Site icon Vistara News

Shivaraj Kumar: ಶಿವಣ್ಣ ಸಿನಿ ಜರ್ನಿಗೆ 38 ವರ್ಷ: ಅಭಿಮಾನಿಗಳಲ್ಲಿ ಹರುಷ!

Shivaraj Kumar Completes 38 Years In Kannada Film Industry

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ (Shivaraj Kumar) ಕನ್ನಡ ಚಿತ್ರರಂಗದಲ್ಲಿ ಶಿವಣ್ಣ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. 1986ರ ಫೆಬ್ರವರಿ 19ರಂದು ಶಿವಣ್ಣನ ಮೊದಲ ಸಿನಿಮಾ ‘ಆನಂದ್​’ (Anand Kannada Movie) ಮುಹೂರ್ತ ನೆರವೇರಿತ್ತು. ಅಂದಿನಿಂದ ಇಂದಿಗೆ ಬಣ್ಣದ ಲೋಕದ ಜರ್ನಿಯಲ್ಲಿ ಅವರು 38 ವರ್ಷಗಳನ್ನು ಪೂರೈಸಿದ್ದಾರೆ. ಈ ಸಾಧನೆಗಾಗಿ ಅವರಿಗೆ ಅಭಿಮಾನಿಗಳು ಹಾಗೂ ಅನೇಕ ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ತಾವು ನಟಿಸಿದ ಮೂರು ಚಿತ್ರಗಳು ಅಂದರೆ ಆನಂದ್‌, ರಥಸಪ್ತಮಿ, ಮನಮೆಚ್ಚಿದ ಹುಡುಗ ಸಿನಿಮಾಗಳು ಒಂದರ ಹಿಂದೊಂದು 100 ದಿನ ಪ್ರದರ್ಶನ ಕಂಡದ್ದರಿಂದ ಹ್ಯಾಟ್ರಿಕ್‌ ಹೀರೋ ಎಂಬ ಬಿರುದು ಪಡೆದವರು ಶಿವಣ್ಣ. 1962 ಜುಲೈ 12ರಂದು ಮದ್ರಾಸ್‌ ನಗರದಲ್ಲಿ ಡಾ.ರಾಜ್‌ಕುಮಾರ್‌ ಮತ್ತು ಪಾರ್ವತಮ್ಮ ದಂಪತಿಗೆ ಶಿವರಾಜ್‌ಕುಮಾರ್‌ ಜನಿಸಿದರು. ಶಿವಣ್ಣನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಚೆಕ್‌, ಪಾಸ್‌ ಪೋರ್ಟ್‌ ಎಲ್ಲದರಲ್ಲೂ ಎನ್‌.ಎಸ್‌ ಪುಟ್ಟಸ್ವಾಮಿ ಎಂದೇ ಇದೆ ಎಂದು ಶಿವಣ್ಣ ಈ ಹಿಂದೆ ಹೇಳಿಕೊಂಡಿದ್ದರು.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶಿವಣ್ಣ

ಆನಂದ್‌ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶಿವಣ್ಣ, ಈ ಚಿತ್ರದ ಮೂಲಕ ಪ್ರಶಂಸೆಗೆ ಪಾತ್ರರಾದರು. 1994ರಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ʻಓಂʼ ಸಿನಿಮಾ ಶಿವರಾಜ್‌ಕುಮಾರ್‌ ಅವರಿಗೆ ಯಶಸ್ಸು ತಂದು ಕೊಟ್ಟಿತು. ಜನುಮದ ಜೋಡಿ, ನಮ್ಮೂರ ಮಂದಾರ ಹೂವೆ, ಜೋಗಿ, ಚಿಗುರಿದ ಕನಸು, ತವರಿಗೆ ಬಾ ತಂಗಿ, ವಜ್ರಕಾಯ, ಟಗರು, ಬೈರಾಗಿ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ ಶಿವಣ್ಣ.

ಇದನ್ನೂ ಓದಿ: Shivaraj Kumar: ಡಿ.ಕರಡೀಗೌಡರ 10ನೇ ಪುಣ್ಯ ಸ್ಮರಣೆ; ರಾಜಕೀಯ ಬೇಡ, ಸಿನಿಮಾ ರಂಗವೇ ಸಾಕು ಎಂದ ಶಿವಣ್ಣ!

ಕನ್ನಡ ಮಾತ್ರವಲ್ಲದೇ, ಪರಭಾಷೆಯಲ್ಲೂ ಶಿವರಾಜ್​ಕುಮಾರ್​ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ. ರಜನಿಕಾಂತ್​ ನಟನೆಯ ತಮಿಳಿನ ‘ಜೈಲರ್​’ ಸಿನಿಮಾ,ಧನುಷ್​ ಜೊತೆ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲಿ ತೆರೆ ಹಂಚಿಕೊಂಡರು.

ಪ್ರಶಸ್ತಿ ಬಾಚಿಕೊಂಡಿರುವ ಹ್ಯಾಟ್ರಿಕ್‌

ಶಿವರಾಜ್‌ಕುಮಾರ್‌ ಅವರು ಕೇವಲ ನಟನೆ ಮಾತ್ರವಲ್ಲದೇ ಹಿನ್ನೆಲೆ ಗಾಯಕನೂ ಹೌದು. ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ , ಅಂಡಮಾನ್‌, ಹೀಗೆ ಹಲವಾರು ಸಿನಿಮಾಗಳಿಗೆ ಹಿನ್ನೆಲೆ ಗಾಯನ ಮಾಡಿದ್ದಾರೆ. 1995ರಲ್ಲಿ ಓಂ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ, 1999ರ ಹೃದಯ ಹೃದಯ ಸಿನಿಮಾಗೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ, ಚಿಗುರಿದ ಕನಸು, ಜೋಗಿ ಸಿನಿಮಾಗೂ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭಿಸಿದೆ.

1996ರ ನಮ್ಮೂರ ಮಂದಾರ ಹೂವೇ ಸಿನಿಮಾಗೆ ಫಿಲಂಫೇರ್‌ ಅವಾರ್ಡ್‌ ದೊರೆತಿದೆ. 1996ರಲ್ಲಿ ಜನುಮದ ಜೋಡಿ ಸಿನಿಮಾಗೆ ಆರ್ಯಭಟ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ದೊರೆತಿದೆ. ಸಿನಿಮಾ ರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್‌ ನೀಡಿದೆ.

ಹ್ಯಾಟ್ರಿಕ್‌ ಸಿನಿಮಾ ಮೈಲಿಗಲ್ಲುಗಳು

1986ರಲ್ಲಿ ಆನಂದ್‌ ಸಿನಿಮಾ ಮೊದಲ ಸಿನಿಮಾ ಆದರೆ, 1995ರಲ್ಲಿ ಮನ ಮಿಡಿಯಿತು 25ನೇ ಸಿನಿಮಾ, 1999ರಲ್ಲಿ 50ನೇ ಸಿನಿಮಾ ಏಕೆ 47 ಹಾಗೂ 2003ರಲ್ಲಿ 75ನೇ ಚಿತ್ರ ಶ್ರೀರಾಮ್‌ ಮತ್ತು 2011ರಲ್ಲಿ 100ನೇ ಚಿತ್ರ ಜೋಗಯ್ಯ ಆಗಿದೆ. 125ನೇ ಸಿನಿಮಾ ವೇದಾ ತೆರೆಗೆ ಬರಲು ಸಜ್ಜಾಗಿದೆ.

Exit mobile version