ಮುಂಬಯಿ: ಕೆಲವು ವರ್ಷಗಳಿಂದ ಸತತ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ (Shah Rukh Khan)ಭರ್ಜರಿಯಾಗಿಯೇ ಕಂ ಬ್ಯಾಕ್ ಮಾಡಿದ್ದಾರೆ. ವರ್ಷಾರಂಭದಲ್ಲಿ ʼಪಠಾಣ್ʼ(Pathaan) ಮೂಲಕ ಮೋಡಿ ಮಾಡಿದ್ದ ಶಾರುಖ್ ಇದೀಗ ʼಜವಾನ್ʼ (Jawan) ಚಿತ್ರದ ಮೂಲಕ ಮತ್ತೊಂದು ದಾಖಲೆ ಬರೆದಿದ್ದಾರೆ. ʼಜವಾನ್ʼ 525.50 ಕೋಟಿ ರೂ. ಗಳಿಸುವ ಮೂಲಕ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಚಿತ್ರ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.
ಸನ್ನಿ ಡಿಯೋಲ್ ನಟನೆಯ ‘ಗದರ್ 2’, ಪ್ರಭಾಸ್ ಅಭಿನಯದ ʼಬಾಹುಬಲಿ 2ʼ ಚಿತ್ರಗಳ ಗಳಿಕೆಯನ್ನೂ ಮೀರಿ ʼಜವಾನ್ʼ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಗದರ್ 2’ ಅಂದಾಜು 524.75 ಕೋಟಿ ರೂ. ಗಳಿಸುವ ಮೂಲಕ ಕಲೆಕ್ಷನ್ ವಿಚಾರದಲ್ಲಿ ಮುಂದೆ ಇತ್ತು. ಇದೀಗ ʼಜವಾನ್ʼ ಅದನ್ನೂ ಮೀರಿ ತನ್ನ ನಾಗಲೋಟವನ್ನು ಮುಂದುವರಿಸಿದೆ.
#Jawan is an ALL TIME BLOCKBUSTER…#Jawan biz at a glance… #Hindi version…
— taran adarsh (@taran_adarsh) September 29, 2023
⭐️ Week 1: ₹ 347.98 cr [8 days]
⭐️ Week 2: ₹ 125.46 cr
⭐️ Week 3: ₹ 52.06 cr
⭐️ Total: ₹ 525.50 cr#India biz. Nett BOC. #Boxoffice#Jawan biz at a glance… #Tamil + #Telugu versions…
⭐️ Week 1:… pic.twitter.com/HKxbX743UF
ವಿವಿಧ ಭಾಷೆಯಲ್ಲಿ ತೆರೆಕಂಡ ʼಜವಾನ್ʼ
ತಮಿಳಿನ ಯಶಸ್ವಿ ನಿರ್ದೇಶಕ ಅಟ್ಲಿ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ ಬಾಲಿವುಡ್ ಚಿತ್ರ ʼಜವಾನ್ʼ. ಇದು ಹಿಂದಿಯ ಜತೆಗೆ ತಮಿಳು ಮತ್ತು ತೆಲುಗಿನಲ್ಲೂ ತೆರೆಕಂಡಿದೆ. ಈ ಎರಡು ಭಾಷೆಗಳಲ್ಲಿ ಸುಮಾರು 58 ಕೋಟಿ ರೂ. ತನ್ನದಾಗಿಸಿಕೊಂಡಿದೆ. ಈ ಹಿಂದೆ ‘ಬಾಹುಬಲಿ 2’ ಸಿನಿಮಾ 510 ಕೋಟಿ ರೂ. ಗಳಿಸಿತ್ತು. ಆ ದಾಖಲೆಯನ್ನು ಶಾರುಖ್ ಖಾನ್ ‘ಪಠಾಣ್’ ಸಿನಿಮಾ ಮೂಲಕ ಈ ವರ್ಷ ಮುರಿದಿದ್ದರು. ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಮತ್ತಿತರರು ನಟಿಸಿದ್ದ ಆ ಚಿತ್ರ 513 ಕೋಟಿ ರೂ.ಗಳಿಸಿತ್ತು. ಬಳಿಕ ‘ಗದರ್ 2’ ಚಿತ್ರ ‘ಪಠಾಣ್’ ಸಿನಿಮಾವನ್ನು ಮೀರಿ ಮುಂದೆ ಸಾಗಿತು. ಇದೀಗ ಮತ್ತೆ ಶಾರುಖ್ ಖಾನ್ ನಂಬರ್ 1 ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಈ ಮಾಹಿತಿಯನ್ನು ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.
ಸೆಪ್ಟಂಬರ್ 7ರಂದು ಬಿಡುಗಡೆಯಾದ ʼಜವಾನ್ʼ ಚಿತ್ರವನ್ನು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಿರ್ಮಿಸಿದ್ದಾರೆ. ಭ್ರಷ್ಟಾಚಾರದ ವಿರುದ್ದ ಹೋರಾಡುವ ಪಾತ್ರದಲ್ಲಿ ಕಿಂಗ್ ಖಾನ್ ಕಾಣಿಸಿಕೊಂಡಿದ್ದು, ದ್ವಿಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಶಾರುಖ್ ಖಾನ್‌ನ ಲಕ್ ಎಂದೇ ಪರಿಗಣಿಸಲಾಗುವ ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ದಕ್ಷಿಣ ಭಾರತದ ಕಲಾವಿದರಾದ ವಿಜಯ್ ಸೇತುಪತಿ, ಪ್ರಿಯಾಮಣಿ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: Hombale Films: 2025ಕ್ಕೆ ಕೆಜಿಎಫ್ 3 ಪಕ್ಕಾ! ರಾಕಿ ಪಾತ್ರದಲ್ಲಿ ಯಶ್ ಇರ್ತಾರಾ?
ಒಂದೇ ವರ್ಷ ಎರಡು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಶಾರುಖ್ ಖಾನ್ ಅವರ ಇನ್ನೊಂದು ಸಿನಿಮಾ ಈ ವರ್ಷಾಂತ್ಯದಲ್ಲಿ ತೆರೆ ಕಾಣಲಿದೆ. ರಾಜ್‌ಕುಮಾರ್ ಹಿರಾನಿ ನಿರ್ದೇಶನದ ʼಡಂಕಿʼ ಚಿತ್ರ ಡಿಸೆಂಬರ್ 22ರಂದು ಬಿಡುಗಡೆಯಾಗಲಿದ್ದು, ಅಂದೇ ಪ್ರಭಾಸ್ ನಟನೆಯ ʼಸಲಾರ್ʼ ಸಿನಿಮಾ ಕೂಡ ರಿಲೀಸ್ ಆಗಲಿದೆ. ಈ ಮೂಲಕ ಕ್ರಿಸ್‌ಮಸ್ ವೇಳೆಗೆ ಬಹುದೊಡ್ಡ ಪೈಪೋಟಿ ನಡೆಯಲಿದೆ.