ಬೆಂಗಳೂರು: ಕಾಲಿವುಡ್ ನಟ ಸಿದ್ಧಾರ್ಥ್ (Actor Siddharth) ತಮ್ಮ ಇತ್ತೀಚಿನ ಚಿತ್ರ ‘ಚಿತ್ತ’ (Chithha Film) ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಸೆಪ್ಟೆಂಬರ್ 28ರಂದು ಕನ್ನಡ ಪರ ಸಂಘಟನೆಯ ಸದಸ್ಯರು (Siddharth walked out press conference in Bengaluru ) ನಟನ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಈ ವೇಳೆ ನಟ ಪತ್ರಿಕಾಗೋಷ್ಠಿಯಿಂದ ಹೊರನಡೆದರು. ಇದಾದ ಬಳಿಕ ನಟ ಪ್ರಕಾಶ್ ರಾಜ್, ಶಿವರಾಜ್ ಕುಮಾರ್ (Prakash Raj, Shiva Rajkumar) ಮುಂತಾದ ಗಣ್ಯರು ಅವರಲ್ಲಿ ಕ್ಷಮೆಯನ್ನೂ ಯಾಚಿಸಿದ್ದರು. ಇದೀಗ ಇನ್ಸ್ಟಾಗ್ರಾಮ್ ಲೈವ್ಗೆ ಬಂದು ‘ಚಿತ್ತ’ ಚಿತ್ರದ ನಿರ್ಮಾಪಕರೂ ಆಗಿರುವ ಸಿದ್ಧಾರ್ಥ್, ತನಗೆ ಅಪಾರ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಮೀಟ್ ಘಟನೆ ಕುರಿತು ಸಿದ್ದಾರ್ಥ್ ಇನ್ಸ್ಟಾಗ್ರಾಮ್ ಲೈವ್ಗೆ ಬಂದು ಈ ಬಗ್ಗೆ ಮಾತನಾಡಿದ್ದಾರೆ. ʻʻನಿರ್ಮಾಪಕನಾಗಿ ಇದೇ ಮೊದಲ ಬಾರಿಗೆ ನನ್ನ ಸಿನಿಮಾವನ್ನು ಥಿಯೇಟರ್ಗಳಲ್ಲಿ ಬಿಡುಗಡೆ ಮಾಡುವ ಮುನ್ನ ಹಲವರಿಗೆ ಪ್ರದರ್ಶಿಸಿದ್ದೇನೆ. ಚೆನ್ನೈ ಹಾಗೂ ಕೊಚ್ಚಿಯಲ್ಲಿ ಸಿನಿಮಾ ಪ್ರದರ್ಶಿಸಿದ್ದೆ. .ಬೆಂಗಳೂರಿನಲ್ಲಿಯೂ ಇಂತಹ ಪ್ರದರ್ಶನ ಮಾಡುವ ಯೋಜನೆ ಇತ್ತು. ಬಿಡುಗಡೆಗೂ ಮುನ್ನ ಸುಮಾರು 2,000 ವಿದ್ಯಾರ್ಥಿಗಳಿಗೆ ಸಿನಿಮಾ ತೋರಿಸುವ ಯೋಜನೆ ಹಾಕಿಕೊಂಡಿದ್ದೆ. ಇಲ್ಲಿಯವರೆಗೆ ಈ ರೀತಿ ಯಾರೂ ಮಾಡಿರಲಿಲ್ಲ. ಆದರೆ ಬಂದ್ ಇದ್ದ ಕಾರಣ ಗೌರವಾರ್ಥವಾಗಿ ನಾವು ಎಲ್ಲವನ್ನೂ ರದ್ದುಗೊಳಿಸಿದ್ದೇವೆ. ನಮಗೆ ಭಾರಿ ನಷ್ಟವಾಗಿದೆ. ಅದನ್ನು ಮೀರಿ ಉತ್ತಮ ಚಿತ್ರವನ್ನು ಅಲ್ಲಿನ ಜನರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗದಿರುವುದು ನಿರಾಸೆ ತಂದಿದೆʼʼಎಂದು ಬೇಸರ ಹೊರ ಹಾಕಿದರು.
ಮಾತು ಮುಂದುವರಿಸಿ “ಸಂವಾದದ ನಂತರ ಮಾಧ್ಯಮಗಳು ಚಲನಚಿತ್ರವನ್ನು ವೀಕ್ಷಿಸಬೇಕಿತ್ತು. ಆದರೆ ಅಲ್ಲಿ ಆದದ್ದೇ ಬೇರೆ. ನೀವೆಲ್ಲರೂ ನೋಡಿದ್ದೀರಿ. ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಚಿತ್ರ ಒಳ್ಳೆಯ ಪ್ರತಿಕ್ರಿಯೆ ಪಡೆಯುತ್ತಿರುವಾಗ, ಈ ರೀತಿಯ ಘಟನೆಯ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ. ನನ್ನ ಚಿತ್ರಕ್ಕೂ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ನನ್ನ ಸಾಮಾಜಿಕ ಜವಾಬ್ದಾರಿ ನಾನು ನನ್ನ ಹಣವನ್ನು ಖರ್ಚು ಮಾಡುವ ಚಲನಚಿತ್ರಗಳಲ್ಲಿ ತೋರಿಸುತ್ತದೆʼʼಎಂದರು.
ಇದನ್ನೂ ಓದಿ: Actor Siddharth; ತಮಿಳು ನಟ ಸಿದ್ಧಾರ್ಥ್ ಸುದ್ದಿಗೋಷ್ಠಿಗೆ ವಿರೋಧ; ಕನ್ನಡಿಗರ ಪರವಾಗಿ ಕ್ಷಮಿಸಿ ಎಂದ ಪ್ರಕಾಶ್ ರಾಜ್!
ಪತ್ರಿಕಾಗೋಷ್ಠಿಯಲ್ಲಿ ಏನಾಯಿತು?
ನಟ ಸಿದ್ಧಾರ್ಥ್ ಅಭಿನಯದ ‘ಚಿತ್ತ’ ಕನ್ನಡದಲ್ಲಿ ‘ಚಿಕ್ಕು’ ಚಿತ್ರದ (Chikku in Kannada) ಪ್ರಚಾರಕ್ಕೆಂದು ನಟ ಬೆಂಗಳೂರಿಗೆ ಬಂದಿದ್ದರು. ಮಲ್ಲೇಶ್ವರದ ಎಸ್ಆರ್ವಿಯಲ್ಲಿ ನಟ ಸಿದ್ಧಾರ್ಥ್ ಸೆ.28ರಂದು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಕರವೇ ಕಾರ್ಯಕರ್ತರು ಸುದ್ದಿಗೋಷ್ಠಿಯನ್ನು ತಡೆದಿದ್ದರು. ನಟ ಕೂಡ ಶಾಂತಯುತವಾಗಿ ಅಲ್ಲಿಂದ ಎದ್ದು ಹೋದರು .ಕಾವೇರಿ ವಿವಾದ ಭುಗಿಲೆದ್ದ ಸಂದರ್ಭದಲ್ಲಿ ತಮಿಳು ಸಿನಿಮಾದ ಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿದ್ಧಾರ್ಥ್ ಬಳಿಯೂ ಕರವೇ ಕಾರ್ಯಕರ್ತರು ಮನವಿ ಮಾಡಿ, ʻʻದಯವಿಟ್ಟು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಮತ್ತೆ ಎಂದಾದರೂ ಕಾರ್ಯಕ್ರಮ ಮಾಡಿಕೊಳ್ಳಿ ಆದರೆ ಈಗ ಬೇಡ. ಇದು ಸೂಕ್ಷ್ಮ ಸಮಯʼʼ ಎಂದು ಹೇಳಿದ್ದರು.
ನಟ ಸಿದ್ಧಾರ್ಥ್, ಕನ್ನಡದಲ್ಲಿಯೇ ಸಿನಿಮಾದ ಕುರಿತು ಮಾತನಾಡಲು ಪ್ರಯತ್ನಿಸಿದರು. ಆದರೆ ಕರವೇ ಕಾರ್ಯಕರ್ತರು ಸಿದ್ಧಾರ್ಥ್ ಮಾತನ್ನು ತಡೆದು, ಯಾರೂ ಸಹ ತಮಿಳು ಸಿನಿಮಾಕ್ಕೆ ಪ್ರಚಾರ ನೀಡಬಾರದೆಂದು ಆಗ್ರಹಿಸಿದರು. ಸಿದ್ಧಾರ್ಥ್ ಸಹ ಕೂಡಲೇ ಎದ್ದು ದಯವಿಟ್ಟು ಎಲ್ಲರೂ ನನ್ನ ಸಿನಿಮಾ ನೋಡಿ ಎಂದು ಹೇಳಿ ಕೈಮುಗಿದು ಹೊರಟರು. ಬಳಿಕ ಶಿವಣ್ಣ ಹಾಗೂ ಪ್ರಕಾಶ್ ರಾಜ್ ಈ ಬಗ್ಗೆ ನಟನಿಗೆ ಕ್ಷಮೆ ಕೂಡ ಕೇಳಿದ್ದಾರೆ.
ಕನ್ನಡದಲ್ಲಿ ಚಿಕ್ಕು
ಏತಕಿ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ‘ಚಿಕ್ಕು’ ಚಿತ್ರದ ವಿತರಣಾ ಹಕ್ಕುಗಳನ್ನು ಕರ್ನಾಟಕದ ಜನಪ್ರಿಯ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಆರ್.ಜಿ. ಸ್ಟುಡಿಯೋಸ್ ಪಡೆದುಕೊಂಡಿದೆ. ‘ಚಿಕ್ಕು’ ಚಿತ್ರದಲ್ಲಿ ಸಿದ್ಧಾರ್ಥ್ (Actor Siddharth) ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲೇ ಇದೊಂದು ವಿಭಿನ್ನ ಚಿತ್ರವಷ್ಟೇ ಅಲ್ಲ, ಇದೊಂದು ಹೊಸ ಮೈಲಿಗಲ್ಲು ಎಂದು ಹೇಳಲಾಗುತ್ತಿದೆ.