Site icon Vistara News

Sonu Sood | ಚಲಿಸುತ್ತಿರುವ ರೈಲಿನ ಫುಟ್‌ಬೋರ್ಡ್‌ನಲ್ಲಿ ಸೋನು ಸೂದ್: ರೈಲ್ವೆ ಪೊಲೀಸ್‌ ಟ್ವೀಟ್‌ನಲ್ಲಿ ಹೇಳಿದ್ದೇನು?

Sonu Sood

ಬೆಂಗಳೂರು : ಬಾಲಿವುಡ್‌ ನಟ ಸೋನು ಸೂದ್ (Sonu Sood) ಅವರು ಇತ್ತೀಚೆಗೆ ರೈಲಿನಲ್ಲಿ ಪ್ರಯಾಣಿಸುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ವಿಡಿಯೊ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಗಳು ಆಗುತ್ತಿದ್ದು, ಸೋನು ಸೂದ್ ಅಭಿಮಾನಿಗಳು ವಿಡಿಯೊ ನೋಡಿ ಸಂತಸ ವ್ಯಕ್ತಪಡಿಸಿದರೆ ರೈಲ್ವೆ ಪೊಲೀಸರು ಎಚ್ಚರಿಕೆಯ ಮೆಸೇಜ್‌ ನೀಡಿದ್ದಾರೆ.

ರೈಲಿನ ಪ್ರಯಾಣವನ್ನು ಆನಂದಿಸುತ್ತಿರುವ ವಿಡಿಯೊವನ್ನು ನಟ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಂತೆ ಚರ್ಚೆಗಳು ಆಗುತ್ತಿವೆ. ಸೋನು ಸೂದ್ ಫುಟ್‌ಬೋರ್ಡ್‌ನಲ್ಲಿ ಕುಳಿತು ಚಲಿಸುತ್ತಿರುವ ರೈಲಿನ ಬಾಗಿಲಿನ ಬಳಿ ಹ್ಯಾಂಡಲ್ ಅನ್ನು ಹಿಡಿದುಕೊಂಡು ಇಣುಕಿ ನೋಡುವುದನ್ನು ಕಾಣಬಹುದು. ಅವರು ವಿಡಿಯೊವನ್ನು ಹಂಚಿಕೊಂಡ ತಕ್ಷಣ, ನೆಟ್ಟಿಗರು ಸೋನು ಅವರನ್ನು ಡೌನ್ ಟು ಅರ್ಥ್ ಎಂದು ಶ್ಲಾಘಿಸಿದ್ದಾರೆ. ಹಾಗೇ ʻʻಸ್ಟಾರ್ ಆದ ನಂತರವೂ ಸರಳವಾಗಿ ಇದ್ದಾರೆ. ಪ್ರತಿ ಕ್ಷಣ ತಮ್ಮ ಲೈಫ್‌ ಅನ್ನು ಆನಂದಿಸುತ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ | Sonu sood | ಶ್ರೀಮಂತನಾದ ಸೋನು ಸೂದ್‌ ಈಗ ರೈತ!

ಆದರೆ ಈ ವಿಡಿಯೊ ರೈಲ್ವೆ ಅಧಿಕಾರಿಗಳ ಕಣ್ಣಿಗೂ ಬಿದ್ದಿದ್ದು ಎಚ್ಚರಿಕೆ ಮತ್ತು ಸಲಹೆಯೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಮುಂಬೈ ವಿಭಾಗದ ರೈಲ್ವೆ ಪೊಲೀಸ್ ಹ್ಯಾಂಡಲ್ ಟ್ವೀಟ್‌ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸದಂತೆ ನಟನಿಗೆ ಸಲಹೆ ನೀಡಿದೆ. ಟ್ವೀಟ್‌ ಮೂಲಕ ʻʻಸೋನು ಸೂದ್ ಫುಟ್‌ಬೋರ್ಡ್‌ನಲ್ಲಿ ಪ್ರಯಾಣಿಸುವುದು ಚಲನಚಿತ್ರಗಳಲ್ಲಿ ‘ಮನರಂಜನೆ’ಯ ಮೂಲವಾಗಿರಬಹುದು. ನಿಜ ಜೀವನದಲ್ಲಿ ಅಲ್ಲ! ನಾವು ಎಲ್ಲಾ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸೋಣ ಮತ್ತು ಎಲ್ಲರಿಗೂ ‘ಹೊಸ ವರ್ಷದ ಶುಭಾಶಯಗಳು” ಎಂದು GRP ಹ್ಯಾಂಡಲ್ ಟ್ವೀಟ್ ಮಾಡಿದೆ.

ಸೋನು ನಗರದಲ್ಲಿ ಪ್ರಯಾಣಿಸಲು ರೈಲಿನಲ್ಲಿ ಹೋಗುತ್ತಿರುವುದು ಇದೇ ಮೊದಲಲ್ಲ. ಕೆಲ ದಿನಗಳ ಹಿಂದೆಯೂ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುವ ವಿಡಿಯೋವನ್ನು ಶೇರ್ ಮಾಡಿದ್ದರು. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಊರುಗಳನ್ನು ತಲುಪಲು ಸಹಾಯ ಮಾಡಿ ದೇಶದ ಗಮನ ಸೆಳೆದಿದ್ದರು. ಸೋನು ಕೊನೆಯದಾಗಿ ಅಕ್ಷಯ್ ಕುಮಾರ್ ಮತ್ತು ಮಾನುಷಿ ಛಿಲ್ಲರ್ ಅಭಿನಯದ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ | Vaani Kapoor | ಬಾಲಿವುಡ್‌ ಬೆಡಗಿ ವಾಣಿ ಕಪೂರ್‌ ಡ್ರೆಸ್‌ ಝಲಕ್‌

Exit mobile version