ಬೆಂಗಳೂರು: ಎಚ್‌ಡಿ ಕುಮಾರಸ್ವಾಮಿ ಗೆಲುವಿನ ಬಳಿಕ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವ ಜವಾಬ್ದಾರಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರ ಮೇಲೆ ಬಿದ್ದಿದೆ. ಈ ಸಂಬಂಧ ಇತ್ತೀಚೆಗೆ ಸಿನಿಮಾವನ್ನು ಸಂಪೂರ್ಣ ಬಂದ್ ಮಾಡಿದ್ದೇನೆ. ನಾನು ಇನ್ಮುಂದೆ ಪಕ್ಷ ಕಟ್ಟುವ ಕಡೆ ಗಮನ ಕೊಡುತ್ತೇನೆ ಎಂದಿದ್ದರು ನಿಖಿಲ್. ಇದೀಗ ಮಾಧ್ಯಮದ ಮುಂದೆ ನಟನೆಯಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮಾತನಾಡಿ ʻʻಈ ಹಿಂದೆ ನಾನು ಹೇಳಿಕೆ ನೀಡಿರುವ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡರು ಎನ್ನಿಸುತ್ತದೆ. ಈ ಬಗ್ಗೆ ನಾನು ಸ್ಪಷ್ಟನೆ ನೀಡಬೇಕು. ನಿಖಿಲ್ ಕುಮಾರಸ್ವಾಮಿ ಯಾರು ಎಂದು ಜನರಿಗೆ ಗೊತ್ತಾಗಿದ್ದು ನಟನಾಗಿ. ಬಹುಶಃ ರಾಜಕಾರಣ ಹಿನ್ನೆಲೆಯಿಂದ ಬಂದಿರುವ ನನಗೆ ಇವತ್ತು ಇಷ್ಟೊಂದು ಪ್ರೀತಿ, ವಿಶ್ವಾಸ ನೀಡಿದ್ದರು, ಕನ್ನಡ ಅಭಿಮಾನಿಗಳು. ಇದನ್ನು ಮರೆಯಲು ಸಾಧ್ಯವಿಲ್ಲ. ನಾನು ಕೆಲವೇ ಸಿನಿಮಾಗಳನ್ನು ಮಾಡಿದ್ದರೂ ಪ್ರೋತ್ಸಾಹ,ಪ್ರೀತಿ ಕೊಟ್ಟಿದ್ದಾರೆ. ಸದ್ಯದ ಮಟ್ಟಿಗೆ ರಾಜಕಾರಣದಲ್ಲಿ ಸಂಘಟನೆ ವಿಚಾರದಲ್ಲಿ ಜವಾಬ್ದಾರಿಗಳಿವೆ. ಹಾಗಾಗಿ ನಾನು ಚಿತ್ರರಂಗದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದೇನೆʼʼ ಎಂದರು.
ಇದನ್ನೂ ಓದಿ: Nikhil Kumaraswamy: ಸಿನಿಮಾಗೆ ಗುಡ್ ಬೈ ಹೇಳ್ತಾರಾ ನಿಖಿಲ್ ಕುಮಾರಸ್ವಾಮಿ?
‘ಜಾಗ್ವಾರ್’ ಸಿನಿಮಾ ಮೂಲಕ ನಿಖಿಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಿಖಿಲ್ ಕೆಲವು ದಿನಗಳ ಹಿಂದೆ ಹೊಸ ಸಿನಿಮಾಗೆ ಚಿತ್ರೀಕರಣ ತೊಡಗಿಸಿಕೊಂಡಿದ್ದರು. ಕಮಲ್ ಹಾಸನ್, ರಜನಿಕಾಂತ್, ಅಜಿತ್, ವಿಜಯ್ ಸೇರಿದಂತೆ ಅನೇಕ ಸೂಪರ್ ಸ್ಟಾರ್‌ಗಳ ಚಿತ್ರಗಳಿಗೆ ಬಂಡವಾಳ ಹಾಕಿರುವ ಲೈಕಾ ಸಂಸ್ಥೆ ನಿಖಿಲ್ ಕುಮಾರ್ (Nikhil Kumaraswamy) ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರವನ್ನು ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚೆಗಷ್ಟೇ ಶುರುವಾಗಿತ್ತು. ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದೆ.
ತಮಿಳಿನಲ್ಲಿ ‘ಕತ್ತಿ’, ‘2.0’, ‘ದರ್ಬಾರ್’, ‘ಪೊನ್ನಿಯನ್ ಸೆಲ್ವನ್’ ಸೇರಿದಂತೆ ಹಲವು ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಿಸಿದೆ. ಕೆಲವೇ ದಿನಗಳ ಹಿಂದೆಯಷ್ಟೆ ಖಾಸಗಿ ಹೋಟೆಲ್‌ನಲ್ಲಿ ಪ್ರೊಡಕ್ಷನ್ ನಂ. 28 ಸಿನಿಮಾ ಮುಹೂರ್ತ ನೆರವೇರಿತ್ತು. ಮಾಜಿ ಪ್ರಧಾನಿ ಎಚ್. ಡಿ ದೇವಗೌಡರು, ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಈ ಸಮಾರಂಭದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಕೋರಿದ್ದರು.