Site icon Vistara News

Sahara Movie Trailer: ಕ್ರಿಕೆಟ್ ಆಧಾರಿತ `ಸಹಾರಾ’ ಸಿನಿಮಾ ಟ್ರೈಲರ್‌ ಔಟ್‌ ಮಾಡಿದ RCB ಮಾಜಿ ಆಟಗಾರ

Sahara Movie Trailer Out Sarika Rao

ಬೆಂಗಳೂರು: ಕನ್ನಡದಲ್ಲಿ ಮಹಿಳಾ ಕ್ರಿಕೆಟ್ ಆಧಾರಿತ ಸಿನಿಮಾ ʻಸಹಾರಾʼ ಟ್ರೈಲರ್‌ (Sahara Movie Trailer) ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆರ್‌ಸಿಬಿ ತಂಡದ ಮಾಜಿ ಆಟಗಾರ ಗೌತಮ್ ಕೆ ಚಿತ್ರದ ಮೊದಲ ನೋಟ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ಬಿಡುಗಡೆ ಬಳಿಕ ಕ್ರಿಕೆಟರ್ ಕೃಷ್ಣಪ್ಪ ಗೌತಮ್ ಮಾತನಾಡಿ, ʻʻಕ್ರಿಕೆಟ್ ಕಥೆಯನ್ನು ಒಳಗೊಂಡಿರುವ ಚಿತ್ರ ಇದು. ಟ್ರೈಲರ್‌ ತುಂಬ ನೈಜವಾಗಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿʼʼ ಎಂದರು. ನಟಿ ಸಾರಿಕಾ ರಾವ್ ಮಾತನಾಡಿ, ʻʻಇದು ಸ್ಫೂರ್ತಿದಾಯಕ ಕಥೆ. ನಾನು ಜವಾಬ್ದಾರಿಯಿಂದ ನನ್ನ ಪಾತ್ರ ನಿರ್ವಹಿಸಿದ್ದೇನೆ ಎಂದುಕೊಳ್ಳುತ್ತೇನೆ. ಮಹಿಳಾ ಪ್ರಧಾನ ಸಿನಿಮಾವನ್ನು ನಿರ್ದೇಶಕರಾದ ಮಜೇಶ್ ಅವರು ಕನ್ನಡ ಇಂಡಸ್ಟ್ರೀಗೆ ಕೊಡುತ್ತಿದ್ದಾರೆ. ಕಾಣದ ಕೈಗಳು ಅಂದರೆ ಸುದೀಪ್ ಸರ್, ಸಿಂಪಲ್ ಸುನಿ ಸರ್, ಅಶ್ವಿನಿ ಮೇಡಂ ಅವರೆಲ್ಲಾ ಹೊಸಬರಿಗೆ ಸಾಥ್ ಕೊಟ್ಟಿದ್ದಾರೆʼʼ ಎಂದು ಸಂತಸ ಹಂಚಿಕೊಂಡರು.

ಕನ್ನಡದಲ್ಲಿ ಮೊದಲ ಮಹಿಳಾ ಕ್ರಿಕೆಟ್ ಪ್ರಧಾನ ಸಿನಿಮಾವಾಗಿರುವ ʻಸಹಾರಾʼದಲ್ಲಿ ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆಯನ್ನು ಕಟ್ಟಿಕೊಡಲಾಗಿದೆ. ಮಂಡ್ಯ ಹುಡುಗಿಯ ಪಾತ್ರದಲ್ಲಿ ಸಾರಿಕಾ ರಾವ್ ಅಭಿನಯಿಸಿದ್ದಾರೆ. ಪಾತ್ರಕ್ಕಾಗಿಯೇ ಸಾರಿಕಾ ಅವರು ರಣಜಿ ಆಟಗಾರರಾದ. ಕೆ.ಬಿ. ಪವನ್ ಬಳಿ ಕ್ರಿಕೆಟ್ ಆಟದ ಬಗ್ಗೆ ತರಬೇತಿ ಪಡೆದುಕೊಂಡು ಬಂದು ನಂತರ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: Dhruva Sarja: ಬಾಲಿವುಡ್‌ ಸಿನಿಮಾಗೆ ಎಂಟ್ರಿ ಕೊಡ್ತಾರಾ ಧ್ರುವ ಸರ್ಜಾ? ಬಿಗ್‌ ಬಜೆಟ್‌ ಚಿತ್ರದಲ್ಲಿ ಸಹೋದರನ ಪಾತ್ರ?

ಕಳೆದ ಎಂಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿರುವ ಮಂಜೇಶ್ ಭಗವತ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತು ಈ ಚಿತ್ರವನ್ನು ಹೊರತರುತ್ತಿದ್ದಾರೆ. ಮಾ ಕ್ರಿಯೆಷನ್ಸ್ ಪ್ರಥಮ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ- ಚಿತ್ರಕಥೆ – ಸಂಭಾಷಣೆ ರಚಿಸಿದ್ದಾರೆ.

ಉಳಿದಂತೆ ತಾರಾಬಳಗದಲ್ಲಿ ಮಂಜುನಾಥ ಹೆಗಡೆ, ಕುರಿ ಸುನಿಲ್, ಅಂಕುಶ್ ರಜತ್, ರಂಜನ್, ಮಂಜುಳಾ ರೆಡ್ಡಿ, ಪ್ರಕಾಶ್ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ. ಮಹಿಳಾ ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಪಿ.ಆರ್.ಸಂಸ್ಥೆ ಸಪೋರ್ಟ್ ಮಾಡಿದೆ. ಆಡಿಯೋ ಹಕ್ಕನ್ನು ಕೂಡ ಪಡೆದುಕೊಂಡಿದೆ. ಕೆಆರ್.ಜಿ ಸಂಸ್ಥೆ ಚಿತ್ರ ವಿತರಣೆ ಮಾಡುತ್ತಿದೆ.

ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ನಿರೂಪಣೆ ಮಾಡಿದ್ದಾರೆ. ಮಂಡ್ಯದ ಹುಡುಗಿಯ ಕ್ರಿಕೆಟ್ ಕನಸಿನ ಕಥೆಯನ್ನ ನಿರೂಪಿಸಿದ್ದಾರೆ. ಇದರೊಟ್ಟಿಗೆ ಚಿತ್ರಕ್ಕೆ ಆಂಥೋನಿ ರುತ್ ವಿನ್ಸೆಂಟ್ ಕ್ಯಾಮರಾವರ್ಕ್ ಮಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಕೊಟ್ಟಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ, ಸಂತೋಷ್ ಶೇಖರ್ ಕೊರಿಯೋಗ್ರಫಿ ಚಿತ್ರದಲ್ಲಿದೆ.

Exit mobile version