾಂತಾರ’ ಮುಂತಾದ ಸಿನಿಮಾಗಳಲ್ಲಿ ಕರಾವಳಿ ಭಾಗದ ಆಚಾರ-ವಿಚಾರ, ಜೀವನ ರೀತಿ ಅನಾವರಣಗೊಂಡಿತ್ತು. ಹೀಗಾಗಿ ‘ಕರಾವಳಿ’ ಚಿತ್ರದಲ್ಲಿಯೂ ಈ ಬಗೆಗಿನ ವಿವರಗಳು ಕಂಡು ಬರಲಿವೆ ಎನ್ನಲಾಗುತ್ತಿದೆ. ಸತತ ಸೋಲಿನ ಸುಳಿಗೆ ಸಿಲುಕಿರುವ ಪ್ರಜ್ವಲ್‌ ಈ ಸಿನಿಮಾ ಮೂಲಕ ಯಶಸ್ಸಿನ ಹಳಿಗೆ ಮರಳಿದ್ದಾರೆ ಎನ್ನುವ ಮಾತು ಕೂಡ ಕೇಳಿ ಬಂದಿದೆ. ಹಿಂದೆ ʼಕರಾವಳಿʼ ಚಿತ್ರಕ್ಕೆ ಅಮೂಲ್ಯ ನಾಯಕಿ ಎಂದು ಹೇಳಲಾಗಿತ್ತು. ಆದರೆ ಇದೀಗ ಅಂತೆ-ಕಂತೆಗೆ ತೆರೆ ಬಿದ್ದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version