ಮುಂಬಯಿ: ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಈಗಾಗಲೇ ‘ಕೇಸರಿ ಬಿಕಿನಿ’ ವಿಚಾರಕ್ಕೆ ವಿವಾದದ ಕೇಂದ್ರ ಬಿಂದುವಾಗಿದೆ. ಸಿನಿಮಾದಲ್ಲಿನ ‘ಬೇಷರಮ್ ರಂಗ್’ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕನಿ ಧರಿಸಿದ್ದಾರೆ. ಕೇಸರಿ ಹಿಂದುಗಳ ಬಣ್ಣ. ಈ ಸಿನಿಮಾದಲ್ಲಿ ಬೇಷರಮ್ ರಂಗ್ ಎಂಬ ಹಾಡಿದೆ. ಬೇಷರಮ್ ಅಂದರೆ ‘ನಾಚಿಕೆ ಇಲ್ಲದ’ ಎಂದು ಅರ್ಥ ಕೊಡುತ್ತದೆ. ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸುವ ಮೂಲಕ, ಈ ಬಣ್ಣ ನಾಚಿಕೆಯಿಲ್ಲದ್ದು ಎಂಬಂತೆ ಬಿಂಬಿಸಲಾಗಿದೆ. ಹಿಂದುಗಳ ಭಾವನೆಗೆ ಧಕ್ಕೆ ತರಲೆಂದೇ ಈ ರೀತಿ ಮಾಡಲಾಗಿದೆ ಎಂದು ಅನೇಕ ಹಿಂದುಪರ ಸಂಘಟನೆಗಳು ಆರೋಪ ಮಾಡುತ್ತಿವೆ. ಪಠಾಣ್ ಚಲನಚಿತ್ರ ಬಹಿಷ್ಕರಿಸುವಂತೆ ಕರೆಕೊಟ್ಟಿದ್ದಾರೆ.
ಹೀಗೆ ದೇಶಾದ್ಯಂತ ಪಠಾಣ್-ಕೇಸರಿ ಬಣ್ಣದ ಬಿಕಿನಿ ವಿವಾದ ಭುಗಿಲೆದ್ದ ಬೆನ್ನಲ್ಲೇ ಕೇಂದ್ರ ಸಚಿವೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿಯವರ ಹಳೇ ವಿಡಿಯೊವೊಂದು ವೈರಲ್ ಆಗುತ್ತಿದೆ. ಸ್ಮೃತಿ ಇರಾನಿ ರಾಜಕೀಯ ಪ್ರವೇಶಕ್ಕೂ ಮೊದಲು ಮಾಡೆಲಿಂಗ್, ಸಿನಿಮಾ ಕ್ಷೇತ್ರದಲ್ಲಿದ್ದವರು. ಅವರು ಈ ಹಿಂದೆ ಮಾಡೆಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಅಂದರೆ 1998ರ ಸಮಯದಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಕೇಸರಿ ಬಣ್ಣದ ತುಂಡುಡುಗೆ ಧರಿಸಿ, ಮಾದಕವಾಗಿ ಕ್ಯಾಟ್ ವಾಕ್ ಮಾಡಿದ ವಿಡಿಯೊ ಇದಾಗಿದೆ. ಈ ವಿಡಿಯೊ ಶೇರ್ ಮಾಡಿದ ತೃಣಮೂಲ ಕಾಂಗ್ರೆಸ್ ನಾಯಕ, ವಕ್ತಾರ ರಿಜು ದತ್ತಾ ‘ನನಗೂ ಕೇಸರಿ ಬಣ್ಣವನ್ನೇ ಬಳಿಯಿರಿ’ ಎಂದು ವ್ಯಂಗ್ಯವಾಗಿ ಕ್ಯಾಪ್ಷನ್ ಬರೆದಿದ್ದಾರೆ. ಆಗ ಸ್ಮೃತಿ ಇರಾನಿ ಕೇಸರಿ ತುಂಡುಡುಗೆ ಹಾಕಿ, ಕ್ಯಾಟ್ ವಾಕ್ ಮಾಡಿದ್ದು ವಿವಾದ ಆಗಿಲ್ಲ ಯಾಕೆ? ಎಂಬುದು ಅವರ ಪ್ರಶ್ನೆ.
ಬಿಜೆಪಿ ತಿರುಗೇಟು
ಟಿಎಂಸಿ ನಾಯಕ ರಿಜು ದತ್ತಾಗೆ ಬಿಜೆಪಿ ನಾಯಕಿ ಲಾಕೆಟ್ ಚಟರ್ಜಿ ತಿರುಗೇಟು ಕೊಟ್ಟಿದ್ದಾರೆ. ‘ಇಂಥ ಸ್ತ್ರೀದ್ವೇಷವಾದಿಯನ್ನು ತೃಣಮೂಲ ಕಾಂಗ್ರೆಸ್ನ ರಾಷ್ಟ್ರೀಯ ವಕ್ತಾರನನ್ನಾಗಿ ನೇಮಕ ಮಾಡಿರುವ ಮಮತಾ ಬ್ಯಾನರ್ಜಿಗೆ ನಾಚಿಕೆಯಾಗಬೇಕು. ಮಹಿಳೆಯರ ಬಗ್ಗೆಯಾಗಲೀ, ಅವರ ಆಯ್ಕೆಯ ಬಗ್ಗೆಯಾಗಲೀ ರಿಜು ದತ್ತಾರಿಗೆ ಕಿಂಚಿತ್ತೂ ಗೌರವ ಇಲ್ಲ. ಇವರೆಲ್ಲ ಯಶಸ್ವಿ ಮಹಿಳೆಯರ ಬಗ್ಗೆ ಅಪಪ್ರಚಾರ ಮಾಡುತ್ತಾರೆ. ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚಲೂ ಇಂಥವರೇ ಕಾರಣರಾಗುತ್ತಾರೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Deepika Padukone | ಪಠಾಣ್ ಕೇಸರಿ ವಿವಾದ : ಸ್ತ್ರೀ ದ್ವೇಷಿಗಳ ವಿರುದ್ಧ ಕಿಡಿಕಾರಿದ ಮೋಹಕ ತಾರೆ ರಮ್ಯಾ, ಟ್ವೀಟ್ ವೈರಲ್!