ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ಗೆ (Shivaraj Kumar Birthday) ಮಂಗಳವಾರ (ಜು.12) 60ನೇ ವರುಷದ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಹಿನ್ನೆಲೆಯಲ್ಲಿ ಈ ವರ್ಷ ತಾವು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶಿವಣ್ಣ ಈಗಾಗಲೇ ಪ್ರಕಟಿಸಿದ್ದಾರೆ.
ತಾವು ನಟಿಸಿದ ಮೂರು ಚಿತ್ರಗಳು ಅಂದರೆ ಆನಂದ್, ರಥಸಪ್ತಮಿ, ಮನಮೆಚ್ಚಿದ ಹುಡುಗ ಸಿನಿಮಾಗಳು ಒಂದರ ಹಿಂದೊಂದು 100 ದಿನ ಪ್ರದರ್ಶನ ಕಂಡದ್ದರಿಂದ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಪಡೆದವರು ಶಿವಣ್ಣ. 1962 ಜುಲೈ 12ರಂದು ಮದ್ರಾಸ್ ನಗರದಲ್ಲಿ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ದಂಪತಿಗೆ ಶಿವರಾಜ್‌ಕುಮಾರ್ ಜನಿಸಿದರು. ಶಿವಣ್ಣನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಚೆಕ್, ಪಾಸ್ ಪೋರ್ಟ್ ಎಲ್ಲದರಲ್ಲೂ ಎನ್.ಎಸ್ ಪುಟ್ಟಸ್ವಾಮಿ ಎಂದೇ ಇದೆ ಎಂದು ಶಿವಣ್ಣ ಈ ಹಿಂದೆ ಹೇಳಿಕೊಂಡಿದ್ದರು.
ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ
ಆನಂದ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿವಣ್ಣ, ಈ ಚಿತ್ರದ ಮೂಲಕ ಪ್ರಶಂಸೆಗೆ ಪಾತ್ರರಾದರು. 1994ರಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ʻಓಂʼ ಸಿನಿಮಾ ಶಿವರಾಜ್‌ಕುಮಾರ್ ಅವರಿಗೆ ಯಶಸ್ಸು ತಂದು ಕೊಟ್ಟಿತು. ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಜೋಗಿ, ಚಿಗುರಿದ ಕನಸು, ತವರಿಗೆ ಬಾ ತಂಗಿ, ವಜ್ರಕಾಯ, ಟಗರು, ಬೈರಾಗಿ ಹೀಗೆ ಬರೋಬ್ಬರಿ 123 ಸಿನಿಮಾಗಳನ್ನು ಪೂರೈಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣ 125ನೇ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.
ಇದನ್ನೂ ಓದಿ | Vedha Movie | ಶಿವರಾಜ್ ಕುಮಾರ್ 125ನೇ ಚಿತ್ರದ ನಿರ್ಮಾಪಕಿ ಗೀತಾ; ಪೋಸ್ಟರ್ ರಿಲೀಸ್
ಪ್ರಶಸ್ತಿ ಬಾಚಿಕೊಂಡಿರುವ ಹ್ಯಾಟ್ರಿಕ್
ಶಿವರಾಜ್‌ಕುಮಾರ್ ಅವರು ಕೇವಲ ನಟನೆ ಮಾತ್ರವಲ್ಲದೇ ಹಿನ್ನೆಲೆ ಗಾಯಕನೂ ಹೌದು. ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ , ಅಂಡಮಾನ್, ಹೀಗೆ ಹಲವಾರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. 1995ರಲ್ಲಿ ಓಂ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ, 1999ರ ಹೃದಯ ಹೃದಯ ಸಿನಿಮಾಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಚಿಗುರಿದ ಕನಸು, ಜೋಗಿ ಸಿನಿಮಾಗೂ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿದೆ.
1996ರ ನಮ್ಮೂರ ಮಂದಾರ ಹೂವೇ ಸಿನಿಮಾಗೆ ಫಿಲಂಫೇರ್ ಅವಾರ್ಡ್ ದೊರೆತಿದೆ. 1996ರಲ್ಲಿ ಜನುಮದ ಜೋಡಿ ಸಿನಿಮಾಗೆ ಆರ್ಯಭಟ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದೆ.
ಹ್ಯಾಟ್ರಿಕ್ ಸಿನಿಮಾ ಮೈಲಿಗಲ್ಲುಗಳು
1986ರಲ್ಲಿ ಆನಂದ್ ಸಿನಿಮಾ ಮೊದಲ ಸಿನಿಮಾ ಆದರೆ, 1995ರಲ್ಲಿ ಮನ ಮಿಡಿಯಿತು 25ನೇ ಸಿನಿಮಾ, 1999ರಲ್ಲಿ 50ನೇ ಸಿನಿಮಾ ಏಕೆ 47 ಹಾಗೂ 2003ರಲ್ಲಿ 75ನೇ ಚಿತ್ರ ಶ್ರೀರಾಮ್ ಮತ್ತು 2011ರಲ್ಲಿ 100ನೇ ಚಿತ್ರ ಜೋಗಯ್ಯ ಆಗಿದೆ. 125ನೇ ಸಿನಿಮಾ ವೇದಾ ತೆರೆಗೆ ಬರಲು ಸಜ್ಜಾಗಿದೆ.
ಇದನ್ನೂ ಓದಿ | Shivanna Birthday | ಜೀ ಟಿವಿಯಲ್ಲಿ ಶಿವರಾಜೋತ್ಸವ; 60 ಗಂಟೆ ಪ್ರಸಾರವಾಗಲಿದೆ ಶಿವಣ್ಣನ ಸಿನಿಮಾ
ಸಾಲು ಸಾಲು ಚಿತ್ರದಲ್ಲಿ ಬ್ಯುಸಿ ಆದ ಶಿವಣ್ಣ
ಶಿವರಾಜ್‌ಕುಮಾರ್ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಸದಾಗಿ ಒಪ್ಪಿಕೊಂಡಿರುವ ಚಿತ್ರ ಹಾಗೂ ಶ್ರೀನಿ ನಿರ್ದೇಶನದ ʻಘೋಸ್ಟ್ʼ ಚಿತ್ರ ಸೆಟ್ಟೇರಲು ಸಜ್ಜಾಗಿವೆ. ಬೈರಾಗಿ ಸಿನಿಮಾ ಕೂಡ ಬಿಡುಗಡೆಗೊಂಡಿದ್ದು, ಚಿತ್ರ ಮಂದಿರಗಳಿಗೆ ಶಿವಣ್ಣ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2ನಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ ಎ.ಹರ್ಷ ಹಾಗೂ ಶಿವಣ್ಣನ ಕಾಂಬಿನೇಶನ್ ವೇದ ಚಿತ್ರದಲ್ಲೂ ಕಮಾಲ್ ಮಾಡುವುದಕ್ಕೆ ಸಜ್ಜಾಗಿದೆ. ಇದು ಶಿವಣ್ಣ ಅವರ 125ನೇ ಸಿನಿಮಾ ಆಗಿರುವುದು ವಿಶೇಷ. ರಿಷಭ್ ಶೆಟ್ಟಿ ಅವರೊಂದಿಗೆ ಹೊಸ ಚಿತ್ರಕ್ಕೂ ಕೈ ಜೋಡಿಸಲಿದ್ದಾರೆ.
ಇದನ್ನೂ ಓದಿ | Bairagee Movie | ಹ್ಯಾಟ್ರಿಕ್ ಹೀರೋ ನೋಡಲು ಮುಗಿಬಿದ್ದ ಫ್ಯಾನ್ಸ್ : ಅಪ್ಪು ಹೆಸರಿನಲ್ಲಿ ಜೈಕಾರ