ಬೆಂಗಳೂರು: ತಮ್ಮ ಮುಂಬರುವ ತಮಿಳು ಚಿತ್ರ ʻಟಕ್ಕರ್ʼ ಬಿಡುಗಡೆಗೆ ಸಜ್ಜಾಗುತ್ತಿರುವ ನಟ ಸಿದ್ಧಾರ್ಥ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ (Kamal Haasan) ಅವರ ಇಂಡಿಯನ್ 2 ಸಿನಿಮಾದ ಭಾಗವಾಗಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. ಶಂಕರ್ ನಿರ್ದೇಶನದ ಹಾಗೂ ಕಮಲ್ ಹಾಸನ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್ ಹಾಗೂ ಸಿದ್ಧಾರ್ಥ್ ಒಟ್ಟಿಗೆ ಕೆಲಸ ಮಾಡುವಂತಾಗಿದೆ.
ಸಿದ್ಧಾರ್ಥ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ ʻʻಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾದರೂ, ಬ್ಲಾಕ್ ಬಸ್ಟರ್ ಆಗಲಿದೆ. ಈ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನನಗೆ ಸಂತೋಷವಿದೆ. ಇಷ್ಟು ವರ್ಷಗಳ ನಂತರ ಮತ್ತೆ ನಿರ್ದೇಶಕರಾದ ಶಂಕರ್ ಹಾಗೂ ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ನಿರ್ದೇಶಕರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆʼʼ ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ.
ಇಂಡಿಯನ್ 2 ಲುಕ್‌ಗಾಗಿ ಕಮಲ್ ಸಾಕಷ್ಟು ಶ್ರಮ ವಹಿಸಿಸುತ್ತಿದ್ದಾರೆ. ಕಳೆದ ವರ್ಷ, ಬರಹಗಾರ ಜಯಮೋಹನ್ ಅವರು ಸೆಟ್‌ಗಳಲ್ಲಿ ಕಮಲ್ ಹಾಸನ್ ಇರುವ ಬಗೆಯನ್ನು ಬಣ್ಣಿಸಿದ್ದರು. ಕಮಲ್ ಅವರ ಬದ್ಧತೆ ಮತ್ತು ನಟನಾ ಮಯದಲ್ಲಿ ಹೇಗೆ ಇರುತ್ತಾರೆ ಎಂಬುದರ ಬಗ್ಗೆ ವಿವರಿಸಿದ್ದರು. ʻʻಕಮಲ್ ಅವರು ಸೆಟ್‌ಗಳಲ್ಲಿ ಬಹುತೇಕ ಹಸಿವಿನಿಂದಲೇ ಇರುತ್ತಾರೆ. ನಟಿಸುವ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ. ಇದಕ್ಕೆ ಕಾರಣವೂ ಇದ್ದು, ನಟನೆ ಸಂದರ್ಭದಲ್ಲಿ ಏನನ್ನಾದರೂ ತಿನ್ನುತ್ತಿದ್ದರೆ, ಅಂದರೆ ಬಾಯಲ್ಲಿ ಅಗಿಯುತ್ತಿದ್ದರೆ, ಅದು ಪ್ರಾಸ್ಥೆಟಿಕ್ ಮೇಕ್ಅಪ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ನಟಿಸುವಾಗ ಕೇವಲ ಜ್ಯೂಸ್ ಡಯಟ್ ಮಾಡುತ್ತಿದ್ದರುʼʼ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?
ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.