ಬೆಂಗಳೂರು: ಕನ್ನಡ ಸಿನಿಮಾ ರಂಗದಲ್ಲಿ 37 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ನಟ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೂ ಕನ್ನಡ ಚಿತ್ರರಸಿಕರಿಗೂ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಮೊದಲ ಚಿತ್ರ “ಆನಂದ್ ನೆನಪಿಸಿಕೊಂಡು ಅಭಿಮಾನಿಗಳಿಗೆ ಶಿವಣ್ಣ ಪತ್ರ ಬರೆದಿದ್ದಾರೆ. ʼʼನಮ್ಮ ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ (19-02-2023) 37 ವರ್ಷ ಆಗಿದೆ. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ! ಆನಂದ್ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆ ಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹೋದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳುʼʼ ಎಂದು ಶಿವಣ್ಣ ಟ್ವೀಟ್ ಮಾಡಿದ್ದಾರೆ.
1962ರಲ್ಲಿ ಜನಿಸಿದ ಶಿವರಾಜ್ ಕುಮಾರ್ 1986ರಲ್ಲಿ ಅನಂದ್ ಚಿತ್ರದ ಮೂಲಕ ಸಿನಿಮಾ ನಟನೆಗೆ ಕಾಲಿಟ್ಟಿದ್ದರು. ಆನಂದ್ ಸೇರಿದಂತೆ ಅವರ ಮೂರೂ ಆರಂಭಿಕ ಚಿತ್ರಗಳು (ಆನಂದ್, ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ) ಶತದಿನ ಪ್ರದರ್ಶನ ಕಂಡಿದ್ದವು. ಹೀಗಾಗಿ ಅವರು ಹ್ಯಾಟ್ರಿಕ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ʼವೇದʼ ಶಿವಣ್ಣನ 125ನೇ ಚಿತ್ರವಾಗಿದೆ.
ಇದನ್ನೂ ಓದಿ: Shivarajkumar: ಶಿವಣ್ಣ ಅಭಿನಯದ ‘ವೇದ’ ಒಟಿಟಿಗೆ ಎಂಟ್ರಿ ಕೊಡಲು ಡೇಟ್ ಫಿಕ್ಸ್