ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರ ಆಗಸ್ಟ್ 9ರ ರಾತ್ರಿ ನಗರಕ್ಕೆ ತಲುಪಿದ್ದು, ಮಲ್ಲೇಶ್ವರಂನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಹಲವಾರು ಗಣ್ಯರು ಸ್ಪಂದನಾ ಅಂತಿಮ ದರ್ಶನಕ್ಕೆ ಹಾಜರಾಗಿದ್ದಾರೆ. ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಮಕ್ಕಳು ದೃತಿ, ವಂದಿತಾ ನಿಧನಕ್ಕೆ ಕಣ್ಣೀರಿಟ್ಟಿದ್ದಾರೆ.
ಬಿಕ್ಕಿ ಬಿಕ್ಕಿ ಅಳುತ್ತಿರುವ ಅಶ್ವಿನಿ ಮತ್ತು ಅಪ್ಪು ಮಕ್ಕಳಿಗೆ ಶ್ರೀಮುರಳಿ ಸಂತೈಸಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಅವರ ನಿವಾಸದ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ಚಿತ್ರರಂಗದ ಗಣ್ಯರು ಅಂತಿಮ ದರ್ಶನ ಪಡೆದು, ವಿಜಯ ರಾಘವೇಂದ್ರ ಅವರಿಗೆ ಸಾಂತ್ವನ ಹೇಳುತ್ತಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ಶರಣ್ ಆಗಮಿಸಿ ಚಿನ್ನಾರಿ ಮುತ್ತನಿಗೆ ಸಾಂತ್ವನ ಹೇಳಿದರು.
ಮಗನನ್ನು ಸಮಾಧಾನ ಮಾಡಲು ವಿಜಯ್ ಹರಸಾಹಸ
ಸ್ಪಂದನಾ-ವಿಜಯ್ ರಾಘವೇಂದ್ರ ದಂಪತಿಗೆ ಶೌರ್ಯ (Shourya) ಹೆಸರಿನ ಮಗ ಇದ್ದಾನೆ. ಸ್ಪಂದನಾ ಪಾರ್ಥಿವ ಶರೀರದ ಎದುರು ಕುಳಿತು ಶೌರ್ಯ ಕಣ್ಣೀರು ಹಾಕುತ್ತಿದ್ದಾನೆ. ಆತನನ್ನು ಸಮಾಧಾನ ಮಾಡಲು ವಿಜಯ್ ಹಾಗೂ ಶ್ರೀಮುರಳಿ ಪ್ರಯತ್ನಿಸಿದ್ದಾರೆ. ಆದರೆ, ಶೌರ್ಯನ ಕಣ್ಣೀರು ನಿಲ್ಲುತ್ತಿಲ್ಲ.
ಇದನ್ನೂ ಓದಿ: Spandana Vijay Raghavendra : ರಾಜ್ ಕುಟುಂಬದಲ್ಲೇಕೆ ಪದೇಪದೆ ದುರಂತ; ಅಷ್ಟಮಂಗಳ ಪ್ರಶ್ನೆ ಇಡಲು ಚಿಂತನೆ
ತಂದೆ ಬಿ.ಕೆ.ಶಿವರಾಂ ಮನೆ ಆವರಣದಲ್ಲಿ ಸ್ಪಂದನಾ ಅವರ ಮೃತ ದೇಹವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಪೂಜಾ ಕಾರ್ಯಗಳನ್ನು ಸ್ಪಂದನ ಕುಟುಂಬಸ್ಥರು ನೆರವೇರಿಸಿದರು. ದೀಪ ಬೆಳಗಿಸಿ ಪ್ರದಕ್ಷಿಣೆ ಹಾಕಿದರು. ಈ ಸಂದರ್ಭದಲ್ಲಿ ವಿಜಯ್ ರಾಘವೇಂದ್ರ ಹಾಗೂ ಶ್ರೀ ಮುರುಳಿ ಅಲ್ಲಿದ್ದು, ಸ್ತಬ್ಧವಾಗಿ ನಿಂತದ್ದು ಕಂಡುಬಂತು.
ಸ್ಪಂದನಾ ಅಂತಿಮ ದರ್ಶನಕ್ಕಾಗಿ ಗಣ್ಯರು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಪತಿ ವಿಜಯ ರಾಘವೇಂದ್ರ ಸ್ಪಂದನಾ ತಲೆದೆಸೆಯಲ್ಲಿ ಮೌನವಾಗಿ ಕುಳಿತಿದ್ದಾರೆ. ಚಿತ್ರರಂಗದ ಗಣ್ಯರಾದ ಗಿರಿಜಾ ಲೋಕೇಶ್, ವಿಜಯ್ ಪ್ರಕಾಶ್, ಶ್ರೀನಾಥ್, ರಾಘವೇಂದ್ರ ರಾಜಕುಮಾರ್, ಸುಧಾರಾಣಿ, ರಾಜಕೀಯ ಮುಖಂಡರಾದ ಯು.ಟಿ ಖಾದರ್, ಮಧು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಸುನಿಲ್ ಕುಮಾರ್ ಮುಂಜಾನೆ ಆಗಮಿಸಿ ಅಂತಿಮ ದರ್ಶನ ಪಡೆದರು.ಬೆಂಗಳೂರಿನ ಶ್ರೀರಾಂಪುರದ ಹರಿಶ್ಚಂದ್ರ ಘಾಟ್ ನಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಲಿದೆ.