ಅಜಯ್ ಗಾಯತೊಂಡೆ, ಬೆಂಗಳೂರು
ನಿರ್ಮಾಣ: ಜಿಯೋ ಸ್ಟುಡಿಯೋ. ನಿರ್ದೇಶನ: ಪರಮೇಶ್ವರ್ ಗುಂಡ್ಕಲ್. ಪಾತ್ರವರ್ಗ: ಧನಂಜಯ್, ಮೋಕ್ಷಾ ಕುಶಾಲ್, ರಮೇಶ್ ಇಂದಿರಾ, ತಾರಾ, ರಂಗಾಯಣ ರಘು, ಪೃಥ್ವಿ ಶಾಮನೂರು, ದುನಿಯಾ ವಿಜಯ್ ಮೊದಲಾದವರು.
ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ (Kotee Movie Review) ಅಭಿನಯದ ಬಹುನೀರಿಕ್ಷಿತ ಸಿನಿಮಾ ಕೋಟಿ ಸಿನಿಮಾ ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ಕಿರುತೆರೆ ಲೋಕದ ಪರಿಣತ ಪರಮೇಶ್ವರ್ ಗುಂಡ್ಕಲ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಇಲ್ಲಿ ಡಾಲಿ ಧನಂಜಯ್ ಎಂಬ ʼನಟ ರಾಕ್ಷಸʼ ಈ ಸಿನಿಮಾದ ಹೀರೋ. ಹೀಗಾಗಿ ಈ ʼಕೋಟಿʼ ಸಿನಿಮಾದ ಕುರಿತು ಸಾಕಷ್ಟು ನಿರೀಕ್ಷೆಯಿತ್ತು. ಈ ಚಿತ್ರದ ಕುರಿತು ಸಾಕಷ್ಟು ಹಿಂದೆಯೇ ಕೆಲಸ ಆರಂಭಿಸಲಾಗಿತ್ತು. ಆದರೆ, ಟೀಸರ್ ಮತ್ತು ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸುವ ತನಕ ಈ ಚಲನಚಿತ್ರದ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ಇದೀಗ ಈ ಸಿನಿಮಾ ರೀಲಿಸ್ ಆಗಿದ್ದು ಈ ಚಿತ್ರದಲ್ಲಿ ಏನೇನಿದೆ? ಹಾಗೂ ಏನಿರಬೇಕಿತ್ತು ಎಂಬುದನ್ನು ನೋಡೋಣ.
ಏನಿದು ಕೋಟಿ?
ಕೋಟಿ ಅಂದ್ರೆ ಹೆಸರು, ಹಣ, ಸಂಖ್ಯೆ ಅವರವರ ಭಾವಕ್ಕೆ..! ಪ್ರತಿನಿತ್ಯದ ಜೀವನ ಜಂಜಾಟವನ್ನು ತೋರಿಸುವ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗುತ್ತವೆ. ಕೋಟಿ ಎಂಬ ಪಾತ್ರ ನಮ್ಮ ಸುತ್ತಮುತ್ತಲಿನಲ್ಲಿ ಕಾಣುವ ಒಬ್ಬ ಕಾಮನ್ ಮ್ಯಾನ್! ಕೆಳ- ಮಧ್ಯಮ ವರ್ಗದ ದೊಡ್ಡ ಕನಸುಗಳು ಹೊತ್ತಿರುವ ಈ ಕೋಟಿಯ ಕನಸಿನ ತಾಣ.
ಪ್ರಾಮಾಣಿಕತೆಯೇ ಜೀವನ. ಜೀವನದಲ್ಲಿ ಒಂದು ಪೆನ್ನನ್ನೂ ಕದ್ದಿಲ್ಲ ಎನ್ನುವ ಈ ಹರೀಶ್ಚಂದ್ರನಿಗೆ ‘ಕೋಟಿ’ ಆಮಿಷವೊಡ್ಡುವ ನಕ್ಷತ್ರಿಕನೊಬ್ಬ ಗಂಟು ಬಿದ್ದಿದ್ದಾನೆ! ‘ಎಲ್ಲರೂ ಬೆತ್ತಲೆಯಾಗಿರುವ ಸಮಾಜದಲ್ಲಿ ಬಟ್ಟೆ ಹಾಕಿಕೊಂಡವನಿಗೆ ನಾಚಿಕೆಯಾಗಬೇಕು’ ಎನ್ನುವುದು ‘ಕೋಟಿ’ ಚಿತ್ರದಲ್ಲಿ ರಾಮಣ್ಣ ಪಾತ್ರಧಾರಿ ರಂಗಾಯಣ ರಘು ನಾಯಕ ‘ಕೋಟಿ’ ಡಾಲಿಗೆ ಹೇಳುವ ಡೈಲಾಗ್.. ಇಡೀ ಸಿನಿಮಾದ ಒನ್‌ಲೈನ್ ಸ್ಟೋರಿಯನ್ನು ಇದು ಉಲ್ಲೇಖಿಸುತ್ತದೆ. ಬಡ ಕುಟುಂಬದಿಂದ ಬಂದು ನಿಯತ್ತಿನಲ್ಲೇ ಬದುಕುತ್ತಿರುವ ನಾಯಕ ‘ಕೋಟಿ’ ಈ ಹಾದಿಯಲ್ಲೇ ಹೆಜ್ಜೆ ಹಾಕುತ್ತಾನೋ ಅಥವಾ ಬೆತ್ತಲಾಗಿರುವ ಸಮಾಜದಲ್ಲಿ ತಾನೂ ಬೆತ್ತಲಾಗುತ್ತಾನೋ ಎನ್ನುವುದೇ ಚಿತ್ರದ ಸ್ವಾರಸ್ಯ..!
ಇದನ್ನೂ ಓದಿ: Raveena Tandon: ರವೀನಾ ಟಂಡನ್ ವಿಡಿಯೊ ವೈರಲ್ ಮಾಡಿದ ವ್ಯಕ್ತಿ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಛಲಗಾರನೊಬ್ಬನ ಕನಸು ನನಸಾಗುವ ಕೋಟಿ!
ಮೂವರು ಒಡಹುಟ್ಟಿದವರಲ್ಲಿ ಕೋಟಿ (ಧನಂಜಯ್) ಹಿರಿಯವನು. ಆತ ಅತ್ಯಂತ ಕಷ್ಟಪಟ್ಟು ದುಡಿಯುವ ವ್ಯಕ್ತಿ. ನಾಳೆಯ ಕುರಿತು ಸುಂದರ ಕನಸು ಹೊಂದಿದ್ದಾನೆ. ಆ ಕನಸು ಈಡೇರಿಸಲು ಕಷ್ಟಪಟ್ಟು ದುಡಿಯುತ್ತಿದ್ದಾನೆ. ಇವರಿಲ್ಲಿ ಜನತಾ ನಗರದ ನಿವಾಸಿಗಳು. ಆ ನಗರ ಕೊಲೆಗಡುಕರ ಅಡ್ಡ. ದಿನೂ ಸಾವ್ಕಾರ್ (ರಮೇಶ್ ಇಂದಿರಾ) ನಿಯಂತ್ರಣದಲ್ಲಿದೆ. ಕೋಟಿ ಈ ಸಾಹುಕಾರನಿಂದ ಟ್ರಕ್ ಬಾಡಿಗೆಗೆ ಪಡೆದು ಸಣ್ಣ ಮೂವರ್ಸ್ ಮತ್ತು ಪ್ಯಾಕರ್ಸ್ ಬಿಸ್ನೆಸ್ ನಡೆಸುತ್ತಾನೆ. ಈ ಬಿಸ್ನೆಸ್ ಇಲ್ಲದಿರುವಾಗ ಕ್ಯಾಬ್ ಡ್ರೈವರ್ ಆಗಿಯೂ ದುಡಿಯುತ್ತಾನೆ. ಆದರೆ, ಈತನ ಕಷ್ಟಕ್ಕೆ ಈ ಹಣ ಸಾಕಾಗುವುದಿಲ್ಲ. ಮನಸ್ಸಿಲ್ಲದಿದ್ದರೂ ಸಾಹುಕಾರನಿಂದ ಸಾಲ ಪಡೆಯುತ್ತಾನೆ. ಈ ಸಾಲ ಕೆಲವೇ ಸಮಯದಲ್ಲಿ ಈತನನನು ಮುಳುಗಿಸಲು ರೆಡಿಯಾಗುತ್ತದೆ. ಕೋಟಿ ಬದುಕನ್ನು ತೋರಿಸುತ್ತ ತುಸು ಮಂದ ವೇಗದಲ್ಲಿ ಸಾಗುತ್ತಿದ್ದ ಸಿನಿಮಾ ವೇಗ ಪಡೆದುಕೊಳ್ಳುತ್ತದೆ.
ಮಾಸ್ ಸಿನಿಮಾ ಜೊತೆಗೆ ಫ್ಯಾಮಿಲಿ ಆಡಿಯನ್ಸ್ಗೂ ಹೆಚ್ಚು ಕನೆಕ್ಟ್ ಆಗಿದ್ದಾರೆ ಡಾಲಿ. ಅವರ ನಟನೆಯ ‘ರತ್ನನ್ ಪ್ರಪಂಚ’ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಹೈಲೈಟ್ ಆಗಿತ್ತು. ಈಗ ಮತ್ತೊಮ್ಮೆ ಅವರು ಫ್ಯಾಮಿಲಿ ಆಡಿಯನ್ಸ್ಗೆ ಇಷ್ಟ ಆಗುವ ಸಿನಿಮಾ ಮಾಡಿದ್ದಾರೆ. ಇಲ್ಲಿ ಅನಗತ್ಯ ಬಿಲ್ಡಪ್ಪು, ಡೈಲಾಗುಗಳೇ ಇಲ್ಲದ ಪಾತ್ರ ಒಪ್ಪಿಕೊಂಡು ಲೀಲಾಜಾಲವಾಗಿ ಅಭಿನಯಿಸಿದ್ದು ಪ್ರೇಕ್ಷಕರಿಗೆ ಅವರ ಮೇಲಿನ ಪ್ರೀತಿ ಇಮ್ಮಡಿಯಾಗುವುದಂತೂ ಸುಳ್ಳಲ್ಲ.
ಅವರಷ್ಟೇ ಅಲ್ಲದೇ ಈ ಸಿನಿಮಾದ ಯಶಸ್ಸು ಅದರ ಇಡೀ ತಾರಾಗಣದ ಆಯ್ಕೆಯಲ್ಲಿದೆ. ತಾರಾ ಅನುರಾಧ, ರಮೇಶ್ ಇಂದಿರಾ ಎಲ್ಲರೂ ಅಮೋಘವಾಗಿ ಅಭಿನಯಿಸಿದ್ದಾರೆ. ಇಲ್ಲಿ ರಂಗಾಯಣ ರಘು, ದುನಿಯಾ ವಿಜಯ್ ಹೆಚ್ಚು ಕಾಣಿಸಿಕೊಂಡಿಲ್ಲ ಇವರ ಪಾತ್ರಕ್ಕೆ ಇನ್ನಷ್ಟು ಪೂರಕ ಅಂಶ ಬೇಕಿದ್ದವು ಎನಿಸುತ್ತದೆ.
ತನುಜಾ ವೆಂಕಟೇಶ್ ಕೋಟಿಯ ಸಹೋದರಿ ಮಹತಿ ಪಾತ್ರದಲ್ಲಿ, ಪೃಥ್ವಿ ಶಾಮನೂರು, ಕೋಟಿಯ ಸಹೋದರ ನಚ್ಚಿಯಾಗಿ, ತಲೆ ಮೇಲೆ ಹೆಡ್‌ಫೋನ್ ಹಾಕಿಕೊಂಡು ಸದಾ ಸಂಗೀತ ಕೇಳುತ್ತಾ ಇರುತ್ತಾರೆ. ಚಿತ್ರದ ನಾಯಕಿ ಮೋಕ್ಷಾ ಕುಶಾಲ್ ಸುಂದರಿ ಮಾತ್ರವಲ್ಲ, ತನಗೆ ಸಿಕ್ಕ ಪಾತ್ರದಲ್ಲಿ ಶ್ರದ್ಧೆಯಿಂದ ನಟಿಸಿದ್ದಾರೆ. ಇಲ್ಲಿ ಅವರಿಗೊಂದು ಅಪರೂಪದ ಕಾಯಿಲೆಯಿದೆ ಇದು ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಿದೆ. ಅದೇನು ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಈ ಚಿತ್ರದಲ್ಲಿದ್ದಾರೆ.
ಮಾಯಾ ಲೋಕದಲ್ಲಿ ಬಣ್ಣದ ಕ್ಲೈಮ್ಯಾಕ್ಸ್!
ಹೌದು. ಬಣ್ಣ ಬಣ್ಣದ ಪಟ್ಟೆ ತೊಟ್ಟ ಅಷ್ಟೊಂದು ಹುಲಿಗಳು ಪಾಳುಬಿದ್ದ ಹಳೆಯ ಥಿಯೇಟರ್ರೊಂದರ ಕತ್ತಲಲ್ಲಿ ಹೊಡೆದಾಡುವ ದೃಶ್ಯಗಳಲ್ಲಿ ಕ್ಲೈಮ್ಯಾಕ್ಸಿಗೆ ಅಗತ್ಯವಾಗಿ ಬೇಕಾದ ‘ಕಲರ್’ಫುಲ್ ಬಣ್ಣದಲೋಕ ಸೃಷ್ಟಿಯಾಗಿದೆ.
ಈ ಚಿತ್ರದಲ್ಲಿ ಐದು ಹಾಡುಗಳಿದ್ದು ವಾಸುಕಿ ವೈಭವ್ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ. ಕಾಂತಾರ ಸಿನಿಮಾದ ಕೆಲಸಕ್ಕೆ ಪ್ರಶಂಸೆಗಳಿಸಿದ್ದ ಪ್ರತೀಕ್ ಶೆಟ್ಟಿಯವರು ಕೋಟಿಯ ಸಂಕಲನಕಾರರಾದರೆ, ಟೆಲಿವಿಷನ್‌ನ ಖ್ಯಾತ ಛಾಯಾಗ್ರಾಹಕ ಅರುಣ್ ಅವರು ಈ ಸಿನಿಮಾದ ಕ್ಯಾಮರಾಮನ್ ಆಗಿದ್ದಾರೆ. ನಿರ್ದೇಶಕರು ಮೊದಲ ಪ್ರಯತ್ನದಲ್ಲೇ ಯಶ ಸಾಧಿಸಿದ್ದಾರೆ. ನಿರೂಪಣೆಗೆ ಮತ್ತಷ್ಟು ವೇಗ ಸಿಕ್ಕಿದ್ದರೆ ಈ ಚಿತ್ರ ಮತ್ತಷ್ಟು ಖುಷಿ ಕೊಡುತ್ತಿತ್ತು.