Site icon Vistara News

Sanjay Gadhvi: ‘ಧೂಮ್‌’ ಚಿತ್ರ ನಿರ್ದೇಶಕ ಸಂಜಯ್‌ ಹೃದಯಾಘಾತದಿಂದ ನಿಧನ

sanjay

sanjay

ಮುಂಬೈ: ʼಧೂಮ್‌ʼ, ʼಧೂಮ್‌ 2ʼ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿದ್ದ ನಿರ್ದೇಶಕ ಸಂಜಯ್‌ ಗಧ್ವಿ (Sanjay Gadhvi) ಇಂದು (ನವೆಂಬರ್ 19) ನಿಧನ ಹೊಂದಿದ್ದಾರೆ. ಹಠಾತ್‌ ಎದೆ ನೋವು ಕಾಣಿಸಿಕೊಂಡಿದ್ದೇ ಅವರ ಮರಣಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.

ಲೋಖಂಡವಾಲಾದಲ್ಲಿ ಸಂಜಯ್‌ ಬೆಳಗಿನ ವಾಕಿಂಗ್‌ ಮಾಡುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಕೋಕಿಲ ಬೆನ್‌ ಅಂಬಾನಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು.

ಸಂಜಯ್ 2001ರಲ್ಲಿ ‘ತೇರೆ ಲಿಯೇ’ ನಿರ್ದೇಶನದ ಮೂಲಕ ಬಾಲಿವುಡ್​ಗೆ ಕಾಲಿಟ್ಟಿದ್ದರು. 2004ರಲ್ಲಿ ಅವರು ನಿರ್ದೇಶಿಸಿದ್ದ ‘ಧೂಮ್’ ಚಿತ್ರ ಸೂಪರ್ ಹಿಟ್ ಆಯಿತು. ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ಜಾನ್ ಅಬ್ರಾಹಂ, ಉದಯ್ ಚೋಪ್ರಾ ಮೊದಲಾದವರು ನಟಿಸಿದ್ದರು. 2006ರಲ್ಲಿ ಅವರ ನಿರ್ದೇಶನದ ‘ಧೂಮ್ 2’ ಸಿನಿಮಾ ರಿಲೀಸ್ ಆಯಿತು. ಹೃತಿಕ್ ರೋಷನ್, ಐಶ್ವರ್ಯಾ ರೈ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಇದು ಕೂಡ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ʼಮೇರೆ ಯಾರ್‌ ಕಿ ಶಾದಿ ಹೆʼ, ʼಅಜಬ್‌ ಗಜಬ್‌ ಲವ್‌ʼ, ʼಕಿಡ್ನ್ಯಾಪ್‌ʼ ಇತ್ಯಾದಿ ಅವರು ನಿರ್ದೇಶಿಸಿದ ಇತರ ಚಿತ್ರಗಳು. 2020ರಲ್ಲಿ ಸಂಜಯ್‌ ʼಆಪರೇಷನ್‌ ಪರಿಂದೆʼ ಮೂಲಕ ಒಟಿಟಿಗೆ ಕಾಲಿಟ್ಟಿದ್ದರು.

ಇದನ್ನೂ ಓದಿ: Actor Vinod Thomas: ಕಾರಿನಲ್ಲಿ ಖ್ಯಾತ ನಟನ ಶವ ಪತ್ತೆ; ನಿಗೂಢ ಸಾವಿಗೆ ಕಾರಣವೇನು?

ಸಂಜಯ್‌ ಗಧ್ವಿ ನಿಧನಕ್ಕೆ ಬಾಲಿವುಡ್‌ ಗಣ್ಯರು, ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಲಿವುಡ್‌ ನಟ ವಿನೋದ್ ಥಾಮಸ್ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದ ವಿಚಾರ ಅರಗಿಸಿಕೊಳ್ಳುವ ಮೊದಲೇ ಮತ್ತೊಂದು ಆಘಾತ ಸುದ್ದಿ ಎದುರಾಗಿದೆ.

Exit mobile version