ನ್ಯೂಯಾರ್ಕ್: ನ್ಯೂಯಾರ್ಕ್ ಮೂಲದ ಟೈಮ್ ಮ್ಯಾಗ್‌ಜಿನ್ 2023ರ ವಿಶ್ವದ ಟಾಪ್ 100 ಪ್ರಭಾವಶಾಲಿ ವ್ಯಕ್ತಿಗಳ (Time’s 100 Most Influential List) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಾಲಿವುಡ್ ನಟ ಶಾರುಖ್ ಖಾನ್, ನಿರ್ದೇಶಕ ಎಸ್.ಎಸ್. ರಾಜಮೌಳಿ, ಲೇಖಕ ಸಲ್ಮಾನ್ ರಶ್ದಿ, ದೂರದರ್ಶನ ನಿರೂಪಕಿ ಹಾಗೂ ತೀರ್ಪುಗಾರ್ತಿ ಪದ್ಮಾ ಲಕ್ಷ್ಮಿ ಅವರು ಸೇರಿಕೊಂಡಿದ್ದಾರೆ.
ವಿಶೇಷವೆಂದರೆ ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಕಿಂಗ್ ಚಾರ್ಲ್ಸ್, ಸಿರಿಯನ್ ಮೂಲದ ಈಜುಗಾರರು ಮತ್ತು ಸಾಮಾಜಿಕ ಕಾರ್ಯಕರ್ತೆಯರಾದ ಸಾರಾ ಮರ್ದಿನಿ ಮತ್ತು ಯುಸ್ರಾ ಮರ್ದಿನಿ, ಸ್ಟಾರ್ ಐಕಾನ್ ಬೆಲ್ಲಾ ಹಡಿದ್, ಕೋಟ್ಯಧಿಪತಿ ಸಿಇಒ ಎಲೋನ್ ಮಸ್ಕ್ ಮತ್ತು ಅಪ್ರತಿಮ ಗಾಯಕ ಮತ್ತು ಕಲಾವಿದ ಬೆಯೋನ್ಸ್ ಕೂಡ ಇದ್ದಾರೆ.
ಪಟ್ಟಿಯಲ್ಲಿ ಪ್ರಭಾವಶಾಲಿ ವ್ಯಕ್ತಿಗಳ ಬಗ್ಗೆ ಅವರಿಗೆ ಹತ್ತಿರವಿರುವವರೇ ಸಣ್ಣ ಟಿಪ್ಪಣಿಯನ್ನು ಬರೆದಿದ್ದಾರೆ. ಹಾಗೆಯೇ ಶಾರುಖ್ ಅವರ ಬಗ್ಗೆ ನಟಿ ದೀಪಿಕಾ ಪಡುಕೋಣೆ ಅವರು ಬರೆದಿದ್ದಾರೆ. “ಶಾರುಖ್ ಅವರ ಬಗ್ಗೆ ನಿಕಟವಾಗಿ ತಿಳಿದುಕೊಂಡಿರುವ ಯಾರಿಗಾದರೂ 150 ಪದಗಳಲ್ಲಿ ಅವರ ಬಗ್ಗೆ ಬರೆಯುವುದಕ್ಕೆ ಸಾಧ್ಯವಿಲ್ಲ. ಅವರು ಸಾರ್ವಕಾಲಿಕ ಶ್ರೇಷ್ಠ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ಒಳ್ಳೆಯ ಮನಸ್ಸು, ಧೈರ್ಯ, ಔದಾರ್ಯ ಹೀಗೆ ಎಲ್ಲವನ್ನೂ ಗುರುತಿಸಲೇಬೇಕು” ಎಂದು ಹೇಳಿದ್ದಾರೆ.
ಅಂದ ಹಾಗೆ ಈ ಪಟ್ಟಿ ಸೇರುವುದಕ್ಕೆ ಯಾರು ಅರ್ಹರು ಎಂದು ಸಾರ್ವಜನಿಕರ ಮತಗಳಿಂದ ನಿರ್ಧರಿಸಲಾಗಿದೆ. ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ಮತ ಹಾಕಿದ್ದು ಅದರಲ್ಲಿ ಶೇ.4ರಷ್ಟು ಮತ ಶಾರುಖ್ ಅವರಿಗೇ ಬಿದ್ದಿದೆ ಎಂದು ವರದಿಯಿದೆ.
ಇದನ್ನೂ ಓದಿ: IPL 2023: ಪಠಾಣ್ ಚಿತ್ರದ ಪೋಸ್ಟರ್ ಮೂಲಕ ರಿಂಕು ಸಿಂಗ್ಗೆ ಅಭಿನಂದಿಸಿದ ಶಾರುಖ್ ಖಾನ್
ಪಟ್ಟಿಯಲ್ಲಿರುವ ದಕ್ಷಿಣ ಭಾರತದ ಹೆಮ್ಮೆ ರಾಜಮೌಳಿ ಅವರ ಬಗ್ಗೆ ನಟಿ ಅಲಿಯಾ ಭಟ್ ಅವರು ಟಿಪ್ಪಣಿ ಬರೆದಿದ್ದಾರೆ. “ವೀಕ್ಷಕರಿಗೆ ಏನು ಇಷ್ಟ ಎನ್ನುವುದು ಇವರಿಗೆ ಚೆನ್ನಾಗಿ ತಿಳಿದಿದೆ. ಯಾವ ರೀತಿಯಲ್ಲಿ ಅವರನ್ನು ಮುಟ್ಟಬಹುದು ಎನ್ನುವ ವಿಚಾರ ಗೊತ್ತಿದೆ. ನಾನು ಅವರನ್ನು ಮಾಸ್ಟರ್ ಕಥೆಗಾರ ಎಂದೇ ಕರೆಯುತ್ತೇನೆ. ನಮ್ಮನ್ನೆಲ್ಲ ಒಟ್ಟುಗೂಡಿಸುವ ಶಕ್ತಿ ಅವರಿಗಿದೆ. ಭಾರತವು ವೈವಿಧ್ಯಮಯ ಅಭಿರುಚಿ, ಸಂಸ್ಕೃತಿಯನ್ನು ಹೊಂದಿರುವ ಬೃಹತ್ ರಾಷ್ಟ್ರ. ಆದರೆ ಚಲನಚಿತ್ರದ ಮೂಲಕ ಇಡೀ ದೇಶವನ್ನು ರಾಜಮೌಳಿ ಒಂದುಗೂಡಿಸುತ್ತಾರೆ. ಸಿನಿಮಾಗಳ ಬಗ್ಗೆ ಸಲಹೆ ಕೊಡಿ ಎಂದಿದ್ದಕ್ಕೆ ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿ ಎಂದು ಉತ್ತರಿಸಿದ್ದರು” ಎಂದು ಬರೆದಿದ್ದಾರೆ.
ಇನ್ನು ಲೇಖಕ ಸಲ್ಮಾನ್ ರಶ್ದಿ ಅವರ ಬಗ್ಗೆ ಸಂಗೀತ ಬ್ಯಾಂಡ್ ಆಗಿರುವ U2 ಬ್ಯಾಂಡ್‌ನ ಪ್ರಮುಖ ಗಾಯಕ ಬೊನೊ ಅವರು ಟಿಪ್ಪಣಿ ಬರೆದಿದ್ದಾರೆ. ಹಾಗೆಯೇ ಪದ್ಮಾ ಲಕ್ಷ್ಮಿ ಅವರ ಬಗ್ಗೆ ಹಾಸ್ಯನಟ, ಬರಹಗಾರ ಅಲಿ ವಾಂಗ್ ಅವರ ಟಿಪ್ಪಣಿಯನ್ನು ಕಾಣಬಹುದಾಗಿದೆ.