Site icon Vistara News

Shruti Haasan: ಬಾಯ್‌ಫ್ರೆಂಡ್‌ಗೆ ಧನ್ಯವಾದ ಅರ್ಪಿಸಿದ್ದೇಕೆ ನಟಿ ಶ್ರುತಿ ಹಾಸನ್‌?

shruthi hasan

shruthi hasan

ಮುಂಬೈ: ಕಾಲಿವುಡ್‌ ಸೂಪರ್‌ ಸ್ಟಾರ್‌ ಕಮಲ್‌ ಹಾಸನ್‌ ಅವರ ಪುತ್ರಿ ನಟಿ ಶ್ರುತಿ ಹಾಸನ್‌ (Shruti Haasan) ಮುಂಬೈಯಲ್ಲಿ ದೀಪಾವಳಿ ಆಚರಿಸಿಕೊಂಡಿದ್ದಾರೆ. ಶ್ರುತಿ ಹಾಸನ್‌ ಮತ್ತು ಅವರ ಪ್ರಿಯತಮ ಶಂತನು ಹಜಾರಿಕಾ (Santanu Hazarika) ಮುಂಬೈಯ ತಮ್ಮ ಮನೆಯಲ್ಲಿ ಆತ್ಮೀಯರಿಗಾಗಿ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಇದರಲ್ಲಿ ಶ್ರುತಿ ಅವರ ತಾಯಿ ಸಾರಿಕಾ, ಬೆರಳೆಣಿಕೆಯಷ್ಟು ಸ್ನೇಹಿತರು ಭಾಗವಹಿಸಿದ್ದರು. ನಟಿಯ ಜತೆಗೆ ಗಾಯಕಿಯೂ ಆಗಿರುವ ಶ್ರುತಿ ಹಾಸನ್‌ ಈ ಪಾರ್ಟಿ ಸಂದರ್ಭದಲ್ಲಿ ತಮ್ಮ ಇತ್ತೀಚಿನ ʼಮಾನ್‌ಸ್ಟರ್‌ ಮೆಷಿನ್‌ʼ (Monster Machine) ಹಾಡನ್ನು ಪ್ರಸ್ತುತಪಡಿಸಿದರು. ಅಲ್ಲದೆ ಶ್ರುತಿ ಹಾಸನ್‌ ತಮ್ಮ ಉತ್ತಮ ಸಂಗಾತಿಯಾಗಿರುವುದಕ್ಕೆ ಮತ್ತು ಹಾಡಲು ಸಹಕಾರ ನೀಡಿರುವುದಕ್ಕೆ ಶಂತನು ಹಜಾರಿಕಾ ಅವರಿಗೆ ಧನ್ಯವಾದ ಅರ್ಪಿಸಿದರು.

ಈ ವಿಡಿಯೊವನ್ನು ಪೋಸ್ಟ್‌ ಮಾಡಿರುವ ಶ್ರುತಿ ಹಾಸನ್‌, ʼʼಮಲ್ಲಿಗೈ ಪೂ ಮಾನ್‌ಸ್ಟರ್‌. ನಾನು ಸ್ನೇಹಿತರೊಂದಿಗೆ ಸುಂದರವಾದ ಸಂಜೆಯನ್ನು ಕಳೆದಿದ್ದೇನೆ. ನನ್ನ ಅಮ್ಮ ʼಮಾನ್‌ಸ್ಟರ್‌ ಮೆಷಿನ್‌ʼ ಹಾಡನ್ನು ಪ್ರಸ್ತುತ ಪಡಿಸುವಂತೆ ಆಗ್ರಹಿಸಿದರು. ಗೆಳೆಯ ಕಾರ್ತಿಕ್‌ ನನ್ನ ಹಳೆಯ ಗಿಟಾರ್ ಅನ್ನು ಸರಿ ಮಾಡಿಕೊಟ್ಟ. ನಂತರ ನಾವು ಒಟ್ಟಿಗೆ ಹಾಡಿದೆವುʼʼ ಎಂದು ಶ್ರುತಿ ಹಾಸನ್‌ ಬರೆದುಕೊಂಡಿದ್ದಾರೆ. ಬಳಿಕ ಮುಂದುವರಿದು, ʼʼಆತ್ಮೀಯರ ಜತೆಗೆ, ಸಂಗೀತದೊಂದಿಗೆ ಸಮಯ ಕಳೆಯಲು ಸಾಧ್ಯವಾಗಿದ್ದು ಖುಷಿ ಕೊಟ್ಟಿದೆ. ಇದು ಖಂಡಿತವಾಗಿಯೂ ನನ್ನ ಜೀವನದ ಅತ್ಯುನ್ನತ ಕ್ಷಣ. ಜತೆಗೆ ನನ್ನ ಇತರ ಆತ್ಮೀಯರನ್ನು ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಈ ದೀಪಾವಳಿಯನ್ನು ಖುಷಿಯಿಂದ ಆಚರಿಸುತ್ತಿದ್ದಾರೆ ಎನ್ನುವ ನಂಬಿಕೆ ಇದೆ. ಈ ರೀತಿಯ ಆಚರಣೆಗಳನ್ನು ನಾನು ಇಷ್ಟಪಡುತ್ತೇನೆ. ಅತ್ಯುತ್ತಮ ಸಂಗಾತಿಯಾಗಿರುವುದಕ್ಕೆ ಮತ್ತು ಬೆಂಬಲ ನೀಡಿದ್ದಕ್ಕೆ ಶಂತನು ಹಜಾರಿಕಾ ಅವರಿಗೆ ಧನ್ಯವಾದʼʼ ಎಂದು ಹೇಳಿದ್ದಾರೆ.

ಶುಭಾಶಯ ಕೋರಿದ ಜೋಡಿ

ಈ ಮಧ್ಯೆ ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸಾಂಪ್ರದಾಯಿಕ ಉಡುಗೆ ತೊಟ್ಟು ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ. ಹಸಿರು ಸೀರೆಯಲ್ಲಿ ಶ್ರುತಿ ಹಾಸನ್‌ ಕಂಗೊಳಿಸುತ್ತಿದ್ದರೆ ಶಂತನು ಹಜಾರಿಕಾ ಸಿಲ್ಕ್‌ ಶರ್ಟ್‌ ಮತ್ತು ಬಳಿ ಧೋತಿ ಧರಿಸಿ ಗಮನ ಸೆಳೆದಿದ್ದಾರೆ. ತಾವಿಬ್ಬರು ಜತೆಗಿರುವ ಫೋಟೊ ಹಂಚಿಕೊಂಡ ಶ್ರುತಿ ಹಾಸನ್‌, ʼʼನಮ್ಮ ಕಡೆಯಿಂದ ದೀಪಾವಳಿಯ ಶುಭಾಶಯಗಳು. ನಿಮ್ಮ ಜೀವನ ಯಾವತ್ತೂ ಬೆಳಕು ಎಂಬ ಪ್ರೀತಿ ಮತ್ತು ಸಂತಸದಿಂದ ಕೂಡಿರಲಿʼʼ ಎಂದು ಹಾರೈಸಿದ್ದಾರೆ.

5 ವರ್ಷಗಳಿಂದ ಡೇಟಿಂಗ್‌?

ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈಗ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆ. ಆಗಾಗ ಶ್ರುತಿ ಹಾಸನ್‌ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಾರೆ. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್‌ ಅಂತೆ.

ಇದನ್ನೂ ಓದಿ: Shruti Haasan: ಬಾಯ್‌ಫ್ರೆಂಡ್‌ ಜತೆ ಜನುಮದಿನ ಆಚರಿಸಿಕೊಂಡ ಶ್ರುತಿ ಹಾಸನ್‌

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸದ್ಯ ಶ್ರುತಿ ಹಾಸನ್‌ ಬಹು ನಿರೀಕ್ಷಿತ ʼಸಲಾರ್‌ ಪಾರ್ಟ್‌ 1ʼ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಪ್ರಶಾಂತ್‌ ನೀಲ್‌ ನಿರ್ದೇಶನದ ಈ ಚಿತ್ರಕ್ಕಾಗಿ ದೇಶವೇ ಕಾಯುತ್ತಿದ್ದು. ಪ್ರಭಾಸ್‌ಗೆ ಬಹು ದೊಡ್ಡ ಗೆಲುವು ತಂಡು ಕೊಡಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಡಿಸೆಂಬರ್‌ 22ರಂದು ಪ್ಯಾನ್‌ ಇಂಡಿಯಾ ಚಿತ್ರವಾಗಿ ತೆರೆಗೆ ಬರಲಿರುವ ಈ ಸಿನಿಮಾದಲ್ಲಿ ಮಾಲಿವುಡ್‌ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version