ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ʻಪಠಾಣ್ʼ ಸಿನಿಮಾ (Pathaan Movie) ವಿಶ್ವಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿದೆ. ಇದೀಗ ಈ ಹಿಟ್ ಸಿನಿಮಾ ಬಾಂಗ್ಲಾದೇಶದಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ. ಆದಿತ್ಯ ಚೋಪ್ರಾ ಅವರು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ. ಇದರಲ್ಲಿ ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೇ 12ರಂದು ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಲಿದೆ.
ಬಾಂಗ್ಲಾದೇಶದಲ್ಲಿ ಚಿತ್ರದ ಬಿಡುಗಡೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ ಯಶ್ ರಾಜ್ ಫಿಲ್ಮ್ಸ್ ಮುಖ್ಯಸ್ಥ ನೆಲ್ಸನ್ ಡಿಸೋಜಾ, “ಸಿನಿಮಾ ಯಾವಾಗಲೂ ರಾಷ್ಟ್ರ, ಜನಾಂಗಗಳು ಹಾಗೇ ಸಂಸ್ಕೃತಿಗಳನ್ನು ಒಂದುಗೂಡಿಸುವ ಶಕ್ತಿ ಹೊಂದಿದೆ. ಇದು ಗಡಿಗಳನ್ನು ಮೀರಿ, ಜನರನ್ನು ಪ್ರೇರೇಪಿ, ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಶ್ವಾದ್ಯಂತ ಮನ್ನಣೆ ಸಿಕ್ಕಿರುವ ಪಠಾಣ್ ಈಗ ಬಾಂಗ್ಲಾದೇಶದಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆʼʼಎಂದು ಹೇಳಿದ್ದಾರೆ.
“1971ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಪಠಾಣ್ ಆಗಿದೆ. ಶಾರುಖ್ ಖಾನ್ ಅವರು ಬಾಂಗ್ಲಾದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆʼʼಎಂದರು.
ಒಟಿಟಿಯಲ್ಲಿ ಈಗಾಗಲೇ ಪಠಾಣ್ ಬಂದಿದ್ದು, ನೋಡುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೆ ಪಠಾಣ್ ಕಲೆಕ್ಷನ್ 1 ಸಾವಿರ ಕೋಟಿ ರೂಪಾಯಿ ಮೀರಿದೆ ಎಂದು ಹೇಳಲಾಗಿದೆ. ಯಶ್ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್ ಹೌಸ್ ಪ್ರಕಾರ ಪಠಾಣ್ ಗಳಿಕೆ 1048.30 ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಭಾರತದಲ್ಲಿ ಕಲೆಕ್ಷನ್ 656.20 ಕೋಟಿ ರೂ.ಆಗಿದೆ. ಹಾಗೇ, ವಿದೇಶಗಳಲ್ಲಿ ಗಳಿಕೆ 392.10 ಕೋಟಿ ರೂ.
ಇದನ್ನೂ ಓದಿ: Pathaan Movie: 50 ದಿನಗಳನ್ನು ಪೂರೈಸಿದ ʻಪಠಾಣ್ʼ: 20 ದೇಶಗಳಲ್ಲಿ ಇನ್ನೂ ಪ್ರದರ್ಶನ!
ಪಠಾಣ್ ದೇಶಭಕ್ತಿ ಸಾರುವ ಸಿನಿಮಾ ಎಂದು ಶಾರುಖ್ ಖಾನ್ ಹೇಳಿದ್ದರು. ಇದರಲ್ಲಿ ಶಾರುಖ್ ಖಾನ್ RAW (Research and Analysis Wing)ನ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಭಯೋತ್ಪಾದಕರನ್ನು ಹತ್ತಿಕ್ಕುವ ಕಥೆ ಇದರಲ್ಲಿದ್ದು, ಜಾನ್ ಅಬ್ರಾಹಂ ಅವರು ಭಯೋತ್ಪಾದಕನ ಮುಖಂಡನ ಪಾತ್ರ ವಹಿಸಿದ್ದಾರೆ. ಪಠಾಣ್ ಬಿಡುಗಡೆಯಾಗುತ್ತಿದ್ದಂತೆ ಅತ್ಯಂತ ಯಶಸ್ವಿಯಾಗಿ ಓಡುತ್ತಿದೆ. ಅದರಲ್ಲು ಶಾರುಖ್ ಖಾನ್ಗಂತೂ ಅದೆಷ್ಟೋ ವರ್ಷಗಳ ನಂತರದ ಯಶಸ್ಸು ಇದು.