ಮುಂಬೈ: ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯದ ಬಹು ನಿರೀಕ್ಷಿತ ‘ಮಿಷನ್ ಮಜ್ನು’ ಚಿತ್ರದ ಟ್ರೈಲರ್ (Mission Majnu Trailer) ಬಿಡುಗಡೆಯಾಗಿದೆ. ಟ್ರೈಲರ್ ಕುರಿತು ಸಿನಿಪ್ರೇಮಿಗಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಟ್ರೈಲರ್ ಬಿಡುಗಡೆಯಾದ ಆರೇ ಗಂಟೆಯಲ್ಲಿ ಒಂದು ಮಿಲಿಯನ್ (10 ಲಕ್ಷ)ಗೂ ಅಧಿಕ ವ್ಯೂವ್ಸ್ ಕಂಡಿದೆ.
ಇನ್‌ಸ್ಟಾಗ್ರಾಂನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಈ ಕುರಿತು ಪೋಸ್ಟ್ ಮಾಡಿದ್ದು, “ನಿಜ ಸಂಗತಿಗಳನ್ನು ಆಧರಿಸಿ ನಿರ್ಮಿಸಿದ ಸ್ಪೈ ಥ್ರಿಲ್ಲರ್ ಮಿಷನ್ ಮಜ್ನು ಸಿನಿಮಾವನ್ನು ಜನವರಿ 20ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಿ” ಎಂದು ಮನವಿ ಮಾಡಿದ್ದಾರೆ. ಇದು ಕೂಡ ಆಲಿಯಾ ಭಟ್ ಅಭಿನಯದ ರಾಜಿ ಮಾದರಿಯ ಸಿನಿಮಾ ಎಂದು ಒಂದಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
1970ರ ನಿಜ ಸಂಗತಿಗಳನ್ನು ಇಟ್ಟುಕೊಂಡು ನಿರ್ದೇಶಕ ಶಂತನು ಭಾಗ್ಚಿ ಸಿನಿಮಾ ಮಾಡಿದ್ದಾರೆ. ಭಾರತದ ಗುಪ್ತಚರ ಸಂಸ್ಥೆ ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್ (RAW)ನ ಗೂಢಚಾರಿಯು (ಸಿದ್ಧಾರ್ಥ್ ಮಲ್ಹೋತ್ರಾ) ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ಪಾಕಿಸ್ತಾನದ ಅಣ್ವಸ್ತ್ರ ತಯಾರಿಕೆ ಕುರಿತು ಮಾಹಿತಿ ಒದಗಿಸುತ್ತಾನೆ. ಇದೇ ವೇಳೆ ಆತ ಯುವತಿಯೊಬ್ಬಳ (ರಶ್ಮಿಕಾ) ಪ್ರೀತಿಯ ಬಲೆಗೆ ಬಿದ್ದು, ಆಕೆಯನ್ನು ಮದುವೆಯಾಗುತ್ತಾನೆ. ಇದಾದ ಬಳಿಕ ಏನಾಗುತ್ತದೆ ಎಂಬುದೇ ಸಿನಿಮಾದ ಸಾರವಾಗಿದ್ದು, ಟ್ರೈಲರ್ ಮೆಚ್ಚುಗೆ ಗಳಿಸಿದೆ.
ಇದನ್ನೂ ಓದಿ | Rashmika Mandanna | ‘ಕೂರ್ಗ್ ವರ್ಷದ ವ್ಯಕ್ತಿ 2022’ ಆಗಿ ಹೊರಹೊಮ್ಮಿದ ರಶ್ಮಿಕಾ ಮಂದಣ್ಣ