ಬೆಂಗಳೂರು: ಕಿರುತೆರೆ ನಟಿ, ಹಿಂದಿ ಬಿಗ್ ಬಾಸ್ 17 ರ ಸ್ಪರ್ಧಿ ಸೋನಿಯಾ ಬನ್ಸಾಲ್ ಅವರು (Soniya Bansal) ಜುಲೈ 2 ರಂದು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿ ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜುಲೈ 21 ರ ರಾತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸೋನಿಯಾ ಬಂದಿದ್ದರು. ಅಲ್ಲಿ ಚೆನ್ನಾಗಿಯೇ ಓಡಾಡಿಕೊಂಡಿದ್ದ ನಟಿಗೆ ಏಕಾಏಕಿ ಆರೋಗ್ಯ ಹದಗೆಟ್ಟಿತು. ಮೂಲಗಳ ಪ್ರಕಾರ ನಟಿಗೆ ಹೃದಯಾಘಾತ ಕೂಡ ಆಗಿದೆ ಎನ್ನಲಾಗಿದೆ.
ಪ್ರಶಸ್ತಿ ಸಮಾರಂಭದಲ್ಲಿ ನಟಿ ಆರೋಗ್ಯ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ಮೂಲಗಳ ಪ್ರಕಾರ ನಟಿ, ಕಳೆದ ನಾಲ್ಕು ತಿಂಗಳಿನಿಂದ ಪ್ಯಾನಿಕ್ ಅಟ್ಯಾಕ್‌ಗೆ ಒಳಗಾಗಿದ್ದರು ಎಂದು ವರದಿಯಾಗಿದೆ. ನಟಿ ಮಾನಸಿಕ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರೂ ಎಂದೂ ಹೇಳಲಾಗುತ್ತಿದೆ. ಸೋನಿಯಾ ಇನ್ನೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಟಿಗೆ ಅನೇಕ ದಿನಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎನ್ನಲಾಗಿದೆ. ಈ ಮೊದಲು ಕೂಡ ಆರೋಗ್ಯ ಹದಗೆಡುತ್ತಿತ್ತು. ಆದರೆ ಇದೀಗ ಅದು ತೀವ್ರಗೊಂಡಿತು ಎಂದು ವರದಿಗಳು ಹೇಳುತ್ತಿವೆ.
ಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್‌ನ 17 ನೇ ಸೀಸನ್‌ನಲ್ಲಿ ಕಾಣಿಸಿಕೊಂಡಾಗ ಸೋನಿಯಾ ಬನ್ಸಾಲ್ ಸಾಕಷ್ಟು ಫೇಮ್ ಪಡೆದರು. ಆ ಸೀಸನ್‌ನಲ್ಲಿ ಹಾಸ್ಯನಟ ಮುನಾವರ್ ಫರೂಕಿ ಗೆದ್ದರು ಮತ್ತು ಅಭಿಷೇಕ್ ಕುಮಾರ್ ರನ್ನರ್ ಅಪ್ ಆಗಿದ್ದರು.
ಇದನ್ನೂ ಓದಿ: Actor Suriya: ಕಾಲಿವುಡ್ ನಟ ಸೂರ್ಯ ಸಿನಿಮಾಗಾಗಿ ಈ ಕನ್ನಡ ಸ್ಟಾರ್ ಹೀರೋಗೆ ಬಂದಿತ್ತು ಆಫರ್!
ನಟನೆಗೂ ಮುಂಚೆ ಸೋನಿಯಾ ಬನ್ಸಾಲ್ ಮಾಡೆಲ್ ಆಗಿದ್ದರು. ಬಳಿಕ ಸಂಗೀತ ವೀಡಿಯೊಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ‘ಗೇಮ್ 100 ಕೋಟಿ ಕಾ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ನಟಿ, ನಂತರ ‘ನಾಟಿ ಗ್ಯಾಂಗ್’, ‘ಡಬ್ಕಿ’ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರ ನಟನೆಯ ‘ಶೂರ್ವೀರ್’ ವೆಬ್ ಸರಣಿಯಲ್ಲಿ ಶೀಘ್ರದಲ್ಲಿಯೇ ತೆರೆ ಕಾಣಲಿದೆ. ಇಷ್ಟೇ ಅಲ್ಲದೇ ನಟಿ, ಈ ವರ್ಷ ತೆಲುಗು ಚಿತ್ರಗಳಾದ ತೆಲುಗಿನ ‘ಧೀರ’ ಮತ್ತು ‘ಯೆಸ್ ಬಾಸ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.