ಬೆಂಗಳೂರು: ಭಾರತದ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ ಎನಿಸಿಕೊಂಡಿರುವ ರಾಷ್ಟ್ರ ಪ್ರಶಸ್ತಿ (70th National Film Awards) ಇಂದು (ಆಗಸ್ಟ್ 16) ಘೋಷಣೆ ಆಗಿದೆ. ‘ಕಾಂತಾರ’ ಸಿನಿಮಾಗಾಗಿ ರಿಷಬ್ ಶೆಟ್ಟಿ (Rishab Shetty) ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ, ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿ ಕೂಡ ಕಾಂತಾರ ಪಡೆದುಕೊಂಡಿದೆ. 2022ರಲ್ಲಿ ತೆರೆಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ, ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ ʼಕಾಂತಾರʼ ಚಿತ್ರ ಈಗಾಗಲೇ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದೆ. ಅತ್ಯುತ್ತಮ ಚಿತ್ರದ ಜತೆಗೆ ನಟ, ನಿರ್ದೇಶಕ ವಿಭಾಗದಲ್ಲಿಯೂ ರಿಷಬ್ ಶೆಟ್ಟಿ ವಿವಿಧ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಡೈರೆಕ್ಟರ್ ಜೊತೆಗೆ ಹೀರೋ ಆಗಿರುವ ರಿಷಬ್ ಶೆಟ್ಟಿ ಇಂದು ನಿರ್ಮಾಪಕರು ಕೂಡ ಹೌದು. ರಿಷಬ್ ಶೆಟ್ಟಿ ಸಿನಿ ಪಯಣ ಹೇಗಿತ್ತು? ತಿಳಿಯಲು ಮುಂದೆ ಓದಿ.
ನಾಟಕ -ಯಕ್ಷಗಾನಗಳಲ್ಲಿ ಆಸಕ್ತಿ
ಬಾಲ್ಯದ ದಿನಗಳಲ್ಲಿ ನಾಟಕ ಹಾಗೂ ಯಕ್ಷಗಾನಗಳಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿದ್ದರು. ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿ ಸಿನಿಮಾದ ಗೀಳು ಅಂಟಿಸಿಕೊಂಡಿದ್ದರು. ಡಾ. ರಾಜ್ಕುಮಾರ್ ಹಾಗೂ ಶಂಕರ್ನಾಗ್ ಚಿತ್ರಗಳು ಅಂದರೆ ಈ ನಟನಿಗೆ ಪಂಚಪ್ರಾಣ. ಮುಖ್ಯವಾಗಿ ರಿಷಬ್ ಶೆಟ್ಟಿ ಅವರಿಗೆ ತಾನು ಹೀರೋ ಆಗಬೇಕು ಎಂಬ ಸ್ಫೂರ್ತಿ ಆಗಿದ್ದು ಕನ್ನಡ ಚಿತ್ರರಂಗದ ಮೇರು ನಟನರಾದ ದಿ. ಡಾ. ರಾಜ್ಕುಮಾರ್. ಅವರ ಮನೋಜ್ಞ ಅಭಿನಯ ಹಾಗು ಸಿನಿಮಾಗಳು ʼಡಿವೈನ್ ಸ್ಟಾರ್ʼ ಗಮನ ಸೆಳೆದಿತ್ತು. ಆಗ್ಲೇ ಅಣ್ಣಾವ್ರ ರೀತಿ ನಟನಾಗಬೇಕು ಎಂದು ರಿಷಬ್ ಶೆಟ್ಟಿ ನಿರ್ಧಾರ ಮಾಡಿದ್ದರು. ಕಾಲೇಜು ವಿದ್ಯಾಭ್ಯಾಸ ವೇಳೆ ಸಿನಿಮಾ ಕ್ರೇಜ್ ಜಾಸ್ತಿ ಮಾಡಿದ್ದು ಉಪೇಂದ್ರ ಅವರ ಸಿನಿಮಾಗಳು. ಆಗ ಕುಂದಾಪುರದಿಂದ ರಿಷಬ್ ಶೆಟ್ಟಿ ಬೆಂಗಳೂರಿಗೆ ಬರುತ್ತಾರೆ. ನಿರ್ದೇಶಕ ಎ.ಎಂ.ಆರ್ ರಮೇಶ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಾರೆ. ಅರವಿಂದ್ ಕೌಶಿಕ್ ನಿರ್ದೇಶನದ ತುಘ್ಲಕ್ ಚಿತ್ರದಲ್ಲಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಾ, ಇದೇ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಮಾಡ್ತಾರೆ. ಅಲ್ಲಿಂದ ಲೂಸಿಯಾ ಹಾಗು ಉಳಿದವರು ಕಂಡಂತೆ ಚಿತ್ರಗಳಲ್ಲಿ ನಟಿಸುವ ಮೂಲಕ ರಿಷಬ್ ಶೆಟ್ಟಿ ಗಾಂಧಿನಗರದಲ್ಲಿ ಗಮನ ಸೆಳೆದರು.
ಕಿರಿಕ್ ಪಾರ್ಟಿ ಸಕ್ಸಸ್
ರಿಷಬ್ ಶೆಟ್ಟಿ ಅವರಿಗೆ ಸ್ಟಾರ್ ಡೈರೆಕ್ಟರ್ ಪಟ್ಟ ತಂದುಕೊಟ್ಟ ಸಿನಿಮಾ ಕಿರಿಕ್ ಪಾರ್ಟಿ. 2016ರಲ್ಲಿ ʼರಿಕ್ಕಿʼ ಚಿತ್ರ ನಿರ್ದೇಶಿಸುವ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಬಳಿಕ ತೆರೆಕಂಡ ʼಕಿರಿಕ್ ಪಾರ್ಟಿʼ ಮತ್ತು ʼಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡುʼ ಸಿನಿಮಾದಿಂದ ಸ್ಯಾಂಡಲ್‌ವುಡ್‌ನ ಗಮನ ಸೆಳೆದರು. ರಿಷಬ್ ಶೆಟ್ಟಿ ಬೆಲ್ ಬಾಟಮ್ ಚಿತ್ರದಲ್ಲಿ ನಟಿಸುವ ಮೂಲ ತಮ್ಮ ಬಾಲ್ಯದ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿದ ರಿಷಬ್ ಶೆಟ್ಟಿ ಅವರಿಗೆ, ಬೆಲ್ ಬಾಟಮ್ ಚಿತ್ರ ಸ್ಟಾರ್ ಪಟ್ಟ ತಂದು ಕೊಡುತ್ತದೆ. ʻಕಾಂತಾರʼ ಚಿತ್ರದ ಶಿವ ಪಾತ್ರದ ಮೂಲಕ ಅತ್ಯುತ್ತಮ ನಟ ವಿಭಾಗದಲ್ಲಿ ರಿಷಬ್ ಶೆಟ್ಟಿ ಪ್ರಬಲ ಪೈಪೋಟಿ ಒಡ್ಡಿ ಇದೀಗ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ತುಳುನಾಡಿನ ವಿಶಿಷ್ಟ ಭೂತಾರಾಧನೆಯ ಸಂಸ್ಕೃತಿಯನ್ನು ಜಗತ್ತಿಗೇ ಸಾರಿದ ಈ ಸಿನಿಮಾ ಮೇಕಿಂಗ್‌ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಅದರಲ್ಲಿಯೂ ನಾಯಕನಾಗಿ ರಿಷಬ್ ಶೆಟ್ಟಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಕ್ಲೈಮಾಕ್ಸ್‌ನಲ್ಲಂತೂ ಅವರ ಅಭಿನಯ ಅಮೋಘ ಎಂದಿದ್ದ ಹಲವರು ಅಂದೇ ನ್ಯಾಷನಲ್ ಅವಾರ್ಡ್ ಬಗ್ಗೆ ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ: Rishab Shetty: ಭೂಮಿ ಮೇಲಿನ ಅದೃಷ್ಟಶಾಲಿ ವ್ಯಕ್ತಿ ನಾನು; ಚಿಯಾನ್ ವಿಕ್ರಮ್ ಭೇಟಿ ಬಳಿಕ ರಿಷಬ್ ಶೆಟ್ಟಿ ರಿಯಾಕ್ಷನ್!
ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ರಿಷಬ್
`ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಕಾಸರಗೋಡು’ ಸಿನಿಮಾ ಮಾಡಿದಾಗಿನಿಂದಲೂ ರಿಷಬ್ ಶೆಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಕೈಲಾದ ಸೇವೆ ಮಾಡುತ್ತಲೇ ಇದ್ದಾರೆ. ಸಮಾಜ ಸೇವೆ ಅದರಲ್ಲಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವುದು ರಿಷಬ್ಗೆ ಬಹಳ ಇಷ್ಟವಾಗುವ ಕೆಲಸ. ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾವು ಓದಿದ ಕೆರಾಡಿ (Keradi) ಸರ್ಕಾರಿ ಕನ್ನಡ ಶಾಲೆಯನ್ನು (School) ದತ್ತು ಪಡೆದಿದ್ದಾರೆ.
ಸಿನಿಮಾ ನಿರ್ಮಾಣಕ್ಕೂ ಸೈ
ರಿಷಬ್ ಶೆಟ್ಟಿ (Rishab Shetty) ನಿರ್ಮಾಣ ಮಾಡಿ, ಪ್ರಸ್ತುತಪಡಿಸಿದ ‘ಶಿವಮ್ಮ’ ಸಿನಿಮಾ (Shivamma Movie) ವಿಶ್ವಾದ್ಯಂತ ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ‘ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022’ರಲ್ಲಿ ನ್ಯೂ ಕರೆಂಟ್ಸ್ ಪುರಸ್ಕಾರ ಪಡೆದಿತ್ತು. ‘ಥ್ರೀ ಕಾಂಟಿನೆಂಟ್ಸ್ ಫೆಸ್ಟಿವಲ್ 2022’ದಲ್ಲಿ ಯುವ ಜ್ಯೂರಿ ಪ್ರಶಸ್ತಿ, ‘ಫಾಜರ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ’ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಜಯಶಂಖರ್ ಆರ್ಯರ್ ನಿರ್ದೇಶನದ ‘ಶಿವಮ್ಮ’ ಸಿನಿಮಾ ಜೂನ್ 14ಕ್ಕೆ ತೆರೆಗೆ ಬಂದಿತ್ತು. ಸದ್ಯ ರಿಷಬ್ ಶೆಟ್ಟಿ ನಿರ್ಮಾಣದ ಪ್ರಮೋದ್ ಶೆಟ್ಟಿ (Pramod Shetty) ನಟನೆಯ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ತೆರೆಗೆ ಬರಲು ಸಜ್ಜಾಗುತ್ತಿದೆ.
ಇದನ್ನೂ ಓದಿ: Rishab Shetty: ರಿಷಬ್ ನಿರ್ಮಾಣದ ‘ಶಿವಮ್ಮ’ ಟ್ರೈಲರ್ ಔಟ್; ಜೂನ್ 14ಕ್ಕೆ ತೆರೆಗೆ
ಸಾಲು ಸಾಲು ಪ್ರಶಸ್ತಿಗಳು
ರಿಷಬ್ ಶೆಟ್ಟಿ ‘ದಾದಾ ಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮೋತ್ಸವ (dada saheb phalke award 2023) ಪ್ರಶಸ್ತಿ ಪಡೆದ ಬೆನ್ನಲ್ಲೇ ಬಾಲಿವುಡ್ ಲೈಫ್ ಅವಾರ್ಡ್ಸ್‌ನ (BLAwards2023) (BLAwards) ದಕ್ಷಿಣ ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದರು. 2023ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ‘ಭರವಸೆಯ ನಟ’ ಎಂಬ ಪ್ರಶಸ್ತಿ ಸ್ವೀಕರಿಸಿದ್ದರು. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದೈವಿಕ ಕತೆಯನ್ನು ಹೊಂದಿರುವ ಕಾಂತಾರ ಸಿನಿಮಾ ಚೊಚ್ಚಲ ಆವೃತ್ತಿಯ “ಸಿಲ್ವರ್ ಪಿಕಾಕ್ ಅವಾರ್ಡ್’ ತನ್ನದಾಗಿಸಿಕೊಂಡಿತ್ತು. ಕಾಂತಾರ ಸಿನಿಮಾ ತಂಡದ ಹಾಗೂ ಕನ್ನಡಿಗರ ಪಾಲಿಗೆ ವಿಶೇಷವಾಗಿದೆ. ಇದು ಕನ್ನಡ ಸಿನಿಮಾ ಒಂದಕ್ಕೆ ದೊರೆತ ಮೊಟ್ಟ ಮೊದಲ ಪ್ರಶಸ್ತಿಯೂ ಹೌದು. ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ 2023 (SIIMA 2023) ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಕಾಂತಾರ ಸಿನಿಮಾ 10 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.
ಇನ್ನು ವಿಶೇಷವಾಗಿ ʼಕಾಂತಾರʼ ಚಿತ್ರಕ್ಕೆ ಬೆನ್ನೆಲುಬಾಗಿದ್ದಂತಹ ದೈವ ನರ್ತಕರಾದ ಮುಖೇಶ್ ಲಕ್ಷ್ಮಣ್ ಅವರು ದುಬೈನಲ್ಲಿ ಸೈಮಾ ಪ್ರಶಸ್ತಿ ಸ್ವೀಕರಿಸಿದ್ದರು. ಉಳಿದಂತೆ ಅತ್ಯುತ್ತಮ ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಸೇರಿ ಒಟ್ಟು 10 ಅವಾರ್ಡ್ಸ್ ಕಾಂತಾರ ಸಿನಿಮಾ ಗೆದ್ದು ಸದ್ದು ಮಾಡಿತ್ತು. ಇದುವರೆಗೆ ಸೈಮಾ ಅವಾರ್ಡ್ಸ್‌ನಲ್ಲಿ ಅತಿ ಹೆಚ್ಚು ಅವಾರ್ಡ್‌ಗಳನ್ನು ಪಡೆದ ಚಿತ್ರ ಎಂಬ ಹೆಗ್ಗಳಿಕೆಗೆ ಕಾಂತಾರ ಪಾತ್ರವಾಗಿತ್ತು.