ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಕಾನೂನಿನ ಕುಣಿಕೆ ಮತ್ತಷ್ಟು ಬಿಗಿ ಮಾಡಲು ಪೊಲೀಸರು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಈ ಮಧ್ಯೆ ಚಾರ್ಜ್ ಶೀಟ್ ಸಲ್ಲಿಕೆಗೆ ಪ್ರಮುಖ ಸಾಕ್ಷಿದಾರ ಪೊಲೀಸರಿಗೆ ಸಿಕ್ಕಂತಾಗಿದೆ. ಆದರೆ, ಜೈಲಿನಿಂದಲೇ ಕೆಲ ಸಾಕ್ಷಿಗಳಿಗೆ ಬೆದರಿಕೆ ಹಾಕುವ ಕೆಲಸವೂ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ದರ್ಶನ್ ಗ್ಯಾಂಗ್ (Actor Darshan) ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ಕಸ್ಟಡಿ ಅವಧಿ ಮುಗಿದ ಬಳಿಕ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಪೊಲೀಸರು ಈ ವರೆಗೆ ಸುಮಾರು 200 ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರಂತೆ.
ಇದೀಗ ಈ ಪ್ರಕರಣದಲ್ಲಿ ತಂತ್ರಜ್ಞಾನದ ಬಳಕೆಯನ್ನು ಪೊಲೀಸರು ಮಾಡುತ್ತಿದ್ದು ಸಾಕ್ಷ್ಯವನ್ನು ಇನ್ನಷ್ಟು ಪ್ರಬಲಗೊಳಿಸುತ್ತಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ನಡೆದಿರುವ ಶೆಡ್, ದರ್ಶನ್ ಮನೆ, ಸ್ಟೂನಿ ಬ್ರೂಕ್ ರೆಸ್ಟೊರೆಂಟ್, ಶೆಡ್ಗೆ ಹೋಗುವ ರಸ್ತೆ ಇನ್ನೂ ಹಲವು ಕಡೆಗಳಿಂದ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗಿರುವ ಮೊಬೈಲ್ ವಿಡಿಯೋಗಳನ್ನು ಸಹ ಕಲೆ ಹಾಕಿದ್ದಾರೆ. ಇದೀಗ ಈ ವಿಡಿಯೋ ಸಾಕ್ಷಿಗಳನ್ನು ಇನ್ನಷ್ಟು ಬಲಗೊಳಿಸಲು ವಿಷ್ಯುಯಲ್ ಕಂಪಾರಿಷನ್ ತಂತ್ರಜ್ಞಾನವನ್ನು ಪೊಲೀಸರು ಬಳಸಿದ್ದಾರೆ ಎನ್ನಲಾಗಿದೆ. ವಿಷ್ಯುಲ್ ಕಂಪಾರಿಷನ್ನಿಂದ ಬೇರೆ ಬೇರೆ ವಿಡಿಯೋಗಳಲ್ಲಿರುವ ವ್ಯಕ್ತಿಗಳು ಒಬ್ಬರೇ ಹೌದೇ ಅಲ್ಲವೆ ಎಂಬುದು ತಿಳಿಯುತ್ತದೆ. ಹಾಗೂ ವಿಡಿಯೋ ನಕಲಿಯೇ, ಅಸಲಿಯೇ, ಗ್ರಾಫಿಕ್ಸ್ ಮಾಡಲಾಗಿದೆಯೇ ಇನ್ನಿತರೆ ವಿಷಯಗಳು ಸಹ ತಿಳಿದು ಬರಲಿದೆ ಎನ್ನಲಾಗಿದೆ.
ಇದನ್ನೂ ಓದಿ: Actor Darshan: ದರ್ಶನ್‌ರನ್ನು ಜೈಲಿನಲ್ಲಿ ನೋಡೋಕೆ ನನಗೆ ಮನಸಿಲ್ಲ ಎಂದ ಸೋನಾಲ್!
ಕರೆಂಟ್ ಶಾಕ್ ಕೊಡಲು ಆನ್‌ಲೈನ್‌ನಲ್ಲಿ ಮೆಗ್ಗರ್ ಡಿವೈಸ್ ಖರೀದಿ
ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆಯಲ್ಲಿ ಪ್ರಮುಖವಾಗಿ ಬಳಸಿರೋ ಸಾಧನ ಮೆಗ್ಗರ್ ಬಗ್ಗೆ ಮಹತ್ವದ ಮಾಹಿತಿ ತಿಳಿಸದುಬಂದಿದೆ. ಕರೆಂಟ್ ಶಾಕ್ ನೀಡಲೆಂದೇ ಮೆಗ್ಗರ್ ಅನ್ನು ಖರೀದಿ ಮಾಡಿರೋದು ತನಿಖೆ ವೇಳೆ ಬೆಳಕಿಗೆ. ಪ್ರಕರಣದ ಆರೋಪಿ ಧನರಾಜ್ ಅಮೆಜಾನ್‌ನಲ್ಲಿ ಮೆಗ್ಗರ್ ಡಿವೈಸ್ ಬುಕ್ ಮಾಡಿದ್ದು, ಅದರ ಬೆಲೆ 699 ರೂಪಾಯಿಗಳಾಗಿದೆ. ಇನ್ನು ಬುಕ್ ಮಾಡಿದ ಮೆಗ್ಗರ್ ಅನ್ನು ಸ್ವೀಕರಿಸುವ ವೇಳೆ ಸ್ಕ್ಯಾನರ್ ಮೂಲಕ ಹಣ ಪೇ ಮಾಡಲು ಧನರಾಜ್ ಯತ್ನಿಸಿದ್ದ. ಆದರೆ ಅಮೆಜಾನ್ ಪೇ ಕೋಡ್ ಸ್ಕ್ಯಾನ್ ಮಾಡಿದ ವೇಳೆ ಹಣ ಸೆಂಡ್ ಆಗದ ಕಾರಣ ಆನ್ ಲೈನ್ ಮೂಲಕ ಹಣವನ್ನು ಕಳುಹಿಸಿದ್ದ ಧನರಾಜ್. ಆ ಹಣವನ್ನು ಡೆಲಿವರಿ ಬಾಯ್ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದು ಕಂಪನಿಗೆ ನೀಡಿದ್ದ. ಸದ್ಯ ಆ ಮಾಹಿತಿ ಕಲೆ ಹಾಕಿರೋ ಪೊಲೀಸರು ಮೆಗ್ಗರ್ ಡಿವೈಸ್ ಧನರಾಜ್‌ಗೆ ತಂದುಕೊಟ್ಟ ಡೆಲಿವರಿ ಬಾಯ್‌ನ ವಿಚಾರಣೆ ಮಾಡಿ ಆತನ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಅಲ್ಲದೇ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾ ಡೇಟಾ ರಿಟ್ರೀವ್ ಆಗಿದೆ. ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ, ವಾಟ್ಸ್ ಆ್ಯಪ್ ಡೇಟಾವನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ಪಶ್ಚಿಮ ವಿಭಾಗ ಸೆನ್ ಪೊಲೀಸ್ ಠಾಣೆಯಲ್ಲಿ ರಿಟ್ರೀವ್ ಆಗಿದ್ದು, ಪೆನ್ ಡ್ರೈವ್‌ನಲ್ಲಿ ಡೇಟಾ ಸಂಗ್ರಹಿಸಿ ಪಂಚನಾಮೆ ಮಾಡಲಾಗಿದೆ. ಈ ಮಧ್ಯೆ ಮೃತ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳ ಪರಿಶೀಲನೆ ಮಾಡಲಾಗಿದ್ದು, ಇದು ಕೂಡ ಪ್ರಮುಖ ಸಾಕ್ಷ್ಯವಾಗಿದ್ದು, ರೇಣುಕಾಸ್ವಾಮಿ ಮಾಡಿದ್ದ ಚಾಟಿಂಗ್‌ನಿಂದಲೇ ಕೊಲೆಗೆ ಪ್ರಮುಖ ಕಾರಣ ಎಂಬುದು ಬೆಳಕಿಗೆ ಬಂದಿದೆ.