ಬೆಂಗಳೂರು: ಗಾಯಕ ಸಂಜಿತ್ ಹೆಗಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಗಾಯಕ ಸಂಜಿತ್ ಹೆಗಡೆ (Sanjith Hegde) ಹಾಡಿರುವ, ಮೊದಲ ಬಾರಿ ಸಂಗೀತ ಸಂಯೋಜನೆ ಮಾಡಿರುವ ‘ಗೀಜಗ ಹಕ್ಕಿ…’ ಹಾಡು ಸಖತ್ ಟ್ರೆಂಡ್‌ನಲ್ಲಿದೆ. ಕೋಕ್ ಸ್ಟುಡಿಯೊದಲ್ಲಿ ಪ್ರಸ್ತುತಪಡಿಸಿದ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಯೂ ಈ ಹಾಡಿಗೆ ಸಿಕ್ಕಿದೆ. ಇದೀಗ `ಗೀಜಗ ಹಕ್ಕಿ ಸುಳ್ ನೇಯೋದಿಲ್ವಂತೆʼʼ ಹಾಡು ಎಲ್ಲೆಲ್ಲೂ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ಈ ಹಾಡಿಗೆ ಇದೆ, ಆಧುನಿಕ ಸಂಗೀತ ಹಾಗೂ ಯಕ್ಷಗಾನದ ಟಚ್.
‘ಕೋಕ್ ಸ್ಟುಡಿಯೊ ಭಾರತ್’ನ ಅಂಕುರ್ ತಿವಾರಿ ಅವರು ಗಾಯಕ ಸಂಜಿತ್ ಹೆಗಡೆ ಅವರನ್ನು ಸಂಪರ್ಕಿಸಿ, ಒಳ್ಳೆಯ ಕಥೆ ನಿರೂಪಿಸುವಂಥ ಹಾಡು ಹೆಣೆಯುವ ಹೊಣೆಗಾರಿಕೆ ವಹಿಸಿದರು. ಅದನ್ನು ಸ್ವೀಕರಿಸಿದ ಸಂಜಿತ್ ಇದೀಗ ಅದ್ಭುತ ಹಾಡನ್ನು ನೀಡಿದ್ದಾರೆ. ಯಕ್ಷಗಾನದಲ್ಲಿ ಸತ್ಯಹರಿಶ್ಚಂದ್ರ ಪ್ರಸಂಗ ನೋಡಿದ ಸಂಜಿತ್ ಇದನ್ನೇ ಫ್ಯೂಷನ್ ಸಂಗೀತದಲ್ಲಿ ರೆಕಾರ್ಡ್ ಮಾಡಿಸಿದ್ದಾರೆ.
ʻʻನಾನು ಒಂದೆರಡು ಸಾಲು ಬರೆದೆ. ಇದೇ ತಿರುಳನ್ನಿಟ್ಟುಕೊಂಡು ನಾಗಾರ್ಜುನ ಶರ್ಮಾ ಹಾಡಿಗೆ ಸಾಹಿತ್ಯ ಬರೆದರು. ಹಾಡಿಗೆ ಸ್ವರ ಸಂಯೋಜನೆ ನನ್ನದು, ನಂತರ ಸಂಗೀತ ಸಂಯೋಜಕ ಚರಣ್ ರಾಜ್ ಅವರ ಬಳಿ ಹಾಡಿನ ಬಗ್ಗೆ ಪ್ರಸ್ತಾಪ ಮಾಡಿದೆ. ಹೀಗೊಂದು ಹಾಡು ಮಾಡುತ್ತಿದ್ದೇನೆ, ಪ್ರೊಡಕ್ಷನ್ ಸಹಾಯ ಬೇಕು ಎಂದೆ. ತುಂಬಾ ಪ್ರೀತಿಯಿಂದ ಒಪ್ಪಿಕೊಂಡರುʼʼ ಎನ್ನುತ್ತಾರೆ ಸಂಜಿತ್.
ಇದನ್ನೂ ಓದಿ: South Cinema Actress: ಸೌತ್ ಸಿನಿಮಾದಲ್ಲಿ ಹೆಚ್ಚು ಸಂಭಾವನೆ ಯಾರಿಗೆ? ನಯನತಾರಾ, ಸಮಂತಾ, ತಮನ್ನಾ, ರಶ್ಮಿಕಾ ಅಲ್ವೇ ಅಲ್ಲ!
ಈ ಹಾಡಿನಲ್ಲಿ ಪಸನ್ನಕುಮಾರ ಹೆಗಡೆ ಅವರ ಭಾಗವತ ದನಿ ಇದೆ. ಸಾಕಷ್ಟು ಸಂಗೀತ ವಾದ್ಯಗಳು, ಮಕ್ಕಳ ದನಿ, ಶಾಸ್ತ್ರೀಯ ಆಧುನಿಕ ಸಂಗೀತ ಜತೆಯಾಗಿ ಈ ಹಾಡು ಮೂಡಿಬಂದಿದೆ. ಸಂಜಿತ್ ಅವರ ಸೋದರ ಸಂಬಂಧಿಗೆ ಪಕ್ಷಿಗಳ ಬಗ್ಗೆ ತುಂಬ ಆಸಕ್ತಿ. ಆಗ ಅವರು ಗೀಜಗ ಬಗ್ಗೆ ಮಾತನಾಡುವಾಗ ಗೂಡು ನೇಯುವುದರ ಬಗ್ಗೆಯೂ ಪ್ರಸ್ತಾಪಿಸಿದ್ದರಂತೆ. ಇದನ್ನೇ ಹಾಡಿಗೆ ಹಣೆದಯಲಾಗಿದೆ ಎನ್ನುತ್ತಾರೆ ಸಂಜಿತ್. ಈ ಹಾಡಿಗೆ ಇನಸ್ಟ್ರುಮೆಂಟೇಶನ್ ಮಾಡಿರುವುದು ಚರಣ್ ರಾಜ್.