ನ್ಯೂಯಾರ್ಕ್: ಹಾಲಿವುಡ್ ಮತ್ತು ಟೆಲಿವಿಷನ್‌ನ ಜನಪ್ರಿಯ ತಾರೆ ಸಾರಾ ಜೆಸ್ಸಿಕಾ ಪಾರ್ಕರ್ (Sarah Jessica Parker) ‘ಸೆಕ್ಸ್ ಆ್ಯಂಡ್ ಸಿಟಿ’ (Sex and the City) ಸೀರಿಸ್‌ನಲ್ಲಿ ಧರಿಸಿದ್ದ ಸ್ಕರ್ಟ್ ಹಜಾರಿನ ವೇಳೆ ದುಬಾರಿ ಬೆಲೆಗೆ ಮಾರಾಟವಾಗಿದೆ. ಕೇವಲ 415 ರೂ. ಬೆಲೆಯ ಈ ಸ್ಕರ್ಟ್ ಬಿಕರಿಯಾಗಿದ್ದು ಬರೋಬ್ಬರಿ ಸುಮಾರು 43 ಲಕ್ಷ ರೂ. (52,000 ಡಾಲರ್)ಗೆ!
ಈ ಬಟ್ಟೆಯನ್ನು ಕಾಸ್ಟ್ಯೂಮ್ ಡಿಸೈನರ್ ಪ್ಯಾಟ್ರೀಷಿಯಾ ಫೀಲ್ಡ್ ಅವರು ನ್ಯೂಯಾರ್ಕ್ ನಗರದ ಯಾವುದೋ ಒಂದು ಕಡೆಯಿಂದ ಕೇವಲ 415 ರೂ.ಗೆ ಪಡೆದುಕೊಂಡಿದ್ದರು. ʼಸೆಕ್ಸ್ ಆ್ಯಂಡ್ ಸಿಟಿʼ ಸೀರಿಸ್‌ನಲ್ಲಿ ಜೆಸ್ಸಿಕಾ ಧರಿಸಿದ್ದ ಈ ಸ್ಕರ್ಟ್ ಹಲವರ ಗಮನ ಸೆಳದಿತ್ತು. ಬಿಳಿ ಮತ್ತು ತಿಳಿ ಗುಲಾಬಿ ರಂಗಿನ ಈ ಬಟ್ಟೆ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಟುಟು ಎಂದೂ ಈ ಸ್ಕರ್ಟ್ ಅನ್ನು ಕರೆಯಲಾಗುತ್ತದೆ. ಜೂಲಿಯನ್ಸ್ ಹರಾಜಿನ ಅನ್ ಸ್ಟಾಪಬಲ್: ಸಿಗ್ನೇಚರ್ ಸ್ಟೈಲ್ಸ್ ಐಕಾನಿಕ್ ವುಮೆನ್ ಇನ್ ಫ್ಯಾಷನ್ ಹರಾಜಿನಲ್ಲಿ ಸೇರಿಸಲಾದ ಅನೇಕ ಅಪ್ರತಿಮ ವಸ್ತುಗಳಲ್ಲಿ ಈ ಸ್ಕರ್ಟ್ ಕೂಡ ಒಂದಾಗಿತ್ತು.
ʼಸೆಕ್ಸ್ ಆ್ಯಂಡ್ ಸಿಟಿʼ
ʼಸೆಕ್ಸ್ ಆ್ಯಂಡ್ ಸಿಟಿʼ ಸೀರಿಸ್‌ನಲ್ಲಿ ಜೆಸ್ಸಿಕಾ ಅವರು ಕ್ಯಾರಿ ಬ್ರಾಡ್ಶಾ ಎನ್ನುವ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಅಮೆರಿಕನ್ ರೊಮ್ಯಾಂಟಿಕ್ ಟೆಲಿವಿಷನ್ ಸೀರೀಸ್ ಆಗಿದ್ದು ಕ್ಯಾಂಡೇಸ್ ಬುಶ್ನೆಲ್ ಅವರ ಅಂಕಣ ಮತ್ತು ಅದೇ ಹೆಸರಿನ 1996ರ ಪುಸ್ತಕವನ್ನು ಆಧರಿಸಿ ತಯಾರಿಸಲಾಗಿತ್ತು. ಈ ಸೀರಿಸ್‌ನ ಮೊದಲ ಭಾಗ 1998ರ ಜೂನ್ 6ರಂದು ಪ್ರಸಾರವಾಗಿತ್ತು ಮತ್ತು 2004ರಂದು ಕೊನೆಗೊಂಡಿತ್ತು. ಇದು ಆರು ಸೀಸನ್‌ಗಳಲ್ಲಿ ಒಟ್ಟು 94 ಕಂತುಗಳು ಪ್ರಸಾರವಾಗಿವೆ. ಇದು ಪ್ರಸ್ತುತ ಪಡಿಸಿದ ವಿಷಯಗಳು, ಪಾತ್ರಗಳಿಂದ ಅಪಾರ ಮೆಚ್ಚುಗೆ ಮತ್ತು ಉತ್ತಮ ವಿಮರ್ಶೆ ಪಡೆದುಕೊಂಡಿತ್ತು. ನ್ಯೂಯಾರ್ಕ್ ನಗರದ ನಾಲ್ಕು ಮಹಿಳೆಯರ ಜೀವನದ ವೇಳೆ ಇದು ಬೆಳಕು ಚೆಲ್ಲಿತ್ತು. ಮೂವತ್ತರ ಹರೆಯದ ಮೂವರು ಮತ್ತು ನಲವತ್ತರ ಹರೆಯದ ಸ್ನೇಹಿತೆಯ ವಿಭಿನ್ನ ಸ್ವಭಾವಗಳು ಮತ್ತು ನಿರಂತರವಾಗಿ ಬದಲಾಗುತ್ತಿರುವ ಜೀವನವನ್ನು ಈ ಸೀರಿಸ್ ತಿಳಿಸಿತ್ತು.
ವಿಶೇಷ ಎಂದರೆ ʼಸೆಕ್ಸ್ ಆ್ಯಂಡ್ ಸಿಟಿʼ ಸೀರಿಸ್ ಮುಂದುವರಿದ ಭಾಗವಾಗಿ ಅದೇ ಹೆಸರಿನಲ್ಲಿ ಸಿನಿಮಾಗಳೂ ತಯಾರಾಗಿವೆ. 2008ರಲ್ಲಿ ತೆರೆಕಂಡ ಮೊದಲ ಸಿನಿಮಾವನ್ನು ಮೈಕೆಲ್ ಪ್ಯಾಟ್ರಿಕ್ ಕಿಂಗ್ ನಿರ್ದೇಶಿಸಿದ್ದರು. ಕ್ಯಾರಿ ಬ್ರಾಡ್ಶಾ (ಸಾರಾ ಜೆಸ್ಸಿಕಾ ಪಾರ್ಕರ್), ಸಮಂತಾ ಜೋನ್ಸ್ (ಕಿಮ್ ಕ್ಯಾಟ್ರಲ್), ಷಾರ್ಲೆಟ್ ಯಾರ್ಕ್(ಕ್ರಿಸ್ಟಿನ್ ಡೇವಿಸ್) ಮತ್ತು ಮಿರಾಂಡಾ ಹಾಬ್ಸ್ (ಸಿಂಥಿಯಾ ನಿಕ್ಸನ್) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2010ರಲ್ಲಿ ʼಸೆಕ್ಸ್ ಆ್ಯಂಡ್ ಸಿಟಿ 2ʼ ಚಿತ್ರ ತೆರೆಕಂಡಿತ್ತು. ಇದರಲ್ಲಿಯೂ ಜೆಸ್ಸಿಕಾ ನಟಿಸಿದ್ದರು.
ಇದನ್ನೂ ಓದಿ: Ryan O’Neal: ʼಲವ್ ಸ್ಟೋರಿʼ ಖ್ಯಾತಿಯ ಹಾಲಿವುಡ್ ನಟ ರಿಯಾನ್ ಒ ನೀಲ್ ನಿಧನ
ಟೈಮ್ ನಿಯತಕಾಲಿಕವು 2022ರಲ್ಲಿ ವಿಶ್ವದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಿದ ಸಾರಾ ಜೆಸ್ಸಿಕಾ ಪಾರ್ಕರ್ ಅವರು ಆರಂಭಿಕ ಸೀಸನ್‌ನಲ್ಲಿ ಧರಿಸಿದ ಸ್ಕರ್ಟ್ ಇದಾಗಿದೆ. ಇದೀಗ ಅನೇಕ ವರ್ಷಗಳ ಬಳಿಕ ದುಬಾರಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ಮತ್ತೆ ಸದ್ದು ಮಾಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ